ಬಾಂಗ್ಲಾದ ಬೀದಿಯಲ್ಲಿ ಬಡಿದಾಟ! ವಾಯಪಡೆ ನೆಲೆ ಮೇಲೆ ಅಟ್ಯಾಕ್!!
ಯೂನಸ್ ವಿರುದ್ಧ ತಿರುಗಿಬಿದ್ರಾ ಜನ?

ಬಾಂಗ್ಲಾದ ಬೀದಿಯಲ್ಲಿ ಬಡಿದಾಟ! ವಾಯಪಡೆ ನೆಲೆ ಮೇಲೆ ಅಟ್ಯಾಕ್!!ಯೂನಸ್ ವಿರುದ್ಧ ತಿರುಗಿಬಿದ್ರಾ ಜನ?

 

ದಕ್ಷಿಣ ಬಾಂಗ್ಲಾದಲ್ಲಿ ಕಾಕ್ಸ್‌ ಬಜಾರ್‌ನ ಸಮೀಪದಲ್ಲಿರುವ ವಾಯು ಪಡೆಗೆ ಸೇರಿದ ನೆಲೆಯ ಮೇಲೆ ಗಲಭೆಕೋರರು ದಾಳಿ ನಡೆಸಿದ್ದಾರೆ. ಬಾಂಗ್ಲಾ ವಾಯುಪಡೆಯ ಸಿಬ್ಬಂದಿ ಹಾಗೂ ಸಮಿತಿ ಪರ ಪ್ರದೇಶದ ಜನರ ನಡುವೆ ನಡೆದಿರುವ ಘರ್ಷಣೆಯು ಹಿಂಸಾಚಾರಕ್ಕೆ ತಿರುಗಿದೆ. ಗಲಭೆ ಜೋರಾಗ್ತಿದ್ದಂತೆ ಯೋಧರು ನೇರವಾಗಿ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದು, ಹತ್ತಾರು ಮಂದಿ ಗಾಯಗೊಂಡಿರೋದಾಗಿ ತಿಳಿದು ಬಂದಿದೆ.

ಮೋಟಾರ್‌ ಬೈಕ್‌ನಲ್ಲಿ ಸಾಗುತ್ತಿದ್ದ ವ್ಯಕ್ತಿಯನ್ನು ಬಾಂಗ್ಲಾ ವಾಯುಪಡೆಯ ಯೋಧರು ಪ್ರಶ್ನೆ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು, ವಾಯುಪಡೆಯ ಸಿಬ್ಬಂದಿ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ಶುರುವಾಗಿದೆ. ಅದರ ಬೆನ್ನಲ್ಲೇ ಹಲವು ಮಂದಿ ಸ್ಥಳೀಯರು ಜೊತೆಯಾಗಿ ವಾಯು ನೆಲೆಯ ಮೇಲೆ ದಾಳಿ ನಡೆಸಿದ್ದಾರೆ. ಗಲಾಟೆ ಜೋರಾಗ್ತಿದ್ದ ಹಾಗೇ ಯೋಧರು ಗುಂಡು ಹಾರಿಸಿದ್ದಾರೆ. ಈ ಘಟನೆ ಸರ್ಕಾರ, ಸೇನೆ ಹಾಗೂ ಜನಸಾಮಾನ್ಯರ ನಡುವಿನ ಸಂರ್ಘವನ್ನು ಸಾರಿ ಹೇಳುವಂತಿದೆ.

ಬಾಂಗ್ಲಾದೇಶದಲ್ಲಿ ಮುಹಮ್ಮದ್‌ ಯೂನಸ್‌ ಅವರಿಗೆ ದೇಶವನ್ನು ಮುನ್ನಡೆಸುವ ಸಾರಥ್ಯ ಕೊಡಲಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಶೇಖ್‌ ಹಸೀನಾ ದೇಶ ಬಿಟ್ಟು ಪರಾರಿಯಾದ ನಂತರದಲ್ಲಿ ಸೇನೆಯು ಆಡಳಿತವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಮಧ್ಯಂತರ ಸರಕಾರವು ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಲವು ಕ್ರಮಗಳನ್ನು ಘೋಷಿಸುತ್ತಿದೆ. ಶೇಖ್‌ ಹಸೀನಾ ಅವರ ಅವಾಮಿ ಲೀಗ್‌ ಪಾರ್ಟಿಯ ಬೆಂಬಲಿಗರನ್ನು ಬಂಧಿಸಲಾಗುತ್ತಿದೆ ಎಂದು ಆ ಪಕ್ಷವು ಸರಕಾರವನ್ನು ಟೀಕಿಸುತ್ತಿದೆ. ಫೆಬ್ರವರಿ 8ರಿಂದ ‘ಆಪರೇಷನ್ ಡೆವಿಲ್‌ ಹಂಟ್‌’ಹೆಸರಿನ ಕಾರ್ಯಾಚರಣೆಯನ್ನು ಶುರು ಮಾಡಲಾಗಿದ್ದು, ದೇಶದಾದ್ಯಂತ 8 ಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿರೋ ಗಲಾಟೆಯು ಬಾಂಗ್ಲಾದಲ್ಲಿರುವ ಅತಂತ್ರ ಸ್ಥಿತಿಯನ್ನು  ಇಡಿ ವಿಶ್ವದ ಮುಂದೆ ಸಾರಿದೆ.

ದೇಶದಲ್ಲಿ ಅಸ್ಥಿರತೆ ಸೃಷ್ಟಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ನಿಶ್ಚಿತ..” ಎಂದು ಬಾಂಗ್ಲಾದೇಶದ ಗೃಹ ವ್ಯವಹಾರಗಳ ಸಲಹೆಗಾರರ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಢಾಕಾದಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ನಿವೃತ್ತ ಲೆಫ್ಟಿನೆಂಟ್ ಜನರಲ್ ಎಂ ಜಹಾಂಗೀರ್ ಆಲಂ ಚೌಧರಿ, “ಪದಚ್ಯುತ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಆಡಳಿತದ ಮಿತ್ರಪಕ್ಷಗಳು ದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿವೆ. ಆದರೆ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಶಕ್ತಿಗಳನ್ನು ನಾವು ಮಟ್ಟ ಹಾಕುತ್ತೇವೆ. ಭಯೋತ್ಪಾದಕರಿಗೆ ಅರಾಜಕತೆ ಸೃಷ್ಟಿಸಲು ನಾವು ಅವಕಾಶ ನೀಡುವುದಿಲ್ಲ..” ಎಂದು ಸ್ಪಷ್ಟಪಡಿಸಿದರು.

 

ಸದ್ಯ ಘರ್ಷಣೆ ನಡೆದ ಪ್ರದೇಶಕ್ಕೆ ಸಾಮಾನ್ಯ ನಾಗರಿಕರ ಪ್ರವೇಶಕ್ಕೆ ಭದ್ರತಾ ಸಿಬ್ಬಂದಿ ನಿರ್ಬಂಧ ವಿಧಿಸಿದ್ದು, ಘರ್ಷಣೆಯಲ್ಲಿ ಭಾಗಿಯಾಗಿದ್ದ ದುಷ್ಕರ್ಮಿಗಳ ಶೋಧ ಕಾರ್ಯ ಆರಂಭಿಸಿದ್ದಾರೆ. ಘರ್ಷಣೆಯ ಹಿಂದಿನ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ವಿರೋಧಿ ಗುಂಪು ಈ ದಾಳಿಯನ್ನು ನಡೆಸಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಬಾಂಗ್ಲಾದೇಶದ ರಾಜಕೀಯ ಅಸ್ಥಿರತೆ ಮುಂದುವರೆದಿದ್ದು, ನೆರೆ ರಾಷ್ಟ್ರದ ಬೆಳವಣಿಗೆಗಳನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ.

Kishor KV