ಬ್ಯಾಂಕ್ ಸಿಬ್ಬಂದಿಗೆ ಎಲ್ಲಾ ವಾರದಲ್ಲೂ 2 ದಿನ ರಜೆ.. ನಿತ್ಯ 40 ನಿಮಿಷ ಹೆಚ್ಚು ಕೆಲಸ?
ನವದೆಹಲಿ: ಐಟಿ ಕ್ಷೇತ್ರದಲ್ಲಿರುವಂತೆ ಬ್ಯಾಂಕ್ ವಲಯಕ್ಕೂ ವಾರಕ್ಕೆರಡು ವೀಕ್ ಆಫ್ ಬರಲಿದೆ. ಸರ್ಕಾರಿ ಬ್ಯಾಂಕುಗಳು ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡುವ ಅವಕಾಶ ಪಡೆಯಲಿವೆ. ಅಂದರೆ ವಾರದಲ್ಲಿ ಎರಡು ನಿಯಮಿತ ರಜಾ ದಿನ ಸಾಧ್ಯತೆ ಇದೆ.
ಬ್ಯಾಂಕ್ ನೌಕರರಿಗೆ ವಾರಕ್ಕೆ ಎರಡು ದಿನ ರಜೆ ನೀಡುವ ಕುರಿತು ಜು.28ರ ಶುಕ್ರವಾರ ಭಾರತೀಯ ಬ್ಯಾಂಕಿಂಗ್ ಸಂಘ (ಐಬಿಎ) ಹಾಗೂ ಬ್ಯಾಂಕ್ ನೌಕರರ ಒಕ್ಕೂಟಗಳ ಸಂಯುಕ್ತ ವೇದಿಕೆ (ಯುಎಫ್‌ಬಿಯು) ಮಧ್ಯೆ ಮಹತ್ವದ ಸಭೆ ನಡೆಯಲಿದ್ದು, ಅಂದು ಅಂತಿಮ ನಿರ್ಧಾರ ಹೊರಬೀಳುವ ಸಂಭವವಿದೆ.
ಇದನ್ನೂ ಓದಿ: ಸಸ್ಯಕಾಶಿಯಲ್ಲಿ ಹೂಗಳ ಹಬ್ಬಕ್ಕೆ ಕೌಂಟ್‌ಡೌನ್ – ಆಗಸ್ಟ್ 4 ರಿಂದ ಫ್ಲವರ್ ಶೋ
ಇಲ್ಲಿವರೆಗೆ ಭಾನುವಾರ ಎಲ್ಲ ಬ್ಯಾಂಕುಗಳಿಗೂ ರಜೆ ಇದೆ. ಇದರ ಜತೆಗೆ 2ನೇ ಹಾಗೂ 4ನೇ ಶನಿವಾರದಂದು ಕೂಡ ರಜೆ ಸಿಗುತ್ತಿದೆ. ತಿಂಗಳಲ್ಲಿ 2 ಶನಿವಾರ ಬ್ಯಾಂಕಿಂಗ್ ಸೇವೆ ಲಭ್ಯವಿದೆ. ಯುಎಫ್‌ಬಿಯು ಹಾಗೂ ಐಬಿಎ ಸಭೆಯಲ್ಲಿ ವಾರದಲ್ಲಿ 2 ದಿನ ರಜೆ ನೀಡಲು ಅನುಮೋದನೆ ಸಿಕ್ಕರೆ ಶನಿವಾರ ಮತ್ತು ಭಾನುವಾರ ಸರ್ಕಾರಿ ಬ್ಯಾಂಕುಗಳಿಗೆ ರಜೆ ಸಿಗಲಿದೆ.
ಬ್ಯಾಂಕ್ ಸಿಬ್ಬಂದಿಗೆ ವಾರದಲ್ಲಿ ಎರಡು ದಿನ ರಜೆ ಸಿಕ್ಕರೆ. ರಜಾ ದಿನದ ಕೆಲಸಗಳನ್ನು ವಾರದ ಐದು ದಿನ ಹೆಚ್ಚುವರಿಯಾಗಿ 40 ನಿಮಿಷ ಕೆಲಸ ಮಾಡಬೇಕಾಗುತ್ತದೆ. ಬ್ಯಾಂಕುಗಳಲ್ಲಿ ಐದು ದಿನ ಕಾರ್ಯನಿರ್ವಹಣಾ ಅವಧಿ ಪರಿಚಯಿಸುವ ವಿಚಾರ ಪರಿಶೀಲನೆಯಲ್ಲಿದೆ ಎಂದು ಬ್ಯಾಂಕಿಂಗ್ ಸಂಘ ಮಾಹಿತಿ ನೀಡಿದೆ. ಈ ಪ್ರಕ್ರಿಯೆಯನ್ನು ವಿಳಂಬ ಮಾಡದೆ ಜಾರಿಗೆ ತರಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಬ್ಯಾಂಕ್ ನೌಕರರ ಸಂಯುಕ್ತ ವೇದಿಕೆ ತಿಳಿಸಿದೆ.
5 ದಿನ ಕರ್ತವ್ಯಾವಧಿ ಮಾತ್ರವಲ್ಲದೆ, ವೇತನ ಹೆಚ್ಚಳ ಹಾಗೂ ನಿವೃತ್ತ ನೌಕರರಿಗೆ ಸಮೂಹ ಆರೋಗ್ಯ ವಿಮಾ ಪಾಲಿಸಿಯ ಅಗತ್ಯ ಕುರಿತಂತೆಯೂ ಜು.28ರ ಸಭೆಯಲ್ಲಿ ಚರ್ಚೆಯಾಗಲಿದೆ. ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ದಲ್ಲಿ ಕೇಂದ್ರ ಸರ್ಕಾರ ವಾರಕ್ಕೆ ಐದು ದಿನದ ಕಾರ್ಯನಿರ್ವಹಣಾ ಅವಧಿಯನ್ನು ಜಾರಿಗೊಳಿಸಿದೆ. ಆ ಬಳಿಕ ಬ್ಯಾಂಕಿಂಗ್ ವಲಯದಲ್ಲೂ ಅದೇ ಪದ್ಧತಿ ಪರಿಚಯಿಸಬೇಕು ಎಂಬ ಕೂಗು ಆರಂಭವಾಗಿತ್ತು. ಇದಕ್ಕೆ ತನ್ನ ಯಾವುದೇ ಆಕ್ಷೇಪ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಈ ಹಿಂದೆಯೇ ಹೇಳಿತ್ತು.