ಮತದಾನಕ್ಕೂ ಮುನ್ನಾ ದಿನ ಬಿಜೆಪಿ ನಾಯಕರ ಭಜರಂಗಿ ಜಪ – ಆಂಜನೇಯನಿಗೆ ಡಿಕೆಶಿ ನಮನ!

ಮತದಾನಕ್ಕೂ ಮುನ್ನಾ ದಿನ ಬಿಜೆಪಿ ನಾಯಕರ ಭಜರಂಗಿ ಜಪ – ಆಂಜನೇಯನಿಗೆ ಡಿಕೆಶಿ ನಮನ!

ಕರ್ನಾಟಕ ವಿಧಾನಸಭಾ ಚುನಾವಣಾ ಮತದಾನಕ್ಕೆ ಕೌಂಟ್ ಡೌನ್ ಶುರುವಾಗಿದ್ದು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಮತದಾನಕ್ಕೂ ಮುನ್ನಾ ದಿನ ಬಿಜೆಪಿ ಆಂಜನೇಯನ ಜಪ ಮಾಡುತ್ತಿದೆ. ಭಜರಂಗಿಯ ದೇಗುಲಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಕೆ ಮಾಡುವುದರ ಜೊತೆಗೆ ಹನುಮಾನ್ ಚಾಲಿಸಾ ಪಠಣ ಮಾಡಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಶಾಂತಿ, ಸೌಹಾರ್ಧತೆ ಕದಡುವ ಮತೀಯ ಸಂಘಟನೆಗಳನ್ನ ಬ್ಯಾನ್ ಮಾಡುವುದಾಗಿ ಘೋಷಿಸಿತ್ತು. ಘೋಷಣೆ ವೇಳೆ ಬಜರಂಗದಳ ಹೆಸರನ್ನ ಪ್ರಸ್ತಾಪಿಸಿತ್ತು. ಇದನ್ನೇ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ ನಾಯಕರು ಇವತ್ತು ಭಜರಂಗಿಯ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಹಾಗೂ ಹನುಮಾನ್ ಚಾಲಿಸಾ ಪಠಣ ಮಾಡಿದ್ದಾರೆ. ಶೋಭಾ ಕರಂದ್ಲಾಜೆ, ಕೆ.ಗೋಪಾಲಯ್ಯ, ಮಾಳವಿಕಾ ಅವಿನಾಶ್ ಸೇರಿದಂತೆ ಹಲವು ಬಿಜೆಪಿ ನಾಯಕರು ಮಹಾಲಕ್ಷ್ಮೀ ಲೇಔಟ್ ನ ಪ್ರಸನ್ನ ವೀರಾಂಜನೇಯ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು. ಹಾಗೇ ಹನುಮಾನ್ ಚಾಲಿಸಾ ಪಠಣ ಮಾಡಿದ್ರು.

ಇದನ್ನೂ ಓದಿ : ಮತದಾನೋತ್ಸವಕ್ಕೆ ಸಜ್ಜಾಯ್ತು ಕರ್ನಾಟಕ – ಮತಗಟ್ಟೆಗಳ ಸುತ್ತ ಬಿಗಿ ಬಂದೋಬಸ್ತ್!

ಬೆಂಗಳೂರಿನ ವಿಜಯನಗರದಲ್ಲಿರುವ ಹರಿಹರೇಶ್ವರ ದೇಗುಲದ ಮುಂದೆ ಬಜರಂಗದಳದ ಹಾಗೂ ಬಿಜೆಪಿ ಕಾರ್ಯಕರ್ತರು ಹನುಮಾನ್ ಚಾಲಿಸ ಪಠಣ ಮಾಡುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಚುನಾವಣಾ ಅಧಿಕಾರಿಗಳು ಪಠಣ ಮಾಡದಂತೆ ಮನವಿ ಮಾಡಿದ್ರು. ಚುನಾವಣೆ ಹಿನ್ನೆಲೆ 144 ಸೆಕ್ಷನ್ ಜಾರಿಯಲ್ಲಿ ಇರೋದ್ರಿಂದ 5ಕ್ಕಿಂತ ಹೆಚ್ಚು ಜನರು ಗುಂಪುಗೂಡದಂತೆ ಎಚ್ಚರಿಕೆ ನೀಡಿದ್ರು. ಈ ವೇಳೆ ಚುನಾವಣಾಧಿಕಾರಿಗಳು ಮತ್ತು ಬಜರಂಗದಳದವರ ನಡುವೆ ವಾಗ್ವಾದ ನಡೆದಿದೆ.

ಸಿಎಂ ಬಸವರಾಜ ಬೊಮ್ಮಾಯಿ ಕೂಡ ಹುಬ್ಬಳ್ಳಿಯ ಆಂಜನೇಯ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ರು. ಸಿಎಂ ಬಸವರಾಜ ಬೊಮ್ಮಾಯಿ ಹನುಮನಿಗೆ ಪೂಜೆ ಸಲ್ಲಿಕೆ ಮಾಡಿದ್ರು. ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೂಡ ಆಂಜನೇಯನ ಮೊರೆ ಹೋಗಿದ್ರು. ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿರುವ ಆಂಜನೇಯನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಕೆ ಮಾಡಿದ್ರು.

 

suddiyaana