ಬಾಂಗ್ಲಾದೇಶ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವಿನ ನಗೆ ಬೀರಿದ ಶೇಖ್ ಹಸೀನಾ – ಸತತ 5ನೇ ಬಾರಿಗೆ ಮರು ಆಯ್ಕೆ!

ಬಾಂಗ್ಲಾದೇಶ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವಿನ ನಗೆ ಬೀರಿದ ಶೇಖ್ ಹಸೀನಾ – ಸತತ 5ನೇ ಬಾರಿಗೆ ಮರು ಆಯ್ಕೆ!

ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಮತ್ತು ಅವಾಮಿ ಲೀಗ್ ಮುಖ್ಯಸ್ಥೆಯಾದ ಶೇಖ್ ಹಸೀನಾ ಭರ್ಜರಿ ಗೆಲುವು ಸಾಧಿಸಿದ್ದಾರೆ. 76 ವರ್ಷದ ಶೇಖ್ ಹಸೀನಾ 249,965 ಮತಗಳನ್ನು ಪಡೆದರೆ, ಅವರ ಹತ್ತಿರದ ಪ್ರತಿಸ್ಪರ್ಧಿ ಮತ್ತು ಬಾಂಗ್ಲಾದೇಶ ಸುಪ್ರೀಂ ಪಾರ್ಟಿಯ ಎಂ ನಿಜಾಮ್ ಉದ್ದೀನ್ ಲಷ್ಕರ್ ಕೇವಲ 469 ಮತಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಸಂಘರ್ಷ – ಭದ್ರತಾ ಪಡೆ, ಬಂಡುಕೋರರ ಮಧ್ಯೆ ಭಾರಿ ಗುಂಡಿನ ಚಕಮಕಿ

ಗೋಪಾಲಗಂಜ್ ಡೆಪ್ಯುಟಿ ಕಮಿಷನರ್ ಮತ್ತು ಚುನಾವಣಾ ಅಧಿಕಾರಿ ಖಾಜಿ ಮಹಬೂಬೂಲ್ ಆಲಂ ಈ ಫಲಿತಾಂಶವನ್ನು ಪ್ರಕಟಿಸಿದ್ದಾರೆ. ಶೇಖ್ ಹಸೀನಾ ಅವರು 1986 ರಿಂದ ಎಂಟು ಬಾರಿ ಗೋಪಾಲಗಂಜ್-3 ಸ್ಥಾನವನ್ನು ಗೆದ್ದಿದ್ದಾರೆ. ಪ್ರಧಾನಿ ಹಸೀನಾ ಅವರು ಸತತ ಐದನೇ ಬಾರಿ ಅಧಿಕಾರ ಹಿಡಿದಿದ್ದಾರೆ. ಈ ಬೆನ್ನಲ್ಲೇ ಪ್ರತಿಪಕ್ಷಗಳು ಈ ಚುನಾವಣೆಯನ್ನು ಬಹಿಷ್ಕರಿಸಿದ್ದು, ವಿರೋಧ ಪಕ್ಷಗಳನ್ನು ಉಗ್ರಗಾಮಿ ಸಂಘಟನೆ ಎಂದು ಪ್ರಧಾನಿ ಟೀಕಿಸಿದ್ದಾರೆ.

ಒಟ್ಟು 300 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅವಾಮಿ ಲೀಗ್ ನೇತೃತ್ವದ ಪಕ್ಷವು ಸುಮಾರು 204 ಸ್ಥಾನಗಳನ್ನು ಗೆದ್ದುಕೊಂಡಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ಜೊತೆಗೆ ಮಿತ್ರ ಪಕ್ಷವಾದ ಜಾತಿಯಾ ಪಕ್ಷವು 9 ಸ್ಥಾನಗಳನ್ನು ಗೆದ್ದುಕೊಂಡಿದೆ ಎಂದು ತಿಳಿದುಬಂದಿದೆ.

ಬಹುತೇಕ ಕ್ಷೇತ್ರಗಳಲ್ಲಿ ಆಡಳಿತ ಪಕ್ಷಕ್ಕೆ ಎದುರಾಳಿಗಳೇ ಇರಲಿಲ್ಲ. ಆದರೆ ಶಾಸನಸಭೆಗೆ ಏಕಪಕ್ಷದ ಸಂಸ್ಥೆ ಎಂಬ ಹಣೆಪಟ್ಟಿ ಬರಬಾರದು ಎಂಬ ಕಾರಣಕ್ಕೆ ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಿರಲಿಲ್ಲ. 300 ಕ್ಷೇತ್ರಗಳಲ್ಲಿ 264 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಕಣಕ್ಕಿಳಿಸಿತ್ತು. ಈ ಪೈಕಿ 204 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಬಹುಮತ ಪಡೆದುಕೊಂಡಿದೆ. ವಿರೋಧ ಪಕ್ಷವಾಗಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ ಬಹುತೇಕ ಮುಖಂಡರನ್ನು ಬಂಧಿಸಲಾಗಿದ್ದು, ಸಾರ್ವತ್ರಿಕ ಮುಷ್ಕರಕ್ಕೆ ಪಕ್ಷ ಕರೆ ನೀಡಿವೆ. ಇತರ ವಿರೋಧ ಪಕ್ಷಗಳೂ ಈ ಚುನಾವಣೆಯನ್ನು ಬಹಿಷ್ಕರಿಸಿದ್ದವು.

Shwetha M