23 ವರ್ಷ.. 10 ವಿಕೆಟ್.. ಬಾಂಗ್ಲಾ ಕೇಕೆ – ಪಾಕಿಸ್ತಾನದ ಕ್ರಿಕೆಟ್ ಕೂಡ ಅಧೋಗತಿ
ಸೋಲಿಗೆ ಭಾರತ ಕಾರಣ ಎಂದಿದ್ದೇಕೆ?
ಆರ್ಥಿಕವಾಗಿ ಅಧೋಗತಿಗೆ ಸಿಲುಕಿರುವ ಪಾಕಿಸ್ತಾನದಲ್ಲಿ ಏನೊಂದೂ ಸರಿ ಇಲ್ಲ ಅನ್ನೋದು ಎಲ್ರಿಗೂ ಗೊತ್ತಿರೋ ವಿಚಾರವೇ. ಕಂಡ ಕಂಡ ದೇಶಗಳ ಬಳಿ ಸಾಲಕ್ಕೆ ಕೈ ಚಾಚುತ್ತಿರೋ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ದಿನ ದಿನಕ್ಕೂ ತನ್ನ ಬೆಲೆ ಕಳೆದುಕೊಳ್ಳುತ್ತಿದೆ. ಇಂಥಾ ಪರಿಸ್ಥಿತಿ ನಡುವೆ ಕ್ರಿಕೆಟ್ನ ಅಧಃಪತನ ಕೂಡ ಶುರುವಾಗಿದೆ. ಟಿ-20 ವಿಶ್ವಕಪ್ನಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಪಾಕಿಸ್ತಾನ ತಂಡ ಇದೀಗ ತವರಿನಲ್ಲೇ ಬಾಂಗ್ಲಾ ವಿರುದ್ಧ ಮಂಡಿಯೂರಿದೆ. ಟಿ20 ವಿಶ್ವಕಪ್ ನಂತರ ಆಡಿದ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸೋತು ಜಾಗತಿಕ ಮಟ್ಟದಲ್ಲಿ ಅವಮಾನಕ್ಕೆ ಗುರಿಯಾಗಿದೆ. ಬಾಂಗ್ಲಾ ಟೈಗರ್ಸ್ ಪಾಕಿಸ್ತಾನದ ನೆಲದಲ್ಲಿ ಚೊಚ್ಚಲ ಗೆಲುವು ಸಾಧಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇಲ್ಲಿ ಪಾಕಿಸ್ತಾನ ಸೋಲ್ತು ಅನ್ನೋದಕ್ಕಿಂತ ಸೋಲಿನ ನಂತರ ಆದ ಪರಿಣಾಮಗಳೇ ಸದ್ದು ಮಾಡ್ತಿವೆ. ಬಾಂಗ್ಲಾ ವಿರುದ್ಧ ಮಣ್ಣು ಮುಕ್ಕಿರೋ ಪಾಕ್ ತನ್ನ ಸೋಲಿಗೆ ಭಾರತವೇ ಹೊಣೆ ಅನ್ನೋ ಹೊಸ ವರಸೆ ತೆಗೆದಿದೆ. ಪಂದ್ಯ ನಡೆದಿದ್ದು ಪಾಕಿಸ್ತಾನ ಮತ್ತು ಬಾಂಗ್ಲಾ ನಡುವೆ. ಭಾರತ ಹೇಗೆ ಸೋಲಿಗೆ ಕಾರಣವಾಗುತ್ತೆ? ಏನಿದು ಪಾಕಿಗಳ ಮೊಂಡುವಾದ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕೊಹ್ಲಿ-ರೋಹಿತ್ಗೆ ನೋ ರೆಸ್ಟ್ – ಬೂಮ್ರಾ ಬಗ್ಗೆ ಬಾಸ್ ಸೈಲೆಂಟ್
ಪಾಕಿಸ್ತಾನ ಮತ್ತು ಬಾಂಗ್ಲಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾ ಟೈಗರ್ಸ್ ಗೆಲ್ಲುವ ಮೂಲಕ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಈವರೆಗೂ ಪಾಕ್ ನೆಲದಲ್ಲಿ ಬಾಂಗ್ಲಾ ಗೆದ್ದ ಇತಿಹಾಸವೇ ಇರಲಿಲ್ಲ. ಇದೀಗ ಆತಿಥೇಯರ ನೆಲದಲ್ಲಿ ಚೊಚ್ಚಲ ಗೆಲುವು ಸಾಧಿಸಿದೆ. ಈವರೆಗೆ ಉಭಯ ರಾಷ್ಟ್ರಗಳು 13 ಟೆಸ್ಟ್ ಪಂದ್ಯಗಳಲ್ಲಿ ಆಡಿತ್ತಾದರೂ ಒಂದರಲ್ಲೂ ಗೆದ್ದಿರಲಿಲ್ಲ. ಇದೀಗ 14ನೇ ಟೆಸ್ಟ್ ಪಂದ್ಯದಲ್ಲಿ ಗೆದ್ದು ಅಮೋಘ ಸಾಧನೆ ಮಾಡಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಮೇಲೆ ಸವಾರಿ ನಡೆಸಿದ ಬಾಂಗ್ಲಾ ಹುಲಿಗಳ ಪಡೆ 10 ವಿಕೆಟ್ಗಳ ಐತಿಹಾಸಿಕ ಜಯ ದಾಖಲಿಸಿ ಬೀಗಿದೆ. ಈ ಸೋಲಿನ ಬಳಿಕ ಪಾಕಿಸ್ತಾನದಲ್ಲಿ ಕ್ರಿಕೆಟ್ ಅಧೋಗತಿಗೆ ತಲುಪಿತಾ ಎಂಬ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಕಳೆದ ಮೂರು ವರ್ಷಗಳಿಂದ ಪಾಕಿಸ್ತಾನ ಕ್ರಿಕೆಟ್ ತಂಡದ ಫ್ಲ್ಯಾಪ್ ಶೋ.
ಪಾಕ್ ಕ್ರಿಕೆಟ್ ಅಧೋಗತಿ!
ಪಾಕಿಸ್ತಾನ ಮತ್ತು ಬಾಂಗ್ಲಾ ನಡುವಿನ ಮೊದಲ ಟೆಸ್ಟ್ ಸರಣಿಯಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಒಟ್ಟು 448 ರನ್ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಕೈಯಲ್ಲಿ ಇನ್ನೂ 6 ವಿಕೆಟ್ ಇದ್ದರೂ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಆದರೆ ಬಾಂಗ್ಲಾದೇಶ ಸೈಲೆಂಟಾಗೇ ಅಖಾಡಕ್ಕೆ ಇಳಿದಿತ್ತು. ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಬಾಂಗ್ಲಾ ಪರ ಮುಶ್ಫೀಕರ್ ರಹೀಮ್ 191 ರನ್ ಹಾಗೂ ಶದ್ಮಾನ್ ಇಸ್ಲಾಮ್ 93, ಮೆಹೆದಿ ಹಸನ್ ಮಿರಾಜ್ 77 ರನ್ಗಳ ನೆರವಿನಿಂದ 565 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಈ ಬೃಹತ್ ಮೊತ್ತದೊಂದಿಗೆ ಬಾಂಗ್ಲಾದೇಶ 117 ರನ್ಗಳ ಮುನ್ನಡೆ ಗಳಿಸಿತ್ತು. ಮೊದಲ ಇನ್ನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ಗೆ ಮೈದಾನಕ್ಕಿಳಿದ ಪಾಕಿಸ್ತಾನ ಹೀನಾಯ ಪ್ರದರ್ಶನ ನೀಡಿತು. 4ನೇ ದಿನ 10 ಓವರ್ಗಳಲ್ಲಿ 23ಕ್ಕೆ 1 ವಿಕೆಟ್ ಕಳೆದುಕೊಂಡಿದ್ದ ಪಾಕಿಸ್ತಾನ ಕೊನೆ ದಿನ ಮೊದಲ ಸೆಷನ್ನಲ್ಲೇ 55.5 ಓವರ್ಗಳಲ್ಲೇ 146ಕ್ಕೆ ಆಲೌಟ್ ಆಯಿತು. 30ರನ್ಗಳ ಸಾಧಾರಣ ಮೊತ್ತವನ್ನು ಬಾಂಗ್ಲಾದೇಶ 6.3 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 30 ರನ್ಗಳಿಸಿ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಇತಿಹಾಸ ನಿರ್ಮಿಸಿತು. ಇದು ಪಾಕ್ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಬಾಂಗ್ಲಾದೇಶಕ್ಕೆ ಸಿಕ್ಕಂತಹ ಮೊದಲ ಗೆಲುವು ಅನ್ನೋದೇ ಅಚ್ಚರಿ. ಟೆಸ್ಟ್ ಕ್ರಿಕೆಟ್ ಮಾತ್ರವಲ್ಲ ಎಲ್ಲಾ ಮಾದರಿಯಲ್ಲೂ ಪಾಕಿಸ್ತಾನ ತಂಡದ ಪ್ರದರ್ಶನ ಹೀನಾಯವಾಗಿದೆ. ಇತ್ತೀಚೆಗೆ ನಡೆದಿದ್ದ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲೂ ಗ್ರೂಪ್ ಹಂತದಲ್ಲೇ ತನ್ನ ಹೋರಾಟ ಅಂತ್ಯಗೊಳಿಸಿತ್ತು. ಅದರಲ್ಲೇ ಕ್ರಿಕೆಟ್ ಕೂಸು ಅಮೆರಿಕ ಎದುರು ಮುಗ್ಗರಿಸಿ ಸ್ಪರ್ಧೆಯಿಂದ ಹೊರಬಿದ್ದಿತ್ತು. ವಿಶ್ವಕಪ್ಗೂ ಮುನ್ನ ನಡೆದ ಟಿ20 ಸರಣಿಯಲ್ಲಿ ಇಂಗ್ಲೆಂಡ್ ಎದುರು 0-2 ಅಂತರದಲ್ಲಿ ಸೋತಿದ್ದ ಪಾಕ್ ತಂಡ, ನ್ಯೂಜಿಲೆಂಡ್ನ ಎ ತಂಡದ ಸರಣಿಯಲ್ಲಿ 2-2ರ ಡ್ರಾ ಸಾಧಿಸಿತ್ತು. ಕಳೆದ ಮೇ ತಿಂಗಳಲ್ಲಿ ಐರ್ಲೆಂಡ್ ವಿರುದ್ಧವೂ ಟಿ20 ಪಂದ್ಯ ಸೋತು ಕಂಗಾಲಾಗಿತ್ತು. ಜನವರಿಯಲ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿ ನಡೆದಿದ್ದ 5 ಪಂದ್ಯಗಳ ಟಿ20 ಸರಣಿಯಲ್ಲಿ 1-4 ಅಂತರದ ಹೀನಾಯ ಸೋಲು, 2023ರ ಐಸಿಸಿ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ ಬಾಬರ್ ಆಝಮ್ ಸಾರಥ್ಯದಲ್ಲಿ ಸೆಮಿಫೈನಲ್ ತಲುಪಿ ಅನುಭವಿಸಿದ್ದ ನಿರಾಸೆ ಹೊರತಾಗಿ ಗಾಯದ ಮೇಲೆ ಬರೆ ಎಂಬಂತೆ ಟೆಸ್ಟ್ ಕ್ರಿಕೆಟ್ನಲ್ಲಿ ಅದರಲ್ಲೂ ತವರಿನಲ್ಲೇ 2021ರ ಬಳಿಕ ಒಂದು ಪಂದ್ಯವನ್ನೂ ಗೆಲ್ಲಲು ಸಾಧ್ಯವಾಗದೇ ಇರುವುದು ಪಾಕಿಸ್ತಾನದ ಕ್ರಿಕೆಟ್ನ ಅಧೋಗತಿಗೆ ಹಿಡಿದ ಕೈಗನ್ನಡಿಯಾಗಿದೆ.
ಸದ್ಯ ಮೊದಲ ಟೆಸ್ಟ್ ಪಂದ್ಯವನ್ನ ಗೆಲ್ಲುವ ಮೂಲಕ ಬಾಂಗ್ಲಾದೇಶ ಟೆಸ್ಟ್ ಮಾನ್ಯತೆ ಪಡೆದ 23 ವರ್ಷಗಳ ನಂತರ ಪಾಕಿಸ್ತಾನದ ವಿರುದ್ಧ ಮೊದಲು ಗೆಲುವು ಪಡೆದಿದೆ. ಇದರ ಜೊತೆಗೆ ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ತಂಡವನ್ನು ಅವರ ನೆಲದಲ್ಲೇ 10 ವಿಕೆಟ್ಗಳಿಂದ ಮಣಿಸಿದ ಮೊದಲ ತಂಡ ಎಂಬ ವಿಶ್ವದಾಖಲೆಗೆ ಪಾತ್ರವಾಗಿದೆ. ಇನ್ನು ಸೋಲಿನಿಂದ 2023-25ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ಗಳ ಪಟ್ಟಿಯಲ್ಲಿ ಪಾಕಿಸ್ತಾನ 7ನೇ ಸ್ಥಾನದಿಂದ 8ನೇ ಸ್ಥಾನಕ್ಕೆ ಕುಸಿದಿದೆ. ಪಾಕಿಸ್ತಾನ ಈ ಆವೃತ್ತಿಯಲ್ಲಿ ಆಡಿದ 6 ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆದ್ದಿದ್ದು, 4 ಪಂದ್ಯಗಳಲ್ಲಿ ಸೋತಿದೆ. ಪಾಕ್ ಎದುರು ಐತಿಹಾಸಿಕ ದಾಖಲೆಯ ನಂತರ ವಿಶ್ವ ಟೆಸ್ ಚಾಂಪಿಯನ್ಶಿಪ್ ಪಾಯಿಂಟ್ಸ್ ಟೇಬಲ್ನಲ್ಲಿ 6ನೇ ಸ್ಥಾನಕ್ಕೇರಿದೆ. ಇನ್ನು ಬಾಂಗ್ಲಾ ಎದುರಿನ ಪಾಕ್ ಸೋಲು ಕ್ರಿಕೆಟ್ ಜಗತ್ತಿನಲ್ಲಿ ನಾನಾ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ. ಅದ್ರಲ್ಲೂ ಪಾಕ್ನ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ತಮ್ಮ ತಂಡದ ಸೋಲಿನ ಹಿಂದೆ ಟೀಂ ಇಂಡಿಯಾ ಕೈವಾಡವಿದೆ ಅಂದಿದ್ದಾರೆ. ಏಷ್ಯಾ ಕಪ್ ಸಮಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್ಗಳು ನಮ್ಮ ವೇಗಿಗಳನ್ನು ಮನಸೋ ಇಚ್ಛೆ ದಂಡಿಸಿದರು, ಆಗಿನಿಂದಲೇ ನಮ್ಮ ಬೌಲರ್ಗಳ ಖ್ಯಾತಿಯ ಅಂತ್ಯ ಪ್ರಾರಂಭವಾಯಿತು ಎಂದಿದ್ದಾರೆ. ಹಾಗೇ ಕೆವಿನ್ ಪೀಟರ್ಸನ್ ಕೂಡ ಅಚ್ಚರಿ ಹೊರ ಹಾಕಿದ್ದಾರೆ. ಪಾಕಿಸ್ತಾನದ ಕ್ರಿಕೆಟ್ಗೆ ಏನಾಗಿದೆ? ನಾನು ಪಾಕಿಸ್ತಾನ್ ಸೂಪರ್ ಲೀಗ್ ಆಡಿದ ಸಂದರ್ಭದಲ್ಲಿ ಅಲ್ಲಿನ ಕ್ರಿಕೆಟ್ ಗುಣಮಟ್ಟ ಅದ್ಭುತವಾಗಿತ್ತು. ಆಟಗಾರರಲ್ಲಿ ಕ್ರಿಕೆಟ್ ಬಗ್ಗೆ ಅದ್ಭುತ ಶಿಸ್ತನ್ನು ಕಂಡಿದ್ದೆ. ಯುವ ಆಟಗಾರರು ಮೋಡಿ ಮಾಡುವಂತಹ ಪ್ರದರ್ಶನಗಳನ್ನು ನೀಡುತ್ತಿದ್ದರು. ಆದರೆ, ಈಗ ಅಲ್ಲೇನಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.