ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸೌಮ್ಯ ರೆಡ್ಡಿ?- ಮುಖಾಮುಖಿಯಾಗಲಿದ್ದಾರೆ ಬಿಸಿರಕ್ತದ ಅಭ್ಯರ್ಥಿಗಳು

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸೌಮ್ಯ ರೆಡ್ಡಿ?- ಮುಖಾಮುಖಿಯಾಗಲಿದ್ದಾರೆ ಬಿಸಿರಕ್ತದ ಅಭ್ಯರ್ಥಿಗಳು

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಗಳಲ್ಲಿ ಒಂದು. ಕಳೆದ ಎಂಟು ಚುನಾವಣೆ ಗಳಿಂದ ಇಲ್ಲಿ ಬಿಜೆಪಿ ಅಭ್ಯರ್ಥಿ ನೀರು ಕುಡಿದಷ್ಟೇ ಸಲೀಸಾಗಿ ಗೆಲ್ಲುತ್ತಾ ಬಂದಿದ್ದಾರೆ. ಅದರಲ್ಲೂ ಅನಂತಕುಮಾರ್‌ ಈ ಕ್ಷೇತ್ರವನ್ನು ಆವರಿಸಿಕೊಂಡಿದ್ದರು. ಕೇಂದ್ರದಲ್ಲಿ ಮಂತ್ರಿಯಾಗಿಯೂ ಛಾಪು ಮೂಡಿಸಿದ್ದವರು. ಪಕ್ಷದ ಸಂಘಟನೆ, ಸಂಘ ಪರಿವಾರದ ಬೇರುಗಳು ಗಟ್ಟಿಯಾಗಿವೆ ಎನ್ನುವುದಕ್ಕೆ ಅನಂತಕುಮಾರ್‌ ಅವರ ನಂತರ 2019ರ ಚುನಾವಣೆಯಲ್ಲಿ ತೇಜಸ್ವಿ ಸೂರ್ಯ ಅವರ ಗೆಲುವೇ ಸಾಕ್ಷಿಯಾಗಿತ್ತು. ಆದ್ರೆ ಈ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಕಾಂಗ್ರೆಸ್ ನಡೆಸುತ್ತಿರುವ ಪ್ರಯೋಗಗಳೆಲ್ಲವೂ ಕೈ ಕೊಡುತ್ತಾ ಬಂದಿವೆ. ಆದ್ರೆ ಈ ಬಾರಿ ಕಮಲ ಅರಳುತ್ತೋ.. ಕೈ ಮೇಲಾಗುತ್ತೋ ಎಂಬ ಚರ್ಚೆ ನಡೆಯುತ್ತಿದೆ. ಈಗಾಗ್ಲೇ ಬಿಜೆಪಿಯಿಂದ ತೇಜಸ್ವಿ ಸೂರ್ಯಗೆ ಟಿಕೆಟ್ ಘೋಷಣೆಯಾಗಿದೆ. ಕಾಂಗ್ರೆಸ್​ನಿಂದ ಸಚಿವ ರಾಮಲಿಂಗಾರೆಡ್ಡಿ ಪುತ್ರಿ, ಮಾಜಿ ಶಾಸಕಿ ಸೌಮ್ಯ ರೆಡ್ಡಿಗೆ ಟಿಕೆಟ್ ಫೈನಲ್ ಆಗಿದೆ ಎನ್ನಲಾಗಿದೆ. ಹೀಗಾಗಿ ಇಬ್ಬರು ಬಿಸಿರಕ್ತದ ಅಭ್ಯರ್ಥಿಗಳೇ ಮುಖಾಮುಖಿಯಾಗಲಿದ್ದಾರೆ.

ಇದನ್ನೂ ಓದಿ: ಅಳಿಯನ ಜಾತಕ ಹಿಡಿದು ಅಮಿತ್ ಶಾಗೆ ಗೌಡರು ಹೇಳಿದ್ದೇನು? – ಡಾ.ಮಂಜುನಾಥ್ ಭವಿಷ್ಯವೇನು?

ಬಿಜೆಪಿ ಭದ್ರಕೋಟೆಯಾಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಟಫ್ ಫೈಟ್ ನಡೆಯಲಿದೆ. 2023ರ ವಿಧಾನಸಭಾ ಎಲೆಕ್ಷನ್ ನಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ 16 ಮತಗಳ‌ ಅಂತರದಿಂದ ಪರಾಜಿತರಾಗಿದ್ದ ಸೌಮ್ಯ ರೆಡ್ಡಿ ಮತ್ತೊಮ್ಮೆ ಅದೃಷ್ಟ ‌ಪರೀಕ್ಷೆಗೆ ಮುಂದಾಗಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಜಯನಗರದ ಕ್ಷೇತ್ರದಲ್ಲಿ ತಾವು ಮಾಡಿರುವ ಹಲವು‌ ಅಭಿವೃದ್ಧಿ ಕಾರ್ಯಗಳು ತಮ್ಮ ಗೆಲುವಿಗೆ ಕಾರಣವಾಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಕಾಂಗ್ರೆಸ್ ಸರ್ಕಾರದ ಭಾಗ್ಯ ಯೋಜನೆಗಳು ಹಾಗೂ ತಂದೆ ರಾಮಲಿಂಗಾರೆಡ್ಡಿರವರ ರಾಜಕೀಯ ‌ಚಾಣಾಕ್ಷತೆ ಸೌಮ್ಯರೆಡ್ಡಿ ಗೆಲುವಿಗೆ ಕಾರಣವಾಗಲಿದೆ ಎಂಬ ನಿರೀಕ್ಷೆ ಕಾಂಗ್ರೆಸ್ ನಾಯಕರದ್ದು. ಜೊತೆಗೆ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಡೆಸಿದ ಸರ್ವೇಗಳಲ್ಲಿ ಸೌಮ್ಯ ರೆಡ್ಡಿ ಪರವಾಗಿರುವುದು ಸೌಮ್ಯ ರೆಡ್ಡಿಯವರಲ್ಲಿ ಗೆಲುವಿನ ಆತ್ಮವಿಶ್ವಾಸ ಹೆಚ್ಚಿಸಿದೆ.

ಕಳೆದ 32 ವರ್ಷಗಳಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ದಿಗ್ವಜಯವನ್ನೇ ಸಾಧಿಸಿರುವ ಭಾರತೀಯ ಜನತಾ ಪಕ್ಷ 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.  ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಎಂಟರ ಪೈಕಿ 5 ಸ್ಥಾನಗಳಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ. ಮೂರರಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸಿದೆ.  ಅಲ್ದೇ ಈ ಸಲ ಬಿಜೆಪಿ ಜೆಡಿಎಸ್ ಮೈತ್ರಿ ಇರೋದ್ರಿಂದ ಅಭ್ಯರ್ಥಿಯ ಬಲವೂ ಹೆಚ್ಚಾಗಲಿದೆ.

ಕ್ಷೇತ್ರದ ಇತಿಹಾಸ ಕೆದಕಿದ್ರೆ ಇದು ಕಾಂಗ್ರೆಸ್ ಗೆ ಒಲಿದಿದ್ದು ಕಡಿಮೆಯೇ. 1977 ರಿಂದ 2019 ರ ಅವಧಿಯಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷ ಒಮ್ಮೆ ಮಾತ್ರ ಗೆಲುವು ಸಾಧಿಸಿದೆ. ಅದ್ರಲ್ಲೂ 1996 ರಿಂದ 2014 ರವರೆಗೆ ನಡೆದ ಆರು ಚುನಾವಣೆಗಳಲ್ಲಿ ಬಿಜೆಪಿಯಿಂದ ಅನಂತಕುಮಾರ್‌ ಸತತ ಗೆಲುವು ಸಾಧಿಸುತ್ತಾ ಬಂದಿದ್ದರು. ಅವರ ನಿಧನದ ಬಳಿಕ 2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿ ಸೂರ್ಯ ಅವರು ಗೆಲುವು ಸಾಧಿಸಿದರು. ಈ ಬಾರಿಯೂ ತೇಜಸ್ವಿ ಸೂರ್ಯ ಅವ್ರಿಗೇ ಬಿಜೆಪಿ ಟಿಕೆಟ್ ನೀಡಲಾಗಿದೆ. ಯಾಕಂದ್ರೆ ಕ್ಷೇತ್ರದಲ್ಲಿ ಬ್ರಾಹ್ಮಣ ಮತದಾರರ ಸಂಖ್ಯೆ ಹೆಚ್ಚಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೇ ನೇರ ಹಣಾಹಣಿ ನಡೆಯಲಿದೆ. ಮಹಿಳಾ ಮತದಾರರೇ ಹೆಚ್ಚಿರುವ ಬೆಂಗಳೂರು ದಕ್ಷಿಣದಲ್ಲಿ ಈ ಬಾರಿ ಮುಸ್ಲಿಂ ಮತ್ತು ಒಕ್ಕಲಿಗ ಮತ ಬ್ಯಾಂಕ್ ವಿಭಜನೆ ಆಗುವ ಅವಕಾಶಗಳಿವೆ. ಬೆಂಗಳೂರಿನ ಉಸ್ತುವಾರಿಯೂ ಆಗಿರುವ ಡಿ.ಕೆ ಶಿವಕುಮಾರ್ ಅವರ ತಂತ್ರಗಾರಿಗೆ ವರ್ಕೌಟ್ ಆಗುತ್ತೆ ಎಂಬುದು ಕಾಂಗ್ರೆಸ್ಸಿಗರ ಲೆಕ್ಕಾಚಾರ. ಆದ್ರೆ ಬಿಜೆಪಿಗೆ ದಿವಂಗತ ಅನಂತ್ ಕುಮಾರ್ ಹೆಸರು, ಹಿಂದುತ್ವ ಮತ್ತು ಪ್ರಧಾನಿ ಮೋದಿ ವರ್ಚಸ್ಸು, ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳು ಹಾಗೂ ಜೆಡಿಎಸ್ ನಾಯಕರ ಬೆಂಬಲ ಪ್ಲಸ್ ಆಗಲಿದೆ. ಆದ್ರೆ ಮೈತ್ರಿ ಒಳೇಟು ಬೀಳುವ ಆತಂಕವೂ ಇದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.  )

ಒಟ್ಟಾರೆ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕಾಂಗ್ರೆಸ್​ ರಾಜ್ಯದಲ್ಲಿ ಬಿಜೆಪಿಗೆ ಠಕ್ಕರ್​ ಕೊಡಲು ಯೋಜನೆ ರೂಪಿಸಿಕೊಳ್ಳುತ್ತಿದೆ. ಮತ್ತೊಂದೆಡೆ 2019ರ ಚುನಾವಣೆಯಂತೆ ಅಭೂತಪರ್ವ ಗೆಲುವು ಸಾಧಿಸಿ ದೇಶಕ್ಕೆ 3ನೇ ಬಾರಿಗೆ ನರೇಂದ್ರ ಮೋದಿಯನ್ನ ಪ್ರಧಾನಿ ಮಾಡಲು ಬಿಜೆಪಿ ಸಜ್ಜಾಗುತ್ತಿದೆ. ಆದ್ರೆ ಗೆಲುವು, ಸೋಲು ಎಲ್ಲವೂ ಮತದಾರರ ಕೈಯಲ್ಲೇ ಇದೆ.

Sulekha