ಯಕ್ಷಲೋಕದಿಂದ ಮರೆಯಾದ ಬಲಿಪ ನಾರಾಯಣ ಭಾಗವತ – ಕಂಚಿನ ಕಂಠದ ಯಕ್ಷ ದಿಗ್ಗಜ ಇನ್ನು ನೆನಪು ಮಾತ್ರ
ಯಕ್ಷಗಾನ ಮೇರುಭಾಗವತರಾದ ಬಲಿಪ ನಾರಾಯಣ ಭಾಗವತರು(85) ಗುರುವಾರ ಸಂಜೆ ಇಹಲೋಕ ತ್ಯಜಿಸಿದ್ದಾರೆ. ಕಳೆದ 15 ದಿನಗಳಿಂದ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ತೆಂಕುತಿತಿಟ್ಟು ಯಕ್ಷಗಾನದ ಭಾಗವತರಲ್ಲಿ ಅಗ್ರಗಣ್ಯರಾಗಿರುವ ಅವರಿಗೆ ನೂರಕ್ಕೂ ಹೆಚ್ಚು ಪ್ರಸಂಗಗಳು ಕಂಠಪಾಟವಾಗಿತ್ತು. 60 ವರ್ಷಗಳ ಕಾಲ ಕಲಾ ಸೇವೆ ಮಾಡಿರುವ ಅವರು ಪ್ರಸಿದ್ಧ ಮೇಳವಾಗಿರುವ ಕಟೀಲು ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮೇಳದ ಪ್ರಧಾನ ಭಾಗವತರಾಗಿದ್ದರು.
ಇದನ್ನೂ ಓದಿ: ಮೀನುಗಾರರಿಗೆ ‘ಬಜೆಟ್’ನಲ್ಲಿ ಭರ್ಜರಿ ಗಿಫ್ಟ್ – ಮೀನುಗಾರಿಕೆ ಉತ್ತೇಜನಕ್ಕೆ ಸೀ ಫುಡ್ ಪಾರ್ಕ್
ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದವರಾದ ಅವರು ಮೂಡುಬಿದಿರೆ ಸಮೀಪದ ನೂಯಿ ಎಂಬಲ್ಲಿ ವಾಸವಾಗಿದ್ದರು. ಪಡ್ರೆಯಲ್ಲಿ 1938ರ ಏಪ್ರಿಲ್ 13ರಂದು ಜನಿಸಿದ ಅವರು ಯಕ್ಷಗಾನದ ಹಲವಾರು ಪ್ರಸಂಗಗಳನ್ನೂ ರಚಿಸಿದ್ದಾರೆ. ಬಲಿಪರು ಐದು ದಿನದ ದೇವೀ ಮಹಾತ್ಮೆ ಮಹಾಪ್ರಸಂಗವನ್ನು ರಚಿಸಿದ್ದು ವೇಣೂರಿನ ಕಜೆ ಸುಬ್ರಹ್ಮಣ್ಯ ಭಟ್ ಮತ್ತು ಅವರ ಸ್ನೇಹಿತರು ಇದನ್ನು ಪ್ರಕಟಿಸಿದ್ದಾರೆ. ಇದು ಯಕ್ಷಗಾನದ ಇತಿಹಾಸದಲ್ಲೇ ಇದೊಂದು ಮಹತ್ವದ ಕೃತಿಯಾಗಿದೆ. ಇವರ ಪತ್ನಿ ಜಯಲಕ್ಷ್ಮಿ. ಇವರ ನಾಲ್ವರು ಪುತ್ರರ ಪೈಕಿ, ಮಾಧವ ಬಲಿಪರಿಗೆ ಹಿಮ್ಮೇಳವಾದನ ತಿಳಿದಿದ್ದು, ಶಿವಶಂಕರ ಬಲಿಪ ಉತ್ತಮ ಭಾಗವತರಾಗಿದ್ದಾರೆ. ಇವರ ಮತ್ತೊಬ್ಬ ಪುತ್ರ ದಿ.ಪ್ರಸಾದ ಬಲಿಪರು ಸಹ ಕಟೀಲು ಮೇಳದ ಪ್ರಧಾನ ಭಾಗವತರಾಗಿದ್ದರು. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ವರ್ಷವಷ್ಟೇ ನಿಧನರಾಗಿದ್ದರು. ಇನ್ನೊಬ್ಬ ಪುತ್ರ ಶಶಿಧರ್ ಬಲಿಪ ಕೃಷಿಕರು. ತೆಂಕು ತಿಟ್ಟು ಯಕ್ಷರಂಗದಲ್ಲಿ ಗುರುಸ್ಥಾನದಲ್ಲಿರುವ ಅವರ ಕಲಾಸೇವೆಯನ್ನು ಗುರುತಿಸಿ ಅನೇಕ ಪ್ರಶಸ್ತಿಗಳು ಒಲಿದು ಬಂದಿದ್ದವು.