ಬೆಂಗಳೂರು To ಮಡಗಾಂವ್ ವಂದೇಬಾರತ್ ರೈಲು ಉಡುಪಿ, ಮಂಗಳೂರಲ್ಲಿ ನಿಲ್ಲಲ್ಲ! – ಕರಾವಳಿಗೆ ಪದೇ ಪದೇ ಅನ್ಯಾಯ..?

ಬೆಂಗಳೂರು ಟು ಮಡಗಾಂವ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಧ್ಯದಲ್ಲೇ ಪ್ರಯಾಣ ಶುರು ಮಾಡಲಿದೆ. ಆದರೆ, ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಬರಲಿದೆ ಎಂದು ಮಂಗಳೂರು, ಉಡುಪಿ ಜನ ಖುಷಿ ಪಡಬೇಕೋ? ಬೇಜಾರಾಗಬೇಕೋ ಅನ್ನೋದನ್ನ ರೈಲ್ವೇ ಸಚಿವರೇ ಹೇಳಬೇಕು. ಯಾಕೆಂದರೆ, ಈ ರೈಲು ಮಂಗಳೂರು, ಉಡುಪಿ, ಕಾರವಾರದಲ್ಲಿ ನಿಲ್ಲೋದೇ ಇಲ್ಲ.
ಇದನ್ನೂ ಓದಿ:ಪಂಚಗಂಗಾ ಎಕ್ಸ್ಪ್ರೆಸ್ ಜೊತೆ ವಂದೇಬಾರತ್ ಎಕ್ಸ್ಪ್ರೆಸ್ ರೈಲು – ಬೆಂಗಳೂರು ಟು ಗೋವಾ ಪ್ರಯಾಣಕ್ಕೆ ಸದ್ಯದಲ್ಲೇ ಚಾಲನೆ
ಬೆಂಗಳೂರು ಮತ್ತು ಮಡಗಾಂವ್ ನಡುವೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಆರಂಭಿಸಲು ರೈಲ್ವೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ, ಈ ಪ್ರಸ್ತಾವನೆ ವಿಚಾರ ತಿಳಿದು ಮಂಗಳೂರು, ಉಡುಪಿ, ಕಾರವಾರದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮಡಗಾಂವ್ನಿಂದ ಬೆಳಗ್ಗೆ 5.30ಕ್ಕೆ ಹೊರಡುತ್ತದೆ. ಈ ರೈಲು ಪಡೀಲ್ – ಸುಬ್ರಹ್ಮಣ್ಯ ರೋಡ್-ಸಕಲೇಶಪುರ-ಯಶವಂತಪುರಕ್ಕೆ ಆಗಮಿಸಲಿದೆ. ಆದರೆ, ಕರಾವಳಿ ಜಿಲ್ಲೆಗಳ ಪ್ರಮುಖ ನಗರಗಳಲ್ಲಿ ಮಾತ್ರ ನಿಲುಗಡೆ ಇಲ್ಲ. ಮಂಗಳೂರು, ಉಡುಪಿ, ಕಾರವಾರ ನಿಲ್ದಾಣಗಳಲ್ಲಿ ನಿಲುಗಡೆ ನೀಡಿಲ್ಲ.ಇದಕ್ಕಿಂತ ದೊಡ್ಡ ಅನ್ಯಾಯವೇನಿದೆ ಎಂದು ಪ್ರಯಾಣಿಕರು ರೈಲ್ವೇ ಸಚಿವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಬೆಳಗ್ಗೆ 6:05ಕ್ಕೆ ಯಶವಂತಪುರದಿಂದ ಹೊರಡುವ ರೈಲು ಬೆಂಗಳೂರು-ಹಾಸನ-ಸುಬ್ರಹ್ಮಣ್ಯ ರೋಡ್-ಪಡೀಲ್-ಮಡಗಾಂವ್ ಆಗಮಿಸುತ್ತದೆ. ಈಗಿನ ವೇಳಾಪಟ್ಟಿ ಪ್ರಕಾರ ಮಂಗಳೂರು, ಉಡುಪಿ, ಕಾರವಾರದಲ್ಲಿ ನಿಲುಗಡೆ ಇಲ್ಲ.
ಬೆಂಗಳೂರು, ಹಾಸನ, ಸಕಲೇಶಪುರ ಹಾಗೂ ಸುಬ್ರಮಣ್ಯದಲ್ಲಿ ಮಾತ್ರ ನಿಲುಗಡೆಯಿದೆ. ಪ್ರಮುಖ ನಗರ ಮಂಗಳೂರು, ಉಡುಪಿ, ಕಾರವಾರಗಳಲ್ಲಿ ನಿಲುಗಡೆ ಇಲ್ಲ. ಸುಬ್ರಹ್ಮಣ್ಯದಲ್ಲಿ ನಿಲುಗಡೆ ನಂತರ ಸೀದಾ ಗೋವಾದಲ್ಲಿಯೇ ನಿಲುಗಡೆ ಸಿಗುತ್ತದೆ. ಹಾಗಾದರೆ, ಕರಾವಳಿ ಜನತೆಗೆ ಇದು ಅನ್ಯಾಯವಲ್ಲವೇ ಎಂಬ ಆಕ್ರೋಶವನ್ನು ಜನ ಹೊರಹಾಕುತ್ತಿದ್ದಾರೆ. ಕರಾವಳಿ ಜನರಿಗೆ ಇದು ಊಟಕ್ಕೆ ಇಲ್ಲದ ಉಪ್ಪಿನಕಾಯಿ ಆಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿರಾಡಿಘಟ್ ರೈಲು ಮಾರ್ಗದ ವಿದ್ಯುತೀಕರಣ ಮುಗಿದ ಕೂಡಲೇ ಕರಾವಳಿಯ ಜನರು ವಂದೇ ಭಾರತ್ ರೈಲು ಸಂಚಾರ ಆರಂಭ ಮಾಡುತ್ತದೆ ಎಂದು ಖುಷಿಯಿಂದ ಇದ್ದರು. ಆದರೆ ಈಗ ನಿಲ್ದಾಣದಲ್ಲಿ ನಿಲುಗಡೆಯೇ ಇಲ್ಲದೇ ಇರೋದು ಸ್ಥಳೀಯರಿಗೆ ಬೇಸರ ತಂದಿದೆ. ಬೆಂಗಳೂರಿನಿಂದ ಗೋವಾಗೆ ಸಾಗುವ ರೈಲು, ಕರಾವಳಿಯನ್ನ ಹೊರತುಪಡಿಸಿ ಮಾಡಿರುವ ಉದ್ದೇಶ ಏನು? ಈ ಬಗ್ಗೆ ಸಂಸದರು ಇದುವರೆಗೂ ಯಾಕೆ ಪ್ರಶ್ನೆ ಮಾಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಿಂದ ನೇರ ಗೋವಾಗೆ ಹೋಗುವ ಜನರು ಎಷ್ಟು ಜನರಿದ್ದಾರೆ. ಮೊದಲು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಇಲ್ಲದೆ ರೈಲು ಪ್ರಾರಂಭ ಮಾಡ್ತಾರೆ. ಆ ಬಳಿಕ ಜನರು ಬರುತ್ತಿಲ್ಲ ಎಂದು ಹೇಳಿ ರೈಲಿನ ಓಡಾಟಕ್ಕೆ ಬ್ರೇಕ್ ಹಾಕ್ತಾರೆ. ಇದರಿಂದ ಕರಾವಳಿ ಜನರಿಗೆ ಏನು ಪ್ರಯೋಜನ ಎಂದು ರೈಲ್ವೆ ಹೋರಾಟಗಾರರು ಪ್ರಶ್ನಿಸಿದ್ದಾರೆ.
ಪ್ರೈವೇಟ್ ಬಸ್ಗಳ ಹಾವಳಿಗೆ ರೈಲ್ವೇ ಸಚಿವರು ಹೆದರಿಕೊಂಡಿದ್ದಾರಾ?, ಮೊದಲೇ ಬೆಂಗಳೂರು ಟು ಉಡುಪಿಗೆ ರೈಲು ಇರೋದೇ ಎರಡು. ಅದರ ಸಮಯ ಕೂಡಾ ಪ್ರಯಾಣಿಕರಿಗೆ ಅನುಕೂಲ ಇಲ್ಲ. ಆದರೂ ಬಸ್ನಲ್ಲಿ ಸಂಚಾರ ಮಾಡಲು ಕಷ್ಟವಾದವರೆಲ್ಲಾ ರೈಲು ಪ್ರಯಾಣ ಮಾಡುತ್ತಿದ್ದಾರೆ. ಈಗ ಮತ್ತೊಂದು ರೈಲು ಬಿಟ್ಟರು ಅದರಿಂದಲೂ ಪ್ರಯೋಜನವಿಲ್ಲ. ಅಷ್ಟರಮಟ್ಟಿಗೆ ಖಾಸಗಿ ಬಸ್ ಗಳಿಗೆ ಲಾಭ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಕೂಡಾ ಮುಂದಾಗಿದೆಯಾ ಎಂಬ ಅನುಮಾನ ಕೂಡಾ ವ್ಯಕ್ತವಾಗಿದೆ.

ನೋಡಿರಿ

