ಬಂಟ್ವಾಳದಲ್ಲಿ ಶಾಲಾ ಬಸ್‌ ಮೇಲೆ ಉರುಳಿದ ಮರ – ಉಸಿರು ನಿಲ್ಲಿಸಿದ ಪುಟ್ಟ ಬಾಲಕಿ

ಬಂಟ್ವಾಳದಲ್ಲಿ ಶಾಲಾ ಬಸ್‌ ಮೇಲೆ ಉರುಳಿದ ಮರ – ಉಸಿರು ನಿಲ್ಲಿಸಿದ ಪುಟ್ಟ ಬಾಲಕಿ

ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದಲ್ಲಿ ಭಾರಿ ಮಳೆಗೆ ಬೃಹತ್ ಮರವೊಂದು ಶಾಲಾ ಬಸ್ಸಿನ ಮೇಲೆ ಉರುಳಿಬಿದ್ದಿದೆ. ಈ ಭೀಕರ ದುರಂತದಲ್ಲಿ 6 ವರ್ಷದ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ್ದು, ಹಲವು ಮಕ್ಕಳು ಗಾಯಗೊಂಡಿದ್ದಾರೆ.ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಬಸ್ ಮೇಲೆ ಬುಧವಾರ ಸಂಜೆ ಮರ ಉರುಳಿ ದುರಂತ ಸಂಭವಿಸಿದೆ.

ಇದನ್ನೂ ಓದಿ: ZIM ಚೆಂಡಾಡ್ತಾರಾ ಅಭಿ-ವೈಭವ್ – ಗಂಭೀರ್ ಕಣ್ಣಿಗೆ ಭುವಿ ಕಾಣಲಿಲ್ವಾ?

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿ ಚಿರನ್ವಿ (6) ಎಂಬ ಬಾಲಕಿಯನ್ನು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಸಾವನ್ನಪ್ಪಿರುವುದಾಗಿ ಪೋಷಕರು ತಿಳಿಸಿದ್ದಾರೆ. ಬಿಳಿಯೂರಿನ ಚಂದ್ರಶೇಖರ ಮತ್ತು ಅನಿತಾ ಅವರ ಪುತ್ರಿ ಚಿರನ್ವಿ ಎಲ್.ಕೆ.ಜಿ. ಓದುತ್ತಿದ್ದಳು. ಸಂಜೆ ಮಕ್ಕಳನ್ನು ಬಿಡಲು ಎಂದಿನಂತೆಯೇ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಆಂಗ್ಲ ಮಾಧ್ಯಮ ವಿಭಾಗದಿಂದ ಹೊರಟ ಬಸ್, ಹೆದ್ದಾರಿ ಮೂಲಕ ಸಾಗಿ ಮಾಣಿ, ಭರಣಿಕೆರೆ, ಕಲ್ಲೆಟ್ಟಿಗೆ ಹೋಗಿ ಬಳಿಕ ಪೆರ್ನೆಗೆ ಹೋಗಬೇಕಿತ್ತು. ಕೆಲ ಮಕ್ಕಳನ್ನು ಇಳಿಸಿದ ಬಳಿಕ ಬರಿಮಾರು ಗ್ರಾಮದ ಕಲ್ಲೆಟ್ಟಿ ಎಂಬಲ್ಲಿನ ಶ್ರೀ ಕಾನಲ್ತಾಯ ದೈವಸ್ಥಾನದ ಬದಿಯ ಮರ, ಶಾಲಾ ಬಸ್ ಮೇಲೆ ಬಿದ್ದಿದೆ. ಇದರಿಂದ ಬಸ್ ಸಂಪೂರ್ಣ ಜಖಂಗೊಂಡಿದೆ. ಇದರಿಂದ ಒಬ್ಬ ಬಾಲಕಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾಳೆ.

ಈ ಕುರಿತು ಬಂಟ್ವಾಳ ತಹಸೀಲ್ದಾರ್ ಮಂಜುನಾಥ್ ಪ್ರತಿಕ್ರಿಯಿಸಿ, ಗಾಳಿಯಿಂದಾಗಿ ಶಾಲಾ ಬಸ್ ಮೇಲೆ ಮರ ಬಿದ್ದಿದೆ. ಮುಂಭಾಗದಲ್ಲಿ ಕುಳಿತಿದ್ದ ಪುಟ್ಟ ಬಾಲಕಿ ಸಾವನ್ನಪ್ಪಿದ್ದಾಳೆ. ಗಾಯಗೊಂಡ ಒಂದು ಮಗು ತುಂಬೆಯಲ್ಲಿ ಹಾಗೂ ಮೂವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Kishor KV

Leave a Reply

Your email address will not be published. Required fields are marked *