ರಾಜ್ಯದಲ್ಲಿ ಹುಕ್ಕಾ ಸೇವನೆ, ಮಾರಾಟ ಬ್ಯಾನ್ – ತಕ್ಷಣದಿಂದಲೇ ಆದೇಶ ಜಾರಿ

ರಾಜ್ಯದಲ್ಲಿ ಹುಕ್ಕಾ ಸೇವನೆ, ಮಾರಾಟ ಬ್ಯಾನ್ – ತಕ್ಷಣದಿಂದಲೇ ಆದೇಶ ಜಾರಿ

ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮತ್ತು ತಂಬಾಕು ರಹಿತ ಹುಕ್ಕಾ ಬಳಕೆ ಮತ್ತು ಮಾರಾಟ, ಸೇವನೆಯನ್ನ ಬ್ಯಾನ್‌ ಮಾಡಿದೆ. ಈ ಸಂಬಂಧ ಆರೋಗ್ಯ ಇಲಾಖೆ ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ನೀಡಿದೆ.

ವಿಶ್ವ ಆರೋಗ್ಯ, ಸಂಸ್ಥೆ (WHO) ನಡೆಸಿರುವ ಗ್ಲೋಬಲ್ ಅಡಲ್ಸ್ ಟೊಬ್ಯಾಕೊ ಸರ್ವೇ 2016-17,  ಅಧ್ಯ ಯನದ ಪ್ರಕಾರ, ಕರ್ನಾಟಕದಲ್ಲಿ 22.8% ವಯಸ್ಕರು ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿದ್ದಾರೆ. ಈ ಪೈಕಿ ಶೇ.8.8 ರಷ್ಟು ಮಂದಿ ಧೂಮಪಾನಿಗಳಾಗಿದ್ದಾರೆ. ಕರ್ನಾಟಕದಲ್ಲಿ 23.9% ವಯಸ್ಕರು ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟಾಗಿ ಧೂಮಪಾನ ಮಾಡುತ್ತಾರೆ.  ಇದು ರಾಜ್ಯದಲ್ಲಿ ತಂಬಾಕು ಸೇವನೆಯ ವ್ಯಾಪಕ ಅಪಾಯವನ್ನು ತೆರೆದಿಟ್ಟಿದ್ದು, ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಹುಕ್ಕಾ ಉತ್ಪನ್ನಗಳ ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ.

ಇದನ್ನೂ ಓದಿ: ಬಾಡಿಗೆ ಮನೆ ನಿವಾಸಿಗಳಿಗೆ ಸರ್ಕಾರದಿಂದ ಗುಡ್‌ನ್ಯೂಸ್‌! – ಗೃಹಜ್ಯೋತಿ ಯೋಜನೆಯ ನಿಯಮದಲ್ಲಿ ಬದಲಾವಣೆ

ಯುವ ಜನತೆಯು ಇತ್ತೀಚಿನ ವರ್ಷಗಳಲ್ಲಿ ತಂಬಾಕು ಉತ್ಪನ್ನಗಳತ್ತ ಹೆಚ್ಚು ಆಕರ್ಷಿತರಾಗುತ್ತಿರುವುದು WHO ಗ್ಲೋಬಲ್ ಯೂತ್ ಟೊಬ್ಯಾಕೊ ಸರ್ವೇ (2019)ಯಲ್ಲಿ ದೃಢಪಟ್ಟಿದೆ. 13 ರಿಂದ15 ವರ್ಷ ವಯಸ್ಸಿನ ಸುಮಾರು ಐದನೇ ಒಂದು ಭಾಗದಷ್ಟು ವಿದ್ಯಾರ್ಥಿಗಳು ಹಲವು ಬಗೆಯ ತಂಬಾಕು ಸೇವಿಸುತ್ತಿದ್ದಾರೆ. ತಂಬಾಕು ಒಳಗೊಂಡ ಶಿಶಾ ಮತ್ತು “ಹರ್ಬಲ್” ಶಿಶಾ ಇವೆಲ್ಲವೂ ವಿಷಕಾರಿ ಹೊಗೆಯನ್ನು ಹೊರಸೂಸುವುದರಿಂದ ಕ್ಯಾನ್ಸರ್, ಹೃದ್ರೋಗ ಹಾಗೂ ಶ್ವಾಸಕೋಶದ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂಬ ಮಹತ್ವದ ಅಂಶ ಸಂಶೋಧನೆಯಿಂದ ತಿಳಿದುಬಂದಿದೆ.

ತಂಬಾಕಿನ ಅತಿಯಾದ ಬಳಕೆಯಿಂದಾಗಿ ರಾಜ್ಯ ಸರ್ಕಾರದ ಮೇಲೆ ಹೆಚ್ಚಿನ ಆರ್ಥಿಕ ಹೊರೆಯೂ ಬೀಳುತ್ತಿದೆ. 35 ರಿಂದ 69 ವರ್ಷ ವಯಸ್ಸಿನ ವ್ಯಕ್ತಿಗಳಲ್ಲಿನ ತಂಬಾಕು ಸಂಬಂಧಿತ ಕಾಯಿಲೆಗಳ ಚಿಕಿತ್ಸೆಗಾಗಿ ರಾಜ್ಯ ಸರ್ಕಾರವು  2011ರಲ್ಲಿ 983 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ. ಇದು ತಂಬಾಕು ಉತ್ಪನ್ನಗಳ ಬಳಕೆಗೆ ತಡೆಯೊಡ್ಡುವ ಅನಿವಾರ್ಯತೆಯನ್ನು ಎತ್ತಿ ತೋರಿಸುತ್ತದೆ.  ತಂಬಾಕು ಬಳಕೆಯ ಮೂಲಕ ಮಾದಕ ದ್ರವ್ಯ ವ್ಯಸನಕ್ಕೆ ಒಳಗಾಗುತ್ತಿರುವುದು ಸರ್ಕಾರ ಗಮನಿಸಿದೆ. ಒಪಿಯಾಡ್ ಬಳಕೆಯಲ್ಲಿ  ಅತಿಯಾದ ಹೆಚ್ಚಳ ಮತ್ತು ತಂಬಾಕು ಸೇವನೆಯು ಮಾದಕ ವ್ಯಸನದೆಡೆಗಿನ ಮೊದಲ ಹೆಜ್ಜೆ ಎಂಬುದನ್ನು ವಿಶ್ವ ಡ್ರಗ್ಸ್ ವರದಿ-2022 ಯಲ್ಲಿ ಉಲ್ಲೇಖಿಸಲಾಗಿದೆ.

ವಿಶೇಷವಾಗಿ ರಾಜ್ಯ ಸರ್ಕಾರವು ಹೇರಿದ ನಿಷೇದವು, ಕೋಟ್ಪಾ 2003 ಮತ್ತು ಬಾಲ ನ್ಯಾಯ ಕಾಯಿದೆ, 2015 ಸೇರಿದಂತೆ ಕಾನೂನು ನಿಬಂಧನೆಗಳಿಂದ ಬೆಂಬಲಿತವಾಗಿದೆ. ಈ ನಿಯಮಗಳೆಲ್ಲವನ್ನೂ ಮೀರಿ ಹುಕ್ಕಾ ಬಾರ್‌ಗಳು ಇದುವರೆಗೂ ಕಾರ್ಯಾಚರಿಸುತ್ತಿತ್ತು. ರಾಜ್ಯದ ಜನತೆಯ ಆರೋಗ್ಯವನ್ನು ಸಂರಕ್ಷಿಸಲು ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಅಪಾಯಕಾರಿ ಅಂಶಗಳ ವಿರುದ್ದದ ದಿಟ್ಟ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ಹುಕ್ಕಾ ಬ್ಯಾನ್ ಮೂಲಕ ಕರ್ನಾಟಕದ ಮಾನ್ಯ ಆರೋಗ್ಯ ಸಚಿವ ದಿನೇಶ್‌ ಗುಂಡುರಾವ್‌  ತಿಳಿಸಿದ್ದಾರೆ.

Shwetha M