ಬಲೂಚ್ ಆಟಕ್ಕೆ ಬೆಚ್ಚಿದ ಪಾಕ್ – ಏನಿದು ಬಲೂಚಿಸ್ತಾನ್ ಆರ್ಮಿ ದಂಗೆ?
ಕೊಂ*ದು ಎಸೆಯೋ ನೀತಿ ತಂದಿದ್ದೇಕೆ?

ಬಲೂಚ್ ಆರ್ಮಿ ಜಾಫರ್ ಎಕ್ಸ್‌ಪ್ರೆಸ್ ಅನ್ನು ಅಪಹರಿಸಿ ಪಾಕಿಸ್ತಾನಿ ಸೇನಾ ಸಿಬ್ಬಂದಿಯನ್ನು ಕೊಂದು ಹಾಕಿತ್ತು. ನಂತರ ಪಾಕಿಸ್ತಾನ ಸೇನಾ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿ 90 ಸೈನಿಕರನ್ನು ಕೊಂದಿದ್ದಾಗಿ ಬಲೂಚ್ ಆರ್ಮಿ ಹೇಳಿಕೊಂಡಿತ್ತು. ಇದು ಒಂದು ರೀತಿ ಪಾಕ್ ಸೈನಿಕರಲ್ಲಿ ಭಯ ಹುಟ್ಟಿಸಿದೆ. ಹೀಗಾಗಿ ಪಾಕಿಸ್ತಾನಿ ಸೈನಿಕರು ಸೇನೆಯನ್ನು ಬಿಟ್ಟು ಓಡಿಹೋಗುತ್ತಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇಲ್ಲಿಯವರೆಗೆ, 2500 ಸೈನಿಕರು ಪಲಾಯನ ಮಾಡಿದ್ದಾರೆ ಎನ್ನಲಾಗಿದೆ. ಬಿಎಲ್‌ಎ ನಡೆಸಿದ ಈ ದಾಳಿಗಳಲ್ಲಿ ಹೆಚ್ಚಿನ ಸಂಖ್ಯೆಯ ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದರು. ಹೀಗೆ ಪಾಕಿಸ್ತಾನಿ ಸೇನೆಯ ಮೇಲೆ ನಿರಂತರ ದಾಳಿಗಳು ಮತ್ತು ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಗಳಿಂದಾಗಿ, ಸೈನಿಕರು ತಮ್ಮ ಉದ್ಯೋಗಗಳನ್ನು ತೊರೆಯುತ್ತಿದ್ದಾರೆ. ಕೆಲಸ ಬಿಟ್ಟ ಸೈನಿಕರು ಸೌದಿ ಅರೇಬಿಯಾ, ಕತಾರ್, ಕುವೈತ್ ಮತ್ತು ಯುಎಇಯಂತಹ ಮಧ್ಯಪ್ರಾಚ್ಯ ದೇಶಗಳಲ್ಲಿ ಕೆಲಸ ಮಾಡಲು ದೇಶದಿಂದ ಹೊರಗೆ ಹೋಗುತ್ತಿದ್ದಾರೆ. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡುವ ಬದಲು ವಿದೇಶಕ್ಕೆ ಹೋಗಿ ಕೆಲಸ ಮಾಡಲು ಬಯಸುತ್ತಿದ್ದಾರೆ.
ಅಫ್ಘಾನಿಸ್ತಾನ ಮತ್ತು ಇರಾನ್ ಗಡಿಯಲ್ಲಿರುವ ಬಲೂಚಿಸ್ತಾನವನ್ನು ಈ ಹಿಂದೆ ಕಲಾತ್ ಎಂದು ಕರೆಯಲಾಗುತ್ತಿತ್ತು. ಆಗಸ್ಟ್ 11, 1947 ರಂದು ಬ್ರಿಟಿಷ್ ಮೇಲ್ವಿಚಾರಣೆಯಲ್ಲಿ ಕಲಾತ್ ಮತ್ತು ಪಾಕಿಸ್ತಾನದ ನಡುವೆ ಒಪ್ಪಂದಕ್ಕೆ ಸಹಿ ಹಾಕಿ, ಕಲಾತ್‌ನ್ನು ಸ್ವತಂತ್ರ ರಾಷ್ಟ್ರವೆಂದು ಗುರುತಿಸಲಾಯಿತು. ಆದರೆ ಅದರ ಸ್ವಾತಂತ್ರ್ಯವು ಅತ್ಯಂತ ಅಲ್ಪಕಾಲಿಕವಾಗಿತ್ತು. ಮಾರ್ಚ್ 27, 1948 ರಂದು, ಪಾಕಿಸ್ತಾನವು ಬಲೂಚಿಸ್ತಾನವನ್ನು ಆಕ್ರಮಿಸಿಕೊಂಡಿತು.
ಪಾಕ್ ಜೊತೆ ವಿಲೀನಕ್ಕೆ ಏಕೆ ವಿರೋಧ?
ಏಕೀಕರಣದ ನಂತರ ಪಾಕ್ ತೆಗೆದುಕೊಂಡ ಮಿಲಿಟರಿ ಮತ್ತು ರಾಜಕೀಯ ನಿರ್ಧಾರಗಳ ಮೇಲೆ ಬಲೂಚಿಸ್ತಾನ ಕಡಿಮೆ ಪ್ರಭಾವವನ್ನು ಹೊಂದಿದೆ. ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಕೊರತೆಯಿಂದಾಗಿ ಬಲೂಚ್‌ನ ಜನ ಪಾಕ್ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.
ಏನಿದು ಬಲೂಚಿಸ್ತಾನ್ ಲಿಬರೇಷನ್ ಆರ್ಮಿ?
BLA.. ಬಲೂಚಿಸ್ತಾನ್ ಲಿಬರೇಷನ್ ಆರ್ಮಿ .. 2000ನೇ ಇಸವಿಯಲ್ಲಿ ಸ್ಥಾಪನೆಯಾಗಿದ್ದು, ಈಗ 25ನೇ ವರ್ಷಕ್ಕೆ ಕಾಲಿಟ್ಟಿದೆ. ಇದು ಸ್ಥಾಪನೆಗೊಳ್ಳುವ ಮುನ್ನವೇ ಪ್ರತ್ಯೇಕ ಬಲೂಚಿಸ್ತಾನ ಬೇಕು ಎಂಬ ಬೇಡಿಕೆ ಇತ್ತು. 2000ನೇ ಇಸವಿಯಲ್ಲಿ ಪಾಕ್ ಆಡಳಿತದ ವಿರುದ್ಧ ಸರಣಿ ಬಾಂಬ್ ಸ್ಪೋಟಿಸಿ ಬಲೂಚಿಸ್ತಾನದ ಬೇಡಿಕೆ ಮುಂದಿರಿಸಿದಾಗ ಬಿಎಲ್‌ಎ ಹೆಸರು ಹೆಚ್ಚು ಪ್ರಚಾರಕ್ಕೆ ಬಂದಿತ್ತು. ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯವನ್ನು ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಿ ಸ್ವಾತಂತ್ರ್ಯ ನೀಡುವಂತೆ ಆಗ್ರಹಿಸುತ್ತಿದೆ. ಬಲೂಚಿಸ್ತಾನ್ ಪ್ರಾಂತ್ಯವು ಭೌಗೋಳಿಕವಾಗಿ ಸ್ವಲ್ಪ ದೊಡ್ಡ ಗಾತ್ರ ಹೊಂದಿದ್ದು,ಈ ಪ್ರಾಂತ್ಯವು ಅನಿಲ, ಖನಿಜ ಸಂಪತ್ತಿಗೆ ಹೆಸರುವಾಸಿಯಾಗಿದೆ. ಇಲ್ಲಿ, ಬಿಎಲ್‌ಎ ಹೊರತಾಗಿ ಇನ್ನೂ ಕೆಲವು ಜನಾಂಗೀಯ ಬಂಡುಕೋರ ಸಂಘಟನೆಗಳೂ ಇವೆ. ಬಲೂಚಿಸ್ತಾನದ ಬೆಟ್ಟ, ಪವರ್ತ ಪ್ರದೇಶಗಳು ಬಂಡುಕೋರರಿಗೆ ಸುರಕ್ಷಿತ ತಾಣವಾಗಿವೆ. ಬಲೂಚಿಸ್ತಾನದಲ್ಲಿರುವ ಪಾಕಿಸ್ತಾನದ ಭದ್ರತಾ ಪಡೆ ಹಾಗೂ ಇತರೆ ಸೇನಾ ನೆಲೆಗಳ ಮೇಲೆ ಬಿಎಲ್‌ಎ ಪದೇಪದೆ ದಾಳಿ ನಡೆಸುತ್ತಿರುತ್ತದೆ. ಕರಾಚಿ ಬಂದರನ್ನೂ ಗುರಿಯಾಗಿಟ್ಟುಕೊಂಡು ಬಿಎಲ್‌ಎ ದಾಳಿ ನಡೆಸಿದ್ದು ಇದೆ. ಮುಂದುವರೆದು ಈಗ ಮಹಿಳಾ ಸೂಸೈಡ್ ಬಾಂಬರ್‌ಗಳನ್ನೂ ಬಿಎಲ್‌ಎ ಕಣಕ್ಕಿಳಿಸಿದೆ.
ಪಾಕ್ ಚೀನಾ ಸಂಬಂಧಕ್ಕೆ BLA ಆಕ್ರೋಶ
ಪಾಕಿಸ್ತಾನ ಸೇನೆ ಹಾಗೂ ಚೀನಾ ಸ್ನೇಹಕ್ಕೆ ಬಲೂಚ್ ಬಂಡುಕೋರರ ವಿರೋಧವಿದೆ. ಪಾಕಿಸ್ತಾನದ ಗ್ವಾದರ್‌ನ್ನು ಚೀನಾಕ್ಕೆ ಬಿಟ್ಟುಕೊಟ್ಟ ವಿಚಾರದಲ್ಲಿ ಬಲೂಚ್ ಬಂಡುಕೋರರ ವಿರೋಧ ಇದೆ. ಇಲ್ಲಿ ಬಂದರು ನಿರ್ಮಾಣ ನಡೆಯುತ್ತಿದ್ದು, ಆ ಭಾಗದಲ್ಲಿ ಅವರು ನಿರಂತರ ದಾಳಿ ನಡೆಸುತ್ತಲೇ ಇದ್ದಾರೆ. ಇನ್ನೂ ಬಿಎಲ್‌ಎ ಬಂಡುಕೋರರು ಇರಾನ್ ಹಾಗೂ ಅಫ್ಘಾನಿಸ್ತಾನದ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ.
ಬಲೂಚಿಸ್ತಾನ್ ಖನಿಜ ಸಂಪತ್ತಿಗೆ ಹೆಸರುವಾಸಿ
ಪಾಕಿಸ್ತಾನದ ಮಟ್ಟಿಗೆ ಬಲೂಚಿಸ್ತಾನ ಉತ್ತಮ ಆದಾಯ ತರುವ ಪ್ರದೇಶವಾಗಿದೆ. ಚೀನಾ ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಮೂಲಕ ಚೀನಾ ಈ ಪ್ರದೇಶದಲ್ಲಿ 65 ಶತಕೋಟಿ ಡಾಲರ್ ಹೂಡಿಕೆ ಮಾಡಿದೆ. ಈ ಪ್ರಾಂತ್ಯದಲ್ಲಿ ಬ್ಯಾರಿಕ್ ಗೋಲ್ಡ್‌ಗೆ ಸೇರಿದ ರೇಕೊ ಡಿಕ್ ಸೇರಿ ಹಲವು ಗಣಿಗಾರಿಕೆ ಯೋಜನೆಗಳಿವೆ. ಈ ಪ್ರಾಂತ್ಯದಲ್ಲೇ ಜಗತ್ತಿನ ಅತಿದೊಡ್ಡ ಚಿನ್ನ ಹಾಗೂ ತಾಮ್ರದ ಗಣಿ ಇದೆ. ಚೀನಾ ಕೂಡ ಇಲ್ಲಿಂದ ಚಿನ್ನ ಹಾಗೂ ತಾಮ್ರದ ಗಣಿಗಾರಿಕೆ ನಡೆಸುತ್ತಿದೆ. ಬಲೂಚಿಸ್ತಾನ್ ಸ್ವಾತಂತ್ರ್ಯಕ್ಕೆ ಬಿಎಲ್‌ಎ ಪಣ ಕಳೆದುಹೋದ ಸ್ವಾತಂತ್ರ್ಯವನ್ನು ಪುನಃಸ್ಥಾಪಿಸಲು ಬಲೂಚಿಸ್ತಾನ ಇನ್ನೂ ಹೋರಾಡುತ್ತಿದೆ. ಇಲ್ಲಿಯವರೆಗೆ, ಬಲೂಚಿಸ್ತಾನದಲ್ಲಿ ಐದು ವಿಭಿನ್ನ ದಂಗೆಗಳು ನಡೆದಿವೆ.
ದಂಗೆ ನಿಯಂತ್ರಣಕ್ಕೆ ಪಾಕ್ ಕೊಂದು ಎಸೆಯಿರಿ ನೀತಿ
2009 ರಲ್ಲಿ ದಂಗೆ ನಿಯಂತ್ರಣಕ್ಕೆ ಪಾಕಿಸ್ತಾನ ಸರ್ಕಾರವು ʻಕೊಂದು ಎಸೆಯಿರಿʼ ಎಂಬ ನೀತಿಯನ್ನು ಜಾರಿಗೆ ತಂದಿತು. 2009 ರಿಂದ ಹಲವಾರು ರಾಜಕೀಯ ಮತ್ತು ವಿದ್ಯಾರ್ಥಿ ಕಾರ್ಯಕರ್ತರನ್ನು ನ್ಯಾಯಾಲಯದ ಹೊರಗೆ ಕೊಲ್ಲಲಾಗಿದೆ. 2014ರ ಅಂತ್ಯದ ವೇಳೆಗೆ, ಸರ್ಕಾರದ ದೌರ್ಜನ್ಯಗಳನ್ನು ಟೀಕಿಸಲು ಪ್ರಯತ್ನಿಸಿದವರನ್ನು ಪಾಕಿಸ್ತಾನಿ ಸೈನಿಕರು ಬೇಟೆಯಾಡಿದ್ದರು. ಇದಾದ ಬಳಿಕ ಹೋರಾಟದಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಕಡಿಮೆಯಾಗಿತ್ತು. ಸಾಕಷ್ಟು ರಕ್ತ ಹರಿದಿದೆ..ಇದೆಲ್ಲದರ ವಿರುದ್ಧ ತಿರುಗಿ ಬಿದ್ದಿರುವ ಬಿಎಲ್‌ಎ ಈಗ ಪಾಕ್‌ನ್ನು ಸೆದೆ ಬಡಿಯಲು ಮುಂದಾಗಿದೆ. ಪಾಕ್ ತಪ್ಪುಗಳೇ ಈಗ ಅದಕ್ಕೆ ಶಾಪವಾಗಿದೆ.