ಬೈಯಪ್ಪನಹಳ್ಳಿ – ಕೆ.ಆರ್.ಪುರ ಮೆಟ್ರೋ ಮಾರ್ಗ ಉದ್ಘಾಟನೆ ವಿಳಂಬ –ರಾಷ್ಟ್ರಮಟ್ಟದಲ್ಲಿ ಸದ್ದುಮಾಡುತ್ತಿದೆ ನಮ್ಮ ಮೆಟ್ರೋ!

ಬೈಯಪ್ಪನಹಳ್ಳಿ – ಕೆ.ಆರ್.ಪುರ ಮೆಟ್ರೋ ಮಾರ್ಗ ಉದ್ಘಾಟನೆ ವಿಳಂಬ –ರಾಷ್ಟ್ರಮಟ್ಟದಲ್ಲಿ ಸದ್ದುಮಾಡುತ್ತಿದೆ ನಮ್ಮ ಮೆಟ್ರೋ!

ಬೆಂಗಳೂರು: ಬೈಯಪ್ಪನಹಳ್ಳಿ-ಕೆ.ಆರ್.ಪುರ ಮೆಟ್ರೋ ಸಂಚಾರಕ್ಕೆ ಯಾವಾಗ ಮುಕ್ತ ಅಂತಾ ಜನರು ಕಾಯುತ್ತಿದ್ದಾರೆ. ಆದರೆ ಬಿಎಂಆರ್‌ಸಿಎಲ್‌ ಮಾತ್ರ ಮೆಟ್ರೋ ಮಾರ್ಗ ಆರಂಭವನ್ನು ಮುಂದೂಡುತ್ತಲೇ ಬಂದಿದೆ. ಇದೀಗ ಈ ವಿಚಾರ ರಾಷ್ಟ್ರ ಮಟ್ಟದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಬಿಎಂಆರ್‌ಸಿಎಲ್‌ ತೋರುತ್ತಿರುವ ನಿರ್ಲಕ್ಷ್ಯದ ವಿರುದ್ಧ ಜನರು ಸಿಡಿದೆದ್ದಿದ್ದಾರೆ. ಐಟಿ ಉದ್ಯೋಗಿಗಳು ಬೈಯಪ್ಪನಹಳ್ಳಿ-ಕೆ.ಆರ್.ಪುರ ಮೆಟ್ರೋ ಆರಂಭಕ್ಕೆ ಟ್ವಿಟರ್ ನಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಸುಮಾರು ಆರು ತಿಂಗಳಿನಿಂದ ಬೈಯಪ್ಪನಹಳ್ಳಿ-ಕೆ.ಆರ್.ಪುರ ಮೆಟ್ರೋ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ಹೇಳುತ್ತಾ ಬಂದಿದೆ. ಸೆ. 21ಕ್ಕೆ ದೆಹಲಿಯ ಮೆಟ್ರೋ ರೇಲ್ವೆ ಸುರಕ್ಷತಾ ಆಯುಕ್ತರಿಂದ ಮಾರ್ಗದ ಸುರಕ್ಷತಾ ಪರಿಶೀಲನೆ ನಡೆದಿದೆ. ಕೆ.ಆರ್.ಪುರ-ಬೈಯಪ್ಪನಹಳ್ಳಿ ವಾಣಿಜ್ಯ ಸೇವೆ ಆರಂಭಿಸಲು ಗ್ರೀನ್ ಸಿಗ್ನಲ್ ಕೂಡ ನೀಡಲಾಗಿದೆ. ಆದರೆ ಬಿಎಂಆರ್‌ಸಿಎಲ್‌ ಮಾತ್ರ ದಿನಾಂಕ ನಿಗದಿಪಡಿಸಿ ಪದೇ ಪದೇ ಮುಂದೂಡುತ್ತಿದೆ. ಇದೀಗ ಬಿಎಂಆರ್‌ಸಿಎಲ್‌ ನಡೆಯನ್ನು ಐಟಿ ಉದ್ಯೋಗಿಗಳು ಖಂಡಿಸಿದ್ದಾರೆ.

ಇದನ್ನೂ ಓದಿ: ಡ್ರೈವರ್‌ ಇಲ್ಲದೇ ಓಡುತ್ತೆ ನಮ್ಮ ಮೆಟ್ರೋ! – ಹೊಸ ಸೇವೆ ಶೀಘ್ರದಲ್ಲೇ ಆರಂಭ!

ಮೆಟ್ರೋ ಆರಂಭಕ್ಕೆ ಟ್ವಿಟರ್ ನಲ್ಲಿ ಅಭಿಯಾನ ಆರಂಭಿಸಿದ್ದು, #StartPurpleLineOperations ಎಂದು ಹ್ಯಾಷ್ ಟ್ಯಾಗ್ ಹಾಕಿ ಕ್ಯಾಂಪೇನ್ ಶುರುಮಾಡಿದ್ದಾರೆ. ಟ್ವೀಟ್ ನಲ್ಲಿ ಬಿಎಂಆರ್ ಸಿಎಲ್ ವಿರುದ್ಧ ಸಾವಿರಾರು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಸಿಎಂ, ಡಿಸಿಎಂ, ಪ್ರಧಾನಿ ಮೋದಿಗೆ ಟ್ಯಾಗ್ ಮಾಡಿ ಶೀಘ್ರ ಮೆಟ್ರೋ ಆರಂಭಿಸುವಂತೆ ಆಗ್ರಹಿಸಿದ್ದಾರೆ. ಟ್ರಾಫಿಕ್ ಜಾಮ್ ವಿಡಿಯೋ, ಫೋಟೋ, ಜೊತೆಗೆ ಸ್ಕೈವಾಕ್ ಮೇಲೆ ಜನರೇ ತುಂಬಿರುವ ವಿಡಿಯೋ ಹಾಕಿ ಕಿಡಿ ಕಾರಿದ್ದಾರೆ. ಹೀಗಾಗಿ ಬಿಎಂಆರ್ ಸಿಎಲ್ ನಿರ್ಲಕ್ಷ್ಯದಿಂದ ರಾಷ್ಟ್ರಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜು ಆಗುತ್ತಿದೆ.

ದೆಹಲಿಯ ಮೆಟ್ರೋ ರೇಲ್ವೆ ಸುರಕ್ಷತಾ ಆಯುಕ್ತರಿಂದ ಗ್ರೀನ್ ಸಿಗ್ನಲ್ ಸಿಕ್ಕರೂ ಯಾಕೆ ವಿಳಂಬ? ಎಂಬ ಪ್ರಶ್ನೆ ಎದ್ದಿದೆ.  ಈ ಲೈನ್‌ನ ಎಲ್ಲಾ ಕೆಲಸ‌ ಮುಗಿದಿದ್ದರೂ ಬಿಎಂಆರ್ ಸಿಎಲ್ ಉದ್ಘಾಟನೆ‌ ದಿನಾಂಕ‌ ಮುಂದೂಡುತ್ತಿದೆ. ಈ ಬಗ್ಗೆ ಕೇಳಿದರೆ ದಿನಾಂಕ ಫಿಕ್ಸ್‌ ಆಗಿಲ್ಲ ಹೇಳ್ತೇವೆ ಎಂದಷ್ಟೇ ಬಿಎಂಆರ್ ಸಿಎಲ್ ಅಧಿಕಾರಿಗಳು   ಉತ್ತರ ನೀಡ್ತಿದ್ದಾರೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.

Shwetha M