ಬೈಯಪ್ಪನಹಳ್ಳಿ – ಕೆಆರ್ ಪುರ ಮೆಟ್ರೋ ಸಂಚಾರಕ್ಕೆ ಸಿಕ್ತು ಗ್ರೀನ್ ಸಿಗ್ನಲ್! – ಮೆಟ್ರೋ ಸಂಚಾರ ಯಾವಾಗಿಂದ?
ಬೆಂಗಳೂರು: ಬೈಯಪ್ಪನಹಳ್ಳಿ – ಕೆಆರ್ ಪುರ ಮೆಟ್ರೋ ರೈಲು ಸಂಚಾರ ಯಾವಾಗ ಪ್ರಾರಂಭವಾಗಲಿದೆ ಎಂದು ಕಾದು ಕುಳಿತಿದ್ದ ಬೆಂಗಳೂರಿಗರಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಬೈಯಪ್ಪನಹಳ್ಳಿ-ಕೆಆರ್ ಪುರ ನಮ್ಮ ಮೆಟ್ರೋ ರೈಲು ಸಂಚಾರಕ್ಕೆ ಒಪ್ಪಿಗೆ ನೀಡಲಾಗಿದ್ದು, ಶೀಘ್ರದಲ್ಲೇ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.
ಮೆಟ್ರೋ ರೈಲ್ವೆ ಸುರಕ್ಷತಾ ಆಯಕ್ತರು, ಅಧಿಕಾರಿಗಳ ತಂಡ ಬೈಯಪ್ಪನಹಳ್ಳಿ-ಕೆಆರ್ ಪುರ ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ಅಗತ್ಯವಿರುವ ತಾಂತ್ರಿಕ ಪರಿಶೀಲನೆ ನಡೆಸಿತ್ತು. ಈ ಪರಿಶೀಲನೆ ಯಶಸ್ವಿಯಾಗಿದ್ದು, ನಮ್ಮ ಮೆಟ್ರೋ ರೈಲುಗಳ ಸಂಚಾರಕ್ಕೆ ಒಪ್ಪಿಗೆ ಸಿಕ್ಕಿದೆ. ಇದರಿಂದಾಗಿ ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ಸಂಪೂರ್ಣ ರೈಲುಗಳ ಸಂಚಾರಕ್ಕೆ ಒಪ್ಪಿಗೆ ಸಿಕ್ಕಿದಂತೆ ಆಗಿದೆ. ರಾಜ್ಯ ಸರ್ಕಾರದ ಅನುಮತಿ ಬಳಿಕ ಮೆಟ್ರೋ ರೈಲು ಸಂಚಾರ ಪ್ರಾರಂಭಕ್ಕೆ ದಿನಾಂಕ ನಿಗದಿ ಮಾಡಲಾಗುತ್ತದೆ. ಇನ್ನು ಬೈಯಪ್ಪನಹಳ್ಳಿಯಿಂದ ಕೆಂಗೇರಿ ತನಕ ನಮ್ಮ ಮೆಟ್ರೋದಲ್ಲಿ ಜನರು ಸಂಚಾರ ನಡೆಸಬಹುದಾಗಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಭಾರಿ ಹೆಚ್ಚಳ! – ಕಳೆದ ಎಂಟು ತಿಂಗಳಲ್ಲಿ ಬರೋಬ್ಬರಿ 90 ಸಾವಿರ ಪ್ರಯಾಣಿಕರು ಹೆಚ್ಚಳ
ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಬೈಯಪ್ಪನಹಳ್ಳಿ-ಕೆಆರ್ ಪುರ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳ ಸಂಚಾರಕ್ಕೆ ಒಪ್ಪಿಗೆ ನೀಡಿದ್ದಾರೆ. ಬಿಎಂಆರ್‌ಸಿಎಲ್‌ಗೆ ಸುರಕ್ಷತಾ ಪ್ರಮಾಣ ಪತ್ರವನ್ನು ನೀಡಿದ ಬಳಿಕ ರೈಲುಗಳ ವಾಣಿಜ್ಯ ಸೇವೆಗೆ ರಾಜ್ಯ ಸರ್ಕಾರದ ಒಪ್ಪಿಗೆ ಪಡೆದು ದಿನಾಂಕ ನಿಗದಿ ಮಾಡಲಾಗುತ್ತದೆ.
ಬೆಂಗಳೂರು ನಗರದಲ್ಲಿ ಸದ್ಯ ನಮ್ಮ ಮೆಟ್ರೋ ನೇರಳೆ ವಿಸ್ತರಿತ ಮಾರ್ಗದಲ್ಲಿ ಬೈಯಪ್ಪನಹಳ್ಳಿ-ಕೆಆರ್ ಪುರ ಮತ್ತು ಕೆಂಗೇರಿ-ಚಲ್ಲಘಟ್ಟ ನಡುವೆ ನಮ್ಮ ಮೆಟ್ರೋ ರೈಲು ಸಂಚಾರ ನಡೆಸುತ್ತಿಲ್ಲ. ಸೆಪ್ಟೆಂಬರ್ ಅಂತ್ಯದಲ್ಲಿ ಈ ಮಾರ್ಗದಲ್ಲಿ ಮೆಟ್ರೋ ರೈಲಿನ ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ.
ಪ್ರಧಾನಿ ನರೇಂದ್ರ ಮೋದಿ ಈ ವರ್ಷದ ಮಾರ್ಚ್ 25ರಂದು ವೈಟ್‌ಫೀಲ್ಡ್-ಕೆಆರ್ ಪುರ (13.7) ಕಿ. ಮೀ. ಮಾರ್ಗವನ್ನು ಉದ್ಘಾಟನೆ ಮಾಡಿದ್ದರು. ಆದರೆ ಬೈಯಪ್ಪನಹಳ್ಳಿ-ಕೆಆರ್ ಪುರ ನಡುವೆ ಮೆಟ್ರೋ ಸಂಚಾರ ಇಲ್ಲದ ಕಾರಣ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗಿತ್ತು. ಈಗ ಆ ಮಾರ್ಗವೂ ಸಂಚಾರಕ್ಕೆ ಮುಕ್ತವಾಗುತ್ತಿದೆ. ಬಿಎಂಆರ್‌ಸಿಎಲ್ ಬೈಯಪ್ಪನಹಳ್ಳಿ-ಕೆಆರ್ ಪುರ (2.1 ಕಿ. ಮೀ.) ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಿದರೆ ಪ್ರಯಾಣಿಕರು ಕೆಆರ್ ಪುರದಲ್ಲಿ ಮೆಟ್ರೋದಿಂದ ಇಳಿದು, ಪುನಃ ಮೆಟ್ರೋ ಹತ್ತಿ ಸಾಗುವುದು ತಪ್ಪಲಿದೆ. ವೈಟ್‌ಫೀಲ್ಡ್‌ನಿಂದ ನೇರವಾಗಿ ಬೈಯಪ್ಪನಹಳ್ಳಿ ತನಕ ಮೆಟ್ರೋದಲ್ಲಿ ಸಂಚಾರ ನಡೆಸಬಹುದಾಗಿದೆ.