ಅಬ್ಬಾ.. 8 ತಿಂಗಳ ಕುರಿಗೆ ಲಕ್ಷ ಲಕ್ಷ – ಸಖತ್ ಟ್ರೆಂಡ್ ಆಯ್ತು ಬಂಡೂರು ತಳಿ
ಭರ್ಜರಿ ಲಾಭ, ಏನಿದರ ವಿಶೇಷ?

ರಾಜ್ಯದಲ್ಲಿ ಮಂಡ್ಯ ಜಿಲ್ಲೆಯ ಬಂಡೂರು ಕುರಿಗೆ ಎಲ್ಲಿಲ್ಲದ ಬೇಡಿಕೆ. 20 ಸಾವಿರ ರೂ.ಗೆ ಖರೀದಿ ಮಾಡಿದ್ದ ಬಂಡೂರು ಟಗರನ್ನು ತಳಿ ಅಭಿವೃದ್ಧಿಗಾಗಿ ಶಿವಮೊಗ್ಗ ಮೂಲದ ವ್ಯಕ್ತಿಯೊಬ್ಬರು ಬರೋಬ್ಬರಿ 1.48 ಲಕ್ಷ ರೂ.ಗೆ ಖರೀದಿ ಮಾಡಿದ್ದಾರೆ. ಈ ಸಾಕಷ್ಟು ಜನ ಬಗ್ಗೆ ಸರ್ಚ್ ಮಾಡುತ್ತಿದ್ದಾರೆ. ಇದನ್ನ ಸಾಕಿದ್ರೆ ಏನೆಲ್ಲಾ ಲಾಭ ಅನ್ನೋ ಮಾಹಿತಿ ಪಡೆಯುತ್ತಿದ್ದಾರೆ. ಅಂದಹಾಗೇ ಈ ಬಂಡೂರು ಕುರಿ ಮಾಂಸದ ರುಚಿ ಬೇರೆ ತಳಿಯ ಕುರಿ, ಟಗರು, ಮೇಕೆಗಳಲ್ಲಿ ಸಿಗುವುದಿಲ್ಲ. ಏಕೆಂದರೆ, ಅವುಗಳಲ್ಲಿ ಕೊಬ್ಬು ಮಾಂಸದಿಂದ ಪ್ರತ್ಯೇಕವಾಗಿದ್ದರೆ ಬಂಡೂರು ಕುರಿಯಲ್ಲಿ ಮಾತ್ರ ಮಾಂಸದ ನಡುವಿನಲ್ಲಿಯೇ ತೆಳುವಾದ ಕೊಬ್ಬಿನ ಎಳೆ ಇರುತ್ತದೆ. ಆದ್ದರಿಂದಲೇ ಬಂಡೂರು ತಳಿ ಕುರಿಗೆ ಭಾರೀ ಡಿಮ್ಯಾಂಡ್.
ಅಂದಹಾಗೆ, ಈ ತಳಿಯ ಕುರಿಗಳಿಗೆ ಬಂಡೂರು ಹೆಸರು ಬರಲು ಕಾರಣವಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಬಂಡೂರು ಇವುಗಳ ತವರು. ಈ ಕಾರಣಕ್ಕಾಗಿಯೇ ಬಂಡೂರು ಕುರಿ ಎಂದೇ ಪ್ರಸಿದ್ಧಿ ಪಡೆದಿದೆ.ಗಿಡ್ಡಕಾಲು, ಅಗಲ ದೇಹ, ಕುತ್ತಿಗೆಯಲ್ಲಿ ಗಂಟೆಯಂತಹ ಎರಡು ಕೊಳ್ಳು, ಮೈ ತುಂಬಾ ಸೊಂಪಾಗಿ ಬೆಳೆದ ಕೂದಲು-ಇವುಗಳಿಂದ ಈ ಕುರಿಗಳನ್ನು ಸುಲಭವಾಗಿ ಗುರುತಿಸಬಹುದು. ಮುಂದಿನಿಂದ ಮುದ್ದಾಗಿ ಕಾಣುವ ಈ ಕುರಿಗಳು, ಮನುಷ್ಯರಿಗೆ ಬಲುಬೇಗ ಒಗ್ಗಿಕೊಳ್ಳುತ್ತವೆ. ಹೀಗಾಗಿ ಇವುಗಳನ್ನು ಸಾಕುವುದು ಸುಲಭ. ನಿತ್ಯ ಹುರುಳಿ, ಜೋಳದಂತಹ ಧಾನ್ಯಗಳು, ಒಣಹಣ್ಣುಗಳು, ಹಾಲಿನಂತಹ ಪೌಷ್ಟಿಕ ಆಹಾರ ನೀಡಿ ಚೆನ್ನಾಗಿ ಸಾಕುವವರೂ ಇದ್ದಾರೆ.
ಇದನ್ನೂ ಓದಿ: ಸಮುದ್ರದಲ್ಲಿ ಭದ್ರತೆ ಹೇಗಿರುತ್ತೆ? – ಸ್ಕ್ಯಾಮ್‌ಗಳಿಗೆ ಹೇಗೆ ಬ್ರೇಕ್ ಬೀಳುತ್ತೆ?
ಹಾಲು ಕುಡಿಯುವ ಮೂರು ತಿಂಗಳ ಮರಿಗೆ ಕನಿಷ್ಠ * 12 ರಿಂದ * 15 ಸಾವಿರ ಬೆಲೆ ಇದ್ದರೆ, 20 ರಿಂದ 25 ಕೆ.ಜಿ. ತೂಗುವ ಕುರಿಗಳಿಗೆ * 50 ರಿಂದ ₹ 60 ಸಾವಿರ ಬೆಲೆ ಇದೆ.2 ಲಕ್ಷದ ತನಕ ಬಂಡೂರು ಕುರಿ ಮಾರಾಟವಾಗಿವೆ. ಈ ತಳಿಯ ಕುರಿ ಸಾಕಾಣಿಕೆ ಲಾಭದಾಯಕ. ಆದ್ದರಿಂದ ಬಂಡೂರು ಕುರಿಯನ್ನೇ ಸಾಕುವ ಟ್ರೆಂಡ್ ಹೆಚ್ಚಾಗುತ್ತಿದೆ. ವಿದ್ಯಾವಂತ ಯುವಕರು ಹೆಚ್ಚು ಕುರಿಗಳನ್ನು ಒಟ್ಟಿಗೆ ಸಾಕಲು ಮುಂದಾಗುತ್ತಿರುವುದರಿಂದ ಸಾಕುವ ಜಾ ಸ್ವರೂಪವೂ ಬದಲಾಗುತ್ತಿದೆ. ಆಧುನಿಕತೆಗೆ ತಕ್ಕಂತೆ, ಅಟ್ಟಣಿಗೆಯ ಮೇಲೆ ಸಾಕುವ ಕ್ರಮವನ್ನು ಅನುಸರಿಸಲಾಗುತ್ತಿದೆ. ಗೊಬ್ಬರವೆಲ್ಲ ಕೆಳಗೆ ಬೀಳುವುದರಿಂದ ನಿರ್ವಹಣೆ ಸುಲಭವಾಗಿದೆ. ಗಲೀಜಾಗುವುದು, ರೋಗಗಳು ಬಾರದಂತೆ ತಡೆಯಲು ಇದರಿಂದ ಸಾಧ್ಯ.
ಕೋವಿಡ್ ಕಾಲಘಟ್ಟದಲ್ಲಿ ನಗರ ತೊರೆದು ಊರಿಗೆ ಮರಳಿರುವವರು ಹೈನುಗಾರಿಕೆ, ಮುಖ್ಯವಾಗಿ ಬಂಡೂರಿನ ಬೆನ್ನೇರಿದ್ರು. ಬಕ್ರೀದ್ ಹಬ್ಬದ ಸಮಯಕ್ಕಾದರೂ ಮಾರಾಟ ಮಾಡಬಹುದು ಎಂಬ ಭರವಸೆ ಇರುವುದರಿಂದ ಮಂಡ್ಯ ಜಿಲ್ಲೆಯ ಹೆಚ್ಚಿನವರು ಮನೆಯಲ್ಲಿ ಒಂದಾದರೂ ಬಂಡೂರು ಟಗರು ಕಟ್ಟುತ್ತಿದ್ದಾರೆ. ಈ ತಳಿಯ ಕುರಿಗಳ ಸಾಕಣೆಯನ್ನು ಪ್ರೋತ್ಸಾಹಿಸಲು ಸರ್ಕಾರ ಮುಂದಾಗಿದೆ. ಹಸು-ಎಮ್ಮೆಗಳಿಗೆ ಕೃತಕ ಗರ್ಭಧಾರಣೆ ಮಾಡುತ್ತಿರುವಂತೆ ಶುದ್ಧ ಬಂಡೂರು ಟಗರಿನ ವೀರ್ಯ ಸಂಗ್ರಹಿಸಿ, ಕುರಿಗಳಿಗೂ ಕೃತಕ ಗರ್ಭಧಾರಣೆ ಮಾಡಲಾಗುತ್ತಿದೆ. ಇದ್ರ ಅಭಿವೃದ್ಧಿಗೆ ಕೂಡ ಲಕ್ಷ ಲಕ್ಷ ಕೂಟ್ಟು ಖರೀದಿ ಮಾಡ್ತಾರೆ.
ದೇಹದ ಆಕಾರ ಅಥವಾ ವರ್ತನೆಯನ್ನು ಗಮನಿಸಿ ಬಂಡೂರು ಕುರಿಯಲ್ಲಿ ಹಲವು ಉಪತಳಿಗಳನ್ನು ರೈತರು ಗುರುತಿಸುತ್ತಾರೆ. ಸಂಕೋಚ ಅಥವಾ ಬೆದರುವ ಕುರಿಗಳಿಗೆ ಹುಚ್ಚು ಕುರಿ ಎನ್ನುತ್ತಾರೆ. ಹಾಗೆಯೇ, ಕಪನಿ, ಕರಗಿ, ದೊಡ್ಡಿ, ಸೀರಿ, ಕೊನ್ನಾರೆ, ಹೊಟ್ಟೆನೋವು… ಹೀಗೆ ಹಲವನ್ನು ಉಲ್ಲೇಖಿಸುತ್ತಾರೆ. ‘ಇವೆಲ್ಲವೂ ಆಯಾ ಪ್ರದೇಶದ ರೈತರು ಇಟ್ಟುಕೊಂಡಿರುವ ಹೆಸರಗಳೇ ಹೊರತು ಯಾವುದೇ ಉಪತಳಿಯನ್ನು ವೈಜ್ಞಾನಿಕವಾಗಿ ಗುರುತಿಸಿಲ್ಲ.. ಹೀಗೆ ಬಂಡೂರು ಕುರಿಗೆ ಬಹು ಬೇಡಿಕೆಯಿದ್ದು, ರೈತರ ಬಂಡೂರು ಬೆನ್ನೇರುತ್ತಿದ್ದಾರೆ.