ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್ – ಬಂಗ್ಲೆಗುಡ್ಡೆಯಲ್ಲಿ ಐದು ಅಸ್ಥಿಪಂಜರ ಪತ್ತೆ

ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್ – ಬಂಗ್ಲೆಗುಡ್ಡೆಯಲ್ಲಿ ಐದು ಅಸ್ಥಿಪಂಜರ ಪತ್ತೆ

ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಂಗ್ಲೆಗುಡ್ಡೆ ಮೀಸಲು ಅರಣ್ಯದಲ್ಲಿ ಎಸ್‌ಐಟಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಐದು ಕಡೆ ಮಾನವ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ. ವಿಧಿವಿಜ್ಞಾನ ತಂಡವು ಮೂಳೆ ಮತ್ತು ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿದ್ದಾರೆ.  ವಿಶೇಷ ತನಿಖಾ ದಳದ ಮೂರು ಪ್ರತ್ಯೇಕ ತಂಡಗಳು ಐದು ವಿಭಿನ್ನ ಸ್ಥಳಗಳಲ್ಲಿ ಮಾನವ ಅಸ್ಥಿಪಂಜರಗಳ ಅವಶೇಷಗಳನ್ನು ಪತ್ತೆ ಹಚ್ಚಿವೆ.

ಇದನ್ನೂ ಓದಿ:  ಮಗುವಿನ ಪಾಲಿಗೆ ದೇವರಾದ ಶ್ವಾನ! – ನೀರಿಗೆ ಬೀಳುತ್ತಿದ್ದ ಮಗುವನ್ನು ಕಾಪಾಡಿದ ನಾಯಿ!

ಎಸ್‌ಐಟಿ ತಂಡವು ತನಿಖಾಧಿಕಾರಿ ಜಿತೇಂದ್ರ ದಯಾಮಾ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆಯನ್ನು ಹಗಲು-ರಾತ್ರಿ ನಡೆಸುತ್ತಿದೆ. ಅರಣ್ಯವನ್ನು ಮೂರು ಭಾಗಗಳಾಗಿ ವಿಂಗಡಿಸಿ ಏಕಕಾಲದಲ್ಲಿ ಶೋಧ ಕಾರ್ಯ ನಡೆಸಲಾಯಿತು. ಈ ಸಂದರ್ಭದಲ್ಲಿ, ಭೂಮಿಯ ಮೇಲ್ಭಾಗದಲ್ಲಿ ಹರಡಿರುವ ಅಸ್ಥಿಪಂಜರಗಳ ಅವಶೇಷಗಳು ಮತ್ತು ಮಾನವ ದೇಹದ ಕೆಲವು ಭಾಗಗಳು ಪತ್ತೆಯಾಗಿವೆ. ಊಟದ ವಿರಾಮವನ್ನೂ ಪಡೆಯದೆ ನಿರಂತರವಾಗಿ ಮೂರು ಗಂಟೆಗಳ ಕಾಲ ನಡೆದ ಈ ಶೋಧ ಕಾರ್ಯದಲ್ಲಿ ಮೂಳೆಗಳ ಅವಶೇಷಗಳು ದೊರೆತ ಎಲ್ಲಾ ಸ್ಥಳಗಳಲ್ಲೂ ಮಹಜರು ಪ್ರಕ್ರಿಯೆ ನಡೆಸಲಾಯಿತು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ವಿಧಿವಿಜ್ಞಾನ ತಂಡ  ಪತ್ತೆಯಾದ ಮೂಳೆಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಿತು. ಶೋಧದ ಸಮಯದಲ್ಲಿ, ಮೂಳೆಗಳು ಪತ್ತೆಯಾದ ಪ್ರತಿ ಜಾಗದಿಂದ ಮಣ್ಣಿನ ಮಾದರಿಗಳನ್ನು ಪಿವಿಸಿ ಪೈಪ್‌ಗಳಲ್ಲಿ ಸಂಗ್ರಹಿಸಲಾಯಿತು. ಮಣ್ಣಿನ ಮಾದರಿಗಳು ಮತ್ತು ಮೂಳೆಗಳನ್ನು ಫೋರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗಿದೆ. ಈ ಮಾದರಿಗಳ ವೈಜ್ಞಾನಿಕ ವಿಶ್ಲೇಷಣೆಯಿಂದ, ಶವಗಳು ಕೊಳೆತಿದ್ದಾವೆಯೇ ಮತ್ತು ಆ ಸ್ಥಳಗಳಲ್ಲಿ ಶವಗಳನ್ನು ಹೂಳಲಾಗಿದೆಯೇ ಎಂಬುದು ದೃಢಪಡಲಿದೆ.

Kishor KV