ಪಾಕ್‌ ರೀತಿಯಲ್ಲೇ ಕ್ಯಾತೆ ತೆಗೆದ ಬಾಂಗ್ಲಾ – ಬಾಂಗ್ಲಾದಲ್ಲಿ IPL ಪ್ರಸಾರ ಬ್ಯಾನ್

ಪಾಕ್‌ ರೀತಿಯಲ್ಲೇ ಕ್ಯಾತೆ ತೆಗೆದ ಬಾಂಗ್ಲಾ – ಬಾಂಗ್ಲಾದಲ್ಲಿ IPL ಪ್ರಸಾರ ಬ್ಯಾನ್

ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಯನ್ನು ಖಂಡಿಸಿ  ವೇಗಿ ಮುಸ್ತಫಿಜುರ್​ ರೆಹಮಾನ್​ಗೆ IPLನಿಂದ ಗೇಟ್​ಪಾಸ್​ ನೀಡಲಾಗಿದೆ. ಇದ್ರ ಬೆನ್ನಲ್ಲೇ ಬಾಂಗ್ಲಾದಲ್ಲಿ IPL ಪಂದ್ಯಗಳನ್ನು ಟೆಲಿಕಾಸ್ಟ್ ಬ್ಯಾನ್​ ಮಾಡಲು ಬಾಂಗ್ಲಾದೇಶ ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: ರಾಜಸ್ಥಾನ್ ರಾಯಲ್ಸ್ ಕ್ಯಾಪ್ಟನ್ ರವೀಂದ್ರ ಜಡೇಜಾ – ಜಡ್ಡುಗೆ ಪಟ್ಟ ಕಟ್ಟಲು RR ತಯಾರಿ

ಹೌದು, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಕ್ರೂರ ಹಿಂಸಾಚಾರದಿಂದಾಗಿ ಮುಸ್ತಾಫಿಝುರ್ ರೆಹಮಾನ್ ಅವರನ್ನು ಐಪಿಎಲ್ ತಂಡಕ್ಕೆ ಸೇರಿಸಿಕೊಳ್ಳುವುದರ ವಿರುದ್ಧ ಭಾರತದಲ್ಲಿ ವಿರೋಧ ವ್ಯಕ್ತವಾಗಿತ್ತು. ಈ ಪ್ರತಿಭಟನೆ ಹಿಂಸಾತ್ಮಕ ತಿರುವು ಪಡೆಯುವುದನ್ನು ಗಮನಿಸಿದ ಬಿಸಿಸಿಐ, ಐಪಿಎಲ್ ಹರಾಜಿನಲ್ಲಿ 9.2 ಕೋಟಿ ರೂ.ಗೆ ಖರೀದಿಸಿದ್ದ ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡುವಂತೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಕ್ಕೆ ಆದೇಶಿಸಿತು. ಬಿಸಿಸಿಐ ಆದೇಶದ ನಂತರ ರೆಹಮಾನ್ ಬಿಡುಗಡೆಯ ಬಗ್ಗೆ ಕೆಕೆಆರ್ ಮಾಹಿತಿ ನೀಡಿದೆ.

ಇದೀಗ ಐಪಿಎಲ್‌ ಪಂದ್ಯಗಳನ್ನ ಪ್ರಸಾರ ಮಾಡದೇ ಇರಲು ಬಾಂಗ್ಲಾ ಸರ್ಕಾರ ನಿರ್ಧಾರ ಮಾಡಿದೆ. ತನ್ನ ಕ್ರಿಕೆಟಿಗ ಮುಸ್ತಾಫಿಝುರ್ ರೆಹಮಾನ್ ಅವರನ್ನು ಐಪಿಎಲ್‌ ಟೂರ್ನಿಯಿಂದ ತೆಗೆದುಹಾಕಿದ್ದರಿಂದ ಅಸಮಾಧಾನಗೊಂಡ ಬಾಂಗ್ಲಾದೇಶ ಸರ್ಕಾರ, ಇದಕ್ಕೆ ಪ್ರತಿಯಾಗಿ ಐಪಿಎಲ್ ಪಂದ್ಯಗಳ ಪ್ರಸಾರವನ್ನು ನಿಷೇಧಿಸಿದೆ. ಬಾಂಗ್ಲಾದೇಶದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸೋಮವಾರ (ಜನವರಿ 5) ಎಲ್ಲಾ ಸ್ಥಳೀಯ ಟಿವಿಗಳಿಗೆ ಪತ್ರವೊಂದನ್ನು ಕಳುಹಿಸಿದ್ದು, ಐಪಿಎಲ್ ಪ್ರಸಾರದ ನಿಷೇಧದ ಬಗ್ಗೆ ತಿಳಿಸಿದೆ.

ಬಾಂಗ್ಲಾದೇಶ ಸರ್ಕಾರ ನಿಷೇಧ ಹೇರಿದ ಪತ್ರದಲ್ಲಿ ಏನಿದೆ?

ಬಾಂಗ್ಲಾದೇಶದ ವಾರ್ತಾಪತ್ರಿಕೆ ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ಪ್ರಕಾರ, ಬಾಂಗ್ಲಾದೇಶದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ದೇಶದ ಎಲ್ಲಾ ಟಿವಿ ಚಾನೆಲ್‌ಗಳಿಗೆ ಪತ್ರ ಕಳುಹಿಸಿದೆ. ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟಿಗ ಮುಸ್ತಾಫಿಝರ್ ರೆಹಮಾನ್ ಅವರನ್ನು ಐಪಿಎಲ್‌ ಟೂರ್ನಿಯ ಕೋಲ್ಕತ್ತಾ ನೈಟ್ ರೈಡರ್ಸ್‌ನಿಂದ ತೆಗೆದುಹಾಕುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ನಿರ್ಧಾರವನ್ನು ಗಮನಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ನಿರ್ಧಾರಕ್ಕೆ ಯಾವುದೇ ಸರಿಯಾದ ಕಾರಣವನ್ನು ನೀಡಲಾಗಿಲ್ಲ ಮತ್ತು ಇದು ಬಾಂಗ್ಲಾದೇಶದ ಜನರ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ. ಈ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ಸೂಚನೆ ಬರುವವರೆಗೂ ಐಪಿಎಲ್ ಪಂದ್ಯಗಳು ಮತ್ತು ಸಂಬಂಧಿತ ಕಾರ್ಯಕ್ರಮಗಳ ಪ್ರಸಾರವನ್ನು ನಿಲ್ಲಿಸುವಂತೆ ಸಚಿವಾಲಯ ಟಿವಿ ಚಾನೆಲ್‌ಗಳಿಗೆ ನಿರ್ದೇಶನ ನೀಡುತ್ತಿದೆ.

ಇನ್ನು ಐಪಿಎಲ್‌ನಿಂದ ಮುಸ್ತಾಫಿಝರ್ ರೆಹಮಾನ್ ಅವರನ್ನು ಕೈಬಿಟ್ಟಿರುವುದು ಬಾಂಗ್ಲಾದೇಶದಲ್ಲಿ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಬಾಂಗ್ಲಾದೇಶ ಸರ್ಕಾರ ಈ ನಿರ್ಧಾರವನ್ನು ಟೀಕಿಸಿತು. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯೂ ಈ ನಿರ್ಧಾರವನ್ನು ವಿರೋಧಿಸಿತು. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) 2026 ರ ಟಿ20 ವಿಶ್ವಕಪ್‌ನಲ್ಲಿ ಆಡಲು ಭಾರತಕ್ಕೆ ತಮ್ಮ ತಂಡವನ್ನು ಕಳುಹಿಸುವುದಿಲ್ಲ ಎಂದು ಘೋಷಿಸಿತು. ಭಾರತದಲ್ಲಿನ ತನ್ನ ತಂಡಕ್ಕೆ ಇರುವ ಭದ್ರತಾ ಬೆದರಿಕೆಗಳನ್ನು ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೈಬಿಡಲು ಕಾರಣವೆಂದು ಬಿಸಿಬಿ ಉಲ್ಲೇಖಿಸಿದೆ. ಬಿಸಿಬಿ ತನ್ನ ತಂಡದ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಐಸಿಸಿಗೆ ಪತ್ರ ಬರೆದಿದೆ.

Shwetha M