ಬೆಂಗಳೂರಿಗರಿಗೆ ಕಾವೇರಿ ನೀರಿನ ಚಿಂತೆಯೇ ಇಲ್ಲ.. ನೀರಿನ ವಿಚಾರದಲ್ಲಿ ಮೌನ ಅಚ್ಚರಿ ತಂದಿದೆ! – ಹೆಚ್‌.ಡಿ ಕುಮಾರಸ್ವಾಮಿ

ಬೆಂಗಳೂರಿಗರಿಗೆ ಕಾವೇರಿ ನೀರಿನ ಚಿಂತೆಯೇ ಇಲ್ಲ.. ನೀರಿನ ವಿಚಾರದಲ್ಲಿ ಮೌನ ಅಚ್ಚರಿ ತಂದಿದೆ! – ಹೆಚ್‌.ಡಿ ಕುಮಾರಸ್ವಾಮಿ

ಬೆಂಗಳೂರು: ಒಂದು ಕಡೆ ಮಳೆಯ ಸುಳಿವಿಲ್ಲ, ಕ್ಷಾಮ ಆವರಿಸುತ್ತಿದೆ, ಜಲಾಶಯಗಳಲ್ಲೂ ನೀರಿನ ಸಂಗ್ರಹ ಮಟ್ಟ ಗಣನೀಯವಾಗಿ ಕುಸಿದಿದೆ. ಈ ಹೊತ್ತಲ್ಲೇ ಗಾಯದ ಮೇಲೆ ಬರೆ ಎಳೆಯುವ ರೀತಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲು ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಸೂಚಿಸಿದೆ. ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ. ನೆರೆ ರಾಜ್ಯಗಳಿಂದ ಬಂದು ಇಲ್ಲಿ ನೆಮ್ಮದಿಯಾಗಿರುವವರು ಕೂಡ ಕಾವೇರಿ ಬಗ್ಗೆ ದನಿ ಎತ್ತಬೇಕು. ಇವರಾರಿಗೂ ಕಾವೇರಿ ನೀರಿನ ಚಿಂತೆಯೇ ಇಲ್ಲ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಕಾವೇರಿ ಕನ್ನಡಿಗರ ಹಕ್ಕು ಎಂಬ ಹ್ಯಾಷ್‌ಟ್ಯಾಗ್‌ ಬಳಸಿ ಹೆಚ್‌ಡಿಕೆ ಸರಣಿ ಟ್ವೀಟ್‌ ಮಾಡಿದ್ದಾರೆ. ನಿತ್ಯವೂ ನೆರೆರಾಜ್ಯಕ್ಕೆ 5,000 ಕ್ಯೂಸೆಕ್‌ ಕಾವೇರಿ ನೀರು ಹರಿಸಬೇಕೆಂದು ಕರ್ನಾಟಕಕ್ಕೆ ಕಾವೇರಿ ಜಲ ನಿಯಂತ್ರಣ ಸಮಿತಿ ಕೊಟ್ಟಿರುವ ನಿರ್ದೇಶನ ಆಘಾತಕಾರಿ. ಯಾವ ಕಾರಣಕ್ಕೂ ರಾಜ್ಯ ಸರಕಾರ ನೀರು ಹರಿಸಬಾರದು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಅಕ್ಕಿ ಬೇಳೆ- ಕಾಳು ಬಲು ದುಬಾರಿ! – ದವಸ ಧಾನ್ಯ ಬೆಲೆ ಏರಿಕೆಗೆ ಕಾರಣ ಏನು?

ಸಂಕಷ್ಟ ಸೂತ್ರವೇ ಇಲ್ಲ, ಕರ್ನಾಟಕಕ್ಕಷ್ಟೇ ಸಂಕಷ್ಟವೇ? ತಮಿಳುನಾಡಿಗೆ ಯಾವ ಸಂಕಷ್ಟವೂ ಇಲ್ಲ. ಆದೇಶ ಪಾಲನೆಗಷ್ಟೇ ಕರ್ನಾಟಕ, ಅನುಭವಿಸಲಿಕ್ಕೆ ತಮಿಳುನಾಡು!! ಹೀಗಿದೆ ನಮ್ಮ ಸ್ಥಿತಿ. ಆ ರಾಜ್ಯವು ಎಷ್ಟು ವಿಸ್ತೀರ್ಣದಲ್ಲಿ ಬೆಳೆ ಬೆಳೆಯುತ್ತಿದೆ ಎಂಬ ಅಂಕಿ-ಅಂಶದ ಬಗ್ಗೆ ಸಮಿತಿಯಲ್ಲಿ ಚರ್ಚಿಸಿಲ್ಲ ಎನ್ನುವುದಕ್ಕೆ ಆ ಸಮಿತಿಯ ಆದೇಶವೇ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಿತಿ ಮತ್ತು ಪ್ರಾಧಿಕಾರದ ಸಭೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ. ಆ ಸಭೆಗಳಿಗೆ ಅಧಿಕಾರಿಗಳು ಆನ್‌ಲೈನ್‌ನಲ್ಲಿ ಹಾಜರಾದರೆ, ನೆರೆರಾಜ್ಯದವರು ಖುದ್ದು ಹಾಜರಿದ್ದು ಅಂಕಿ-ಅಂಶ ಸಮೇತ ವಾದ ಮಂಡಿಸುತ್ತಾರೆ. ಹೀಗಾದರೆ, ರಾಜ್ಯದ ಹಿತರಕ್ಷಣೆ ಹೇಗೆ ಸಾಧ್ಯ? ನೆಲ, ಜಲ, ಭಾಷೆ ಬಗ್ಗೆ ತಮಿಳುನಾಡಿನವರಿಗೆ ಇರುವ ಬದ್ಧತೆ ನಮ್ಮವರಿಗಿಲ್ಲ. ಇದು ದುರಂತ ಎಂದು ಹೆಚ್‌ಡಿಕೆ ಕಿಡಿಕಾರಿದ್ದಾರೆ.

ನಮ್ಮವರಲ್ಲಿ ಉಪೇಕ್ಷೆ, ಉಡಾಫೆ ಹೆಚ್ಚು. ಟ್ರಿಬ್ಯುನಲ್‌ ಆದೇಶ ಉಲ್ಲಂಘಿಸಿರುವ ತಮಿಳುನಾಡು ವಿರುದ್ಧ ಸಮರ್ಥ ವಾದ ಮಂಡಿಸಲು ಏಕೆ ಸಾಧ್ಯವಾಗಿಲ್ಲ? ನೀರಾವರಿ ಪ್ರದೇಶವನ್ನು ನೆರೆರಾಜ್ಯ ಅಕ್ರಮವಾಗಿ ವಿಸ್ತರಣೆ ಮಾಡಿಕೊಂಡಿರುವುದನ್ನು ಹೇಳಲೇಬೇಕಿತ್ತು. ಮೊದಲು ಸಂಕಷ್ಟಸೂತ್ರ ರೂಪಿಸಿ ಎಂದು ಪಟ್ಟು ಹಿಡಿಯಬೇಕಿತ್ತು ಎಂದು ಹೆಚ್‌ಡಿಕೆ ಕಿಡಿಕಾರಿದ್ದಾರೆ.

ಜಲ ನಿರ್ವಹಣೆ ಪ್ರಾಧಿಕಾರ, ಜಲ ನಿಯಂತ್ರಣ ಸಮಿತಿ ಏನು ಮಾಡುತ್ತಿವೆ? ಟ್ರಿಬ್ಯುನಲ್ ಆದೇಶ ಉಲ್ಲಂಘಿಸಿ, ನೀರಾವರಿ ಪ್ರದೇಶ ಹೆಚ್ಚಿಸಿಕೊಂಡಿರುವ ತಮಿಳುನಾಡು ಬಗ್ಗೆ ಇವುಗಳಿಗೆ ಮಾಹಿತಿ ಇಲ್ಲವೇ? ರಾಜ್ಯಗಳ ನೈಜಸ್ಥಿತಿ ಅರಿಯುವ ಕರ್ತವ್ಯ ಅವುಗಳಿಗೆ ಇಲ್ಲವೇ? ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವ ನೀತಿ ಯಾಕೆ? ಎಂದು ಪ್ರಶ್ನಿಸಿದ್ದಾರೆ.

Shwetha M