ಬಾಂಗ್ಲಾದಲ್ಲಿ ರಾಜೀನಾಮೆ ರಾದ್ಧಾಂತ – T-20WC ಆಡದಿದ್ರೆ ಕ್ರಿಕೆಟ್ ಬಂದ್?
ಅಧ್ಯಕ್ಷನಿಗೆ ಆಟಗಾರರಿಂದಲೇ ವಾರ್ನಿಂಗ್!

ಭಾರತದಲ್ಲಿ ಟಿ-20 ವಿಶ್ವಕಪ್ ಆಡಲ್ಲ.. ಶ್ರೀಲಂಕಾಗೆ ನಮ್ಮ ಪಂದ್ಯಗಳನ್ನ ಶಿಫ್ಟ್ ಮಾಡಿ ಎಂದಿದ್ದ ಬಾಂಗ್ಲಾದೇಶ ಕ್ರಿಕೆಟ್ನಲ್ಲೀಗ ಕಿಚ್ಚು ಹೊತ್ತಿದೆ. ವಿಶ್ವಕಪ್ ಬಗ್ಗೆ ತೀರ್ಮಾನ ಮಾಡೋದಿರ್ಲಿ ತಮ್ಮಲ್ಲೇ ಹೊತ್ತಿರೋ ಬೆಂಕಿನ ಹೇಗಪ್ಪಾ ಆರಿಸೋದು ಅನ್ನೋ ಗೊಂದಲದಲ್ಲಿದ್ದಾರೆ. ಇದೆಲ್ಲದ್ರ ನಡುವೆ ರಾಜೀನಾಮೆಯ ಕೂಗು ಎದ್ದಿದೆ. ಭಾರತದಿಂದ ಪಂದ್ಯಗಳನ್ನ ಶಿಫ್ಟ್ ಮಾಡೋಕೆ ಆಗಲ್ಲ ಅಂತಾ ಐಸಿಸಿ ಹೇಳ್ತಿದ್ದಂತೆ ಬಾಂಗ್ಲಾ ಕ್ರಿಕೆಟ್ ಮಂಡಳಿ ಹೊಸ ಟೆಕ್ನಿಕ್ ಹುಡುಕಿದೆ. ನಾವು ಟಿ-20 ವಿಶ್ವಕಪ್ನೇ ಆಗಲ್ಲ. ಅದ್ರಿಂದ ಹೊರ ಬರ್ತೀವಿ ಅಂತಾ ಬ್ಲ್ಯಾಕ್ಮೇಲ್ ಮಾಡ್ತಿದೆ. ನಾವು ವಿಶ್ವಕಪ್ನಲ್ಲಿ ಭಾಗವಹಿಸದಿದ್ದರೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಯಾವುದೇ ನಷ್ಟವಾಗುವುದಿಲ್ಲ.. ಆಟಗಾರರಿಗೆ ನಷ್ಟ ಆಗುತ್ತೆ. ಆಟಗಾರರು ಆಡುವ ಪ್ರತಿಯೊಂದು ಪಂದ್ಯಕ್ಕೂ ಪಂದ್ಯ ಶುಲ್ಕವನ್ನು ಪಡೆಯುವುದರಿಂದ ಅವರು ತೊಂದರೆ ಅನುಭವಿಸುತ್ತಾರೆ. 2027ರವರೆಗೆ, ನಮ್ಮ ಆದಾಯಕ್ಕೆ ಅಡ್ಡಿಯಾಗುವುದಿಲ್ಲ ಅಂತಾ BCB ಹಣಕಾಸು ಸಮಿತಿಯ ಅಧ್ಯಕ್ಷ ನಜ್ಮುಲ್ ಹಸನ್ ಹೇಳಿದ್ದಾರೆ. ನಜ್ಮುಲ್ರ ಇದೇ ಹೇಳಿಕೆ ಈಗ ಕಿಚ್ಚು ಹಚ್ಚಿದೆ.
ಇದನ್ನೂ ಓದಿ : ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯ ಆಯೋಜನೆಗೆ ಗ್ರೀನ್ ಸಿಗ್ನಲ್? – ಮಾರ್ಗಸೂಚಿಯಲ್ಲಿ ಏನೇನಿದೆ?
ನಜ್ಮುಲ್ ಹಸನ್ ರಾಜೀನಾಮೆಗೆ ಆಟಗಾರ ಆಗ್ರಹ!
ಟಿ-20 ವಿಶ್ವಕಪ್ನಿಂದ ಹೊರಗುಳಿಯೋ ಬಗ್ಗೆ ನಜ್ಮುಲ್ ಹೇಳಿದ್ದ ಮಾತುಗಳೇ ವಿವಾದ ಉಂಟು ಮಾಡಿವೆ. ಆಟಗಾರರಿಗೆ ನಷ್ಟ ಆಗುತ್ತೆ ನಮಗಲ್ಲ ಎಂದಿದ್ದಕ್ಕೆ ತಿರುಗಿ ಬಿದ್ದಿದ್ದಾರೆ. ಹಾಗೇ ಬಿಸಿಬಿ ಹಣಕಾಸು ಸಮಿತಿ ಅಧ್ಯಕ್ಷ ನಜ್ಮುಲ್ ಹಸನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಆಟಗಾರರು ಇನ್ನು ಮುಂದೆ ಕ್ರಿಕೆಟ್ ಆಡುವುದಿಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟಿಗರ ಕಲ್ಯಾಣ ಸಂಘ ಘೋಷಿಸಿದೆ. ಅಷ್ಟಕ್ಕೂ ನಜ್ಮುಲ್ ವಿರುದ್ಧ ತಿರುಗಿ ಬೀಳೋಕೆ ಕಾರಣವೂ ಇದೆ. ಒಬ್ಬ ಆಟಗಾರ ಮ್ಯಾಚ್ ಆಡಿದ್ರೆ ಹಾಗೇ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರೆ ಐಸಿಸಿ ನಿಯಮಗಳ ಪ್ರಕಾರ ಹಣ ಪಡೀತಾರೆ. ಆ ಹಣವು ಸಂಪೂರ್ಣವಾಗಿ ಆಟಗಾರನಿಗೆ ಸೇರಿದೆ. ಹೀಗಾಗಿ ಬಾಂಗ್ಲಾದೇಶ್ ಇಲ್ಲಿ ಆಡಲಿ ಅಥವಾ ಆಡದಿದ್ದರೂ ಮಂಡಳಿಗೆ ಯಾವುದೇ ಲಾಭ ಅಥವಾ ನಷ್ಟವಿಲ್ಲ. ಟಿ20 ವಿಶ್ವಕಪ್ನಂತಹ ಟೂರ್ನಿಯಲ್ಲಿ ಬಾಂಗ್ಲಾದೇಶ್ ತಂಡದ ಆಟಗಾರರು ಚೆನ್ನಾಗಿ ಆಡದೇ ಇದ್ರೆ ಅವರಿಗಾಗಿ ಖರ್ಚು ಮಾಡಿದ ಕೋಟ್ಯಂತರ ರೂಪಾಯಿಗಳನ್ನು ನಾವು ಅವರಿಂದ ಹಿಂಪಡೆಯಲಾಗುತ್ತದೆಯೇ? ಇಲ್ಲ ತಾನೆ ಎಂದಿದ್ರು. ನಜ್ಮುಲ್ ಹೇಳಿಕೆಗೆ ಮಾಜಿ ನಾಯಕ ತಮೀಮ್ ಇಕ್ಬಾಲ್ ವಿಶ್ವಕಪ್ ವಿಚಾರದಲ್ಲಿ ಎಚ್ಚರಿಕೆಯಿಂದ ವರ್ತಿಸುವಂತೆ ಹೇಳಿದ್ರು. ಇದಕ್ಕೆ ಇಕ್ಬಾಲ್ರನ್ನ ಭಾರತೀಯ ಏಜೆಂಟ್ ಎಂದು ಕರೆದಿದ್ರು. ಹೀಗಾಗಿ ರಾಜೀನಾಮೆ ಕೊಡಲೇಬೇಕು ಎಂಬ ಒತ್ತಡ ಜಾಸ್ತಿಯಾಗ್ತಿದೆ.
ವಿವಾದದ ಬೆನ್ನಲ್ಲೇ ನಜ್ಮುಲ್ ಗೆ ಶೋಕಾಸ್ ನೋಟಿಸ್!
ಬಾಂಗ್ಲಾ ಕ್ರಿಕೆಟಿಗರ ವಿರುದ್ಧ ಸಾರ್ವಜನಿಕವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಗುರುವಾರ ತನ್ನ ನಿರ್ದೇಶಕ ಜ್ಮುಲ್ ಹಸನ್ ಅವರಿಗೆ ಶೋಕಾಸ್ ನೋಟಿಸ್ ನೀಡಿದೆ. ಮಾಜಿ ನಾಯಕ ತಮೀಮ್ ಇಕ್ಬಾಲ್ ಸೇರಿದಂತೆ ಹಿರಿಯ ಆಟಗಾರರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದಕ್ಕಾಗಿ ಔಪಚಾರಿಕ ಶಿಸ್ತು ಕ್ರಮಗಳನ್ನು ಪ್ರಾರಂಭಿಸಿದೆ. ಶೋಕಾಸ್ ಲೆಟರ್ ನೀಡಲಾಗಿದೆ ಮತ್ತು 48 ಗಂಟೆಗಳ ಒಳಗೆ ಲಿಖಿತ ಪ್ರತಿಕ್ರಿಯೆಯನ್ನು ಸಲ್ಲಿಸಲು ಸೂಚಿಸಲಾಗಿದೆ. ಇಷ್ಟೆಲ್ಲಾ ಬೆಳವಣಿಗೆಗಳ ಹೊರತಾಗಿಯೂ ಬಾಂಗ್ಲಾ ತಂಡ ವಿಶ್ವಕಪ್ನಿಂದ ಹಿಂದೆ ಸರಿದ್ರೆ ದೊಡ್ಡ ಪರಿಣಾಮವನ್ನೇ ಎದುರಿಸಬೇಕಾಗುತ್ತೆ. ಬಾಂಗ್ಲಾದೇಶದಲ್ಲಿ ಕ್ರಿಕೆಟ್ನ ಭವಿಷ್ಯದ ಬಗ್ಗೆ ಅನಿಶ್ಚಿತತೆಯನ್ನು ಉಂಟುಮಾಡುತ್ತವೆ.
ವಿಶ್ವಕಪ್ ಬಹಿಷ್ಕರಿಸಿದ್ರೆ ಬಾಂಗ್ಲಾಗೆ ಹೆಜ್ಜೆ ಹೆಜ್ಜೆಗೂ ನಷ್ಟ!
ಬಾಂಗ್ಲಾದೇಶ ತಂಡವು ಇಂಗ್ಲೆಂಡ್, ವೆಸ್ಟ್ ಇಂಡೀಸ್, ನೇಪಾಳ ಮತ್ತು ಇಟಲಿಯೊಂದಿಗೆ ಗ್ರೂಪ್ ಸಿ ನಲ್ಲಿ ಸ್ಥಾನ ಪಡೆದಿದೆ. ಬಾಂಗ್ಲಾ ಏನಾದ್ರೂ ಹಿಂದೆ ಸರಿದರೆ, ಅವರ ನಿಗದಿತ ಪಂದ್ಯಗಳನ್ನು ಕಳೆದುಕೊಳ್ಳುತ್ತೆ. ಐಸಿಸಿ ನಿಯಮಗಳ ಪ್ರಕಾರ ಎದುರಾಳಿ ತಂಡಗಳಿಗೆ ಆಟೋಮೆಟಿಕಲಿ ಅಂಕಗಳನ್ನು ನೀಡಲಾಗುತ್ತದೆ. ಇದು ಗ್ರೂಪ್ ಸಿ ತಂಡಗಳನ್ನು ನಾಲ್ಕು ತಂಡಗಳಿಗೆ ಇಳಿಸುತ್ತದೆ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸೂಪರ್ 8 ಗೆ ಅರ್ಹತೆ ಪಡೆಯಬಹುದು. ಹಾಗೇ ಪಂದ್ಯ ಶುಲ್ಕ, ಪ್ರದರ್ಶನ ಬೋನಸ್ಗಳು ಮತ್ತು ಲಾಭದಾಯಕ ಪ್ರಾಯೋಜಕತ್ವ ಒಪ್ಪಂದಗಳನ್ನು ಕಳೆದುಕೊಳ್ಳುತ್ತಾರೆ, ಮಂಡಳಿಯು ಯಾವುದೇ ಪರಿಹಾರವನ್ನು ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಆರ್ಥಿಕ ಒತ್ತಡವು ಆಟಗಾರರು ಮತ್ತು ಆಡಳಿತಗಾರರ ನಡುವಿನ ಬಿರುಕನ್ನು ಇನ್ನಷ್ಟು ಹೆಚ್ಚಿಸಬಹುದು. ಬಾಂಗ್ಲಾದೇಶ ವಿಶ್ವಕಪ್ ಬಹಿಷ್ಕಾರದೊಂದಿಗೆ ಮುಂದುವರಿದರೆ, ಐಪಿಎಲ್ ಫ್ರಾಂಚೈಸಿಗಳು ಬಾಂಗ್ಲಾದೇಶದ ಆಟಗಾರರಿಂದ ಸಂಪೂರ್ಣವಾಗಿ ದೂರವಾಗುವ ಸಾಧ್ಯತೆಯಿದೆ. ಹೀಗಾಗಿ ಬಾಂಗ್ಲಾದೇಶದ ಪಾಲಿಗೆ ಟಿ-20 ವಿಶ್ವಕಪ್ ಬಿಸಿತುಪ್ಪವಾಗಿದೆ.

ನೋಡಿರಿ

