ಬೆಂಗಳೂರಿನಲ್ಲಿ ರಣ ಭೀಕರ ಮಳೆ – ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು 7 ಸಾವು!?

ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಬಿಸಿಲಿನ ಝಳಕ್ಕೆ ಹೈರಾಣಾಗಿದ್ದ ಜನರಿಗೆ ಇದೀಗ ವರುಣ ಶಾಕ್ ನೀಡಿದ್ದಾನೆ. ಸಂಜೆಯಾಗುತ್ತಿದ್ದಂತೆ ನಗರದಾದ್ಯಂತ ಬಿರುಗಾಳಿ, ಗುಡುಗು ಸಮೇತ ಧಾರಾಕಾರವಾಗಿ ಆಲಿಕಲ್ಲು ಮಳೆ ಸುರಿದಿದೆ. ದಿಢೀರ್ ಸುರಿಯುತ್ತಿರುವ ಮಳೆರಾಯನ ಆರ್ಭಟಕ್ಕೆ ಸಿಟಿ ಮಂದಿ ಬೆಚ್ಚಿಬಿದ್ದಿದ್ದಾರೆ. ಜನರು ಸೇರಿದಂತೆ ವಾಹನ ಸವಾರರು ಪರದಾಡುವಂತಾಗಿದೆ.
ಸಂಜೆ ಸುರಿದ ಭಾರೀ ಮಳೆಗೆ ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದು 7 ಜನ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೃತಪಟ್ಟವರ ಪೈಕಿ ಕೆಲವರು ಫುಟ್ಪಾತ್ ಬಳಿ ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಮೃತಪಟ್ಟವರ ಪೈಕಿ ಪಾದಚಾರಿಗಳು ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಗೋಡೆ ಕುಸಿದ ಬೆನ್ನಲ್ಲೇ ಅಲ್ಲಿದ್ದ ಸಾರ್ವಜನಿಕರು ರಕ್ಷಣಾ ಕಾರ್ಯ ನಡೆಸಿ ಕೆಲವರನ್ನು ರಕ್ಷಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ದುರಂತ ಹೇಗಾಯ್ತು?
ಹಳೆಯ ಗೋಡೆಗೆ ದೊಡ್ಡ ಟಾರ್ಪಲ್ ಹಾಕಿ ವ್ಯಾಪಾರ ಮಾಡುತ್ತಿದ್ದರು. ದಿಢೀರನೆ ಮಳೆ ಜೋರಾಗಿ ಸುರಿದ ಕಾರಣ ರಕ್ಷಣೆಗೆ ವ್ಯಾಪಾರಿಗಳು ಮತ್ತು ಪಾದಾಚಾರಿಗಳು ಟಾರ್ಪಲ್ ಆಡಿ ನಿಂತಿದ್ದಾರೆ. ಈ ವೇಳೆ ಬಿರುಗಾಳಿ ಸಹಿತ ಮಳೆಗೆ ಗೋಡೆ ಕುಸಿದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇನ್ನು ಭಾರಿ ಮಳೆಯಿಂದ ವಿಧಾನಸೌಧಕ್ಕೂ ಮಳೆ ನೀರು ನುಗ್ಗಿದೆ. ವಿಧಾನಸೌಧ ಮೊದಲ ಮಹಡಿ ಕಾರಿಡಾರ್ ಹಾಗೂ ವಿಪಕ್ಷ ನಾಯಕರ ಕೊಠಡಿಗೂ ಮಳೆ ನೀರು ನುಗ್ಗಿದ್ದು, ಫೈಲ್, ಕಂಪ್ಯೂಟರ್, ಟೇಬಲ್ಗಳು ಮಳೆ ನೀರಿಗೆ ಒದ್ದೆಯಾಗಿವೆ. ಜೊತೆಗೆ ಕೆಎಸ್ಆರ್ಟಿಸಿ ಆಸ್ಪತ್ರೆಗೂ ಮಳೆ ನೀರು ನುಗ್ಗಿದೆ. ಭಾರಿ ಗಾಳಿಯಿಂದ ಶಿವಾನಂದ ವೃತ್ತದ ಬಳಿ ಕ್ರೆಸೆಂಟ್ ರಸ್ತೆಯಲ್ಲಿ ಬೃಹತ್ ಮರವೊಂದು ಬಿದ್ದ ಹಿನ್ನೆಲೆ 3 ಕಾರು ಮತ್ತು 4 ಬೈಕ್ ಜಖಂಗೊಂಡಿವೆ.

ನೋಡಿರಿ

