ದೇವಾಲಯಗಳ ಸುತ್ತ ತಂಬಾಕು ಬಳಕೆ ಹಾಗೂ ಮಾರಾಟ ನಿಷೇಧ – ನಿಯಮ ಪಾಲಿಸದಿದ್ರೆ ಕಠಿಣ ಕ್ರಮ !

ದೇವಾಲಯಗಳ ಸುತ್ತ ತಂಬಾಕು ಬಳಕೆ ಹಾಗೂ ಮಾರಾಟ ನಿಷೇಧ – ನಿಯಮ ಪಾಲಿಸದಿದ್ರೆ ಕಠಿಣ ಕ್ರಮ !

ಬೆಂಗಳೂರು: ಗುಟ್ಕಾ, ಪಾನ್‌ ಮಸಾಲ, ಬೀಡಿ, ಸಿಗರೇಟ್‌ ಮುಂತಾದ ತಂಬಾಕು ಉತ್ಪನ್ನಗಳನ್ನು ದೇವಾಲಯಗಳ ಆವರಣದ ಸುತ್ತಮುತ್ತ ನೂರು ಮೀಟರ್ ವ್ಯಾಪ್ತಿಯಲ್ಲಿ ಮಾರಾಟ ಹಾಗೂ ಬಳಕೆ ನಿಷೇಧಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ದೇವಾಲಯದ ಹೊರಭಾಗದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹೆಚ್ಚಾಗಿದ್ದು, ಗುಟ್ಖಾ ತಿಂದು ಕಾಂಪೌಂಡ್ ಸುತ್ತಮುತ್ತ ಉಗಿಯುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ, ಸಿಗರೇಟು ಬಳಕೆಗೆ ನಿಷೇಧವಿದ್ದರೂ ಬಳಕೆ ಮಾಡುತ್ತಿದ್ದಾರೆ. ಇದರಿಂದ ದೇವಾಲಯಕ್ಕೆ ಬರುವ ಭಕ್ತರ ಭಾವನೆಗೆ ಧಕ್ಕೆ ಆಗುವುದು ಮಾತ್ರವಲ್ಲದೆ ಕಿರಿಕಿರಿಯಾಗುತ್ತಿದೆ. ಈ ಸಂಬಂಧ ಇಲಾಖೆಗೆ ಹಾಗೂ ದೇವಾಲಯಗಳಿಗೂ ಭಕ್ತರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ದೇವಾಲಯದ ಸುತ್ತಮುತ್ತ ನೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಹಾಕಲು ಕ್ರಮ ವಹಿಸಲಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ತಂಬಾಕು ಉತ್ಪನ್ನಗಳನ್ನು ದೇವಾಲಯಗಳ ಆವರಣದ ಸುತ್ತಮುತ್ತ ನೂರು ಮೀಟರ್ ವ್ಯಾಪ್ತಿಯಲ್ಲಿ ಮಾರಾಟ ಹಾಗೂ ಬಳಕೆ ನೀಷೇಧಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಹೊಸ ನಿಯಮ ಇಲಾಖೆ ವ್ಯಾಪ್ತಿಯ ಎಲ್ಲಾ 33 ಸಾವಿರ ದೇವಾಲಯಗಳಿಗೂ ಅನ್ವಯ ಆಗಲಿದೆ. ಈ ನಿಯಮವನ್ನು ಪಾಲನೆ ಮಾಡದಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ವಾಹನಗಳಿಗೂ ಬಂತು ‘ರಕ್ಷಾ ಕ್ಯೂಆರ್’ ಕೋಡ್ – ಅಪಘಾತವಾದ್ರೆ ಮನೆಯವರು, ಪೊಲೀಸರು, ಆಸ್ಪತ್ರೆಗೆ ಬರುತ್ತೆ ಸಂದೇಶ!

ಮಕ್ಕಳಿಗೆ ಹಾಲುಣಿಸುವ ಕೇಂದ್ರ

ಇನ್ನು ದೇವಾಲಯಗಳಿಗೆ ಬರುವ ಬಹಳಷ್ಟು ಭಕ್ತರು ಮಕ್ಕಳೊಂದಿಗೆ ಹರಕೆ ತೀರಿಸುವುದು ಸೇರಿ ನಾನಾ ಕೋರಿಕೆಗಳೊಂದಿಗೆ ಆಗಮಿಸುತ್ತಾರೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಹಾಲುಣಿಸಲು ಸಮಸ್ಯೆ ಆಗುತ್ತಿತ್ತು. ಅದಕ್ಕಾಗಿ ದೇವಾಲಯಗಳ ಆವರಣದಲ್ಲಿ ಮಕ್ಕಳಿಗೆ ಹಾಲುಣಿಸುವ ಕೇಂದ್ರಗಳನ್ನು ಸ್ಥಾಪಿಸಲು ಕ್ರಮವಹಿಸಲಾಗುತ್ತಿದೆ. ಈಗಾಗಲೇ ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿ ಹಾಲುಣಿಸುವ ಕೇಂದ್ರ ತೆರೆಯಲಾಗಿದೆ.

ಮೊಬೈಲ್ ಬ್ಯಾನ್

ಈ ಹಿಂದೆ ದೇವಾಲಯ ಗಳಲ್ಲಿ ಮೊಬೈಲ್ ಬಳಕೆಯಿಂದಾಗಿ ಅರ್ಚಕರು ಸೇರಿ ಹಲವು ಭಕ್ತರಿಗೆ ಕಿರಿಕಿರಿ ಉಂಟಾಗುತ್ತಿತ್ತು. ಗಂಟೆಗಟ್ಟಲೆ ಸರದಿಯಲ್ಲಿ ಸಾಗಿ ಬಂದವರಿಗೆ ಮೊಬೈಲ್ ಹಾವಳಿಯಿಂದ ಸರಿಯಾಗಿ ದೇವರ ದರ್ಶನ ಮಾಡಲು ಸಾಧ್ಯ ವಾಗುತ್ತಿರಲಿಲ್ಲ. ಹಾಗಾಗಿ ದೇವಾಲಯಗಳಲ್ಲಿ ದೇವರ ದರ್ಶನ ವೇಳೆ ಮೊಬೈಲ್ ಬಳಕೆ ನಿಷೇಧ ಮಾಡಲಾಗಿದೆ. ಅದೇ ರೀತಿ ಸ್ವಚ್ಛತೆ ದೃಷ್ಟಿಯಿಂದ ಪ್ಲಾಸ್ಟಿಕ್ ಬಳೆಕೆಗೂ ಕಡಿವಾಣ ಹಾಕಲಾಗಿದೆ.

Shwetha M