ಸಾರ್ವಜನಿಕ ಆಸ್ತಿಗೆ ನಷ್ಟ ಭರಿಸಿದ್ರೆ ಮಾತ್ರ ಇನ್ನುಮುಂದೆ ಪ್ರತಿಭಟನಾಕಾರರಿಗೆ ಜಾಮೀನು!

ಸಾರ್ವಜನಿಕ ಆಸ್ತಿಗೆ ನಷ್ಟ ಭರಿಸಿದ್ರೆ ಮಾತ್ರ ಇನ್ನುಮುಂದೆ ಪ್ರತಿಭಟನಾಕಾರರಿಗೆ ಜಾಮೀನು!

ಪ್ರತಿಭಟನೆ ನಡೆಸುವಾಗ, ಬಂದ್‌ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿ, ಪಾಸ್ತಿಗಳಿಗೆ ಹಾನಿ ಮಾಡುವ ಮುನ್ನ ಎಚ್ಚರ.. ಇನ್ನು ಮುಂದೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದವರ ಕಠಿಣ ಕ್ರಮ ಕೈಗೊಳ್ಳಲು ಕಾನೂನು ಆಯೋಗ ನಿರ್ಧರಿಸಿದೆ.

ಸಾಮಾನ್ಯವಾಗಿ ಯಾವುದೇ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದಾಗ ಪ್ರತಿಭಟನಾಕಾರರಿಗೆ ಅಲ್ಪ ಪ್ರಮಾಣದ ದಂಡ ವಿಧಿಸಲಾಗುತ್ತದೆ.ಆದರೆ ಇನ್ನುಮುಂದೆ ಪ್ರತಿಭಟನೆ, ಹೆದ್ದಾರಿ ತಡೆ, ಬಂದ್‌ ಇನ್ನಿತರ ಸಂದರ್ಭಗಳಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ್ರೆ, ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕಾನೂನು ತಿದ್ದುಪಡಿ ಮಾಡಬೇಕು. ಪ್ರತಿಭಟನೆ ವೇಳೆ ಹಾನಿಯಾದ ಆಸ್ತಿಯ ಮೌಲ್ಯವನ್ನು ಹಾನಿಕೋರರಿಂದಲೇ ಸಂಪೂರ್ಣವಾಗಿ ವಸೂಲಿ ಮಾಡಬೇಕು. ನಂತರ ಮಾತ್ರವೇ ಜಾಮೀನು ನೀಡಬೇಕು ಎಂದು ಕಾನೂನು ಆಯೋಗವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಇದನ್ನೂ ಓದಿ: ಸಾವಿನ ನಾಟಕವಾಡಿದ್ದ ಬಾಲಿವುಡ್‌ ನಟಿ ಪೂನಂ ಪಾಂಡೆ ವಿರುದ್ಧ ಎಫ್‌ಐಆರ್‌ ದಾಖಲು

ಪ್ರತಿಭಟನೆಯಂತಹ ಸಂದರ್ಭಗಳಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾದ ಸಂದರ್ಭದಲ್ಲಿ, ಯಾರು ಪ್ರತಿಭಟನೆಯ ನೇತೃತ್ವ ವಹಿಸಿರುತ್ತಾರೋ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಅವರಿಂದಲೇ ಹಾನಿಗೊಳಗಾದ ಆಸ್ತಿ ಮೌಲ್ಯವನ್ನು ವಸೂಲಿ ಮಾಡಬೇಕು. ನಂತರ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಂತಹ ಪ್ರಕರಣಗಳಲ್ಲಿ ಜಾಮೀನು ನೀಡುವುದಕ್ಕೂ ಮುನ್ನ ಆಸ್ತಿಯ ಮೌಲ್ಯವನ್ನು ವಸೂಲಿ ಮಾಡಬೇಕು ಎಂದು ಸಲಹೆ ನೀಡಿದೆ.

ಕಾನೂನು ಆಯೋಗವು ಇನ್ನುಮುಂದೆ ಜಾಮೀನು ನೀಡುವಾಗಲೇ ದಂಡದ ಮೊತ್ತ ವಸೂಲಿ ಮಾಡಬೇಕು ಎಂದು ಹೇಳಿದೆ. ಅದೂ ಕೂಡಾ ಸಾರ್ವಜನಿಕ ಆಸ್ತಿ ಪಾಸ್ತಿಯ ಮಾರುಕಟ್ಟೆ ಮೌಲ್ಯದಷ್ಟೇ ಹಣವನ್ನು ದಂಡದ ರೂಪದಲ್ಲಿ ಭರಿಸಬೇಕಾಗುತ್ತದೆ. ಕೆಲವು ಸ್ವತ್ತುಗಳ ಮಾರುಕಟ್ಟೆ ಮೌಲ್ಯವನ್ನು ನಿರ್ಧರಿಸಲು ಸಾಧ್ಯ ಆಗೋದಿಲ್ಲ. ಆಗ ನ್ಯಾಯಾಲಯವೇ ಸೂಕ್ತ ಮೊತ್ತ ನಿರ್ಧರಿಸಬೇಕಾಗುತ್ತದೆ ಎಂದು ಕಾನೂನು ಆಯೋಗ ಹೇಳಿದೆ.

ಇದಕ್ಕಾಗಿ ಸರ್ಕಾರ ಪ್ರತ್ಯೇಕ ಕಾನೂನು ಜಾರಿಗೆ ತರಬೇಕು ಎಂದು ಕಾನೂನು ಆಯೋಗ ಹೇಳಿದೆ. ಕೇರಳ ರಾಜ್ಯದಲ್ಲಿ ಸದ್ಯ ಜಾರಿಯಲ್ಲಿ ಇರುವ ಕಾನೂನನ್ನೂ ಉಲ್ಲೇಖಿಸಿದೆ. ಕೇರಳ ರಾಜ್ಯದಲ್ಲಿ ಖಾಸಗಿ ಸ್ವತ್ತುಗಳ ಹಾನಿ ತಡೆ ಕಾಯ್ದೆ ಜಾರಿಯಲ್ಲಿದೆ. ಜೊತೆಯಲ್ಲೇ ಪರಿಹಾರ ಕಾಯ್ದೆ ಕೂಡಾ ಇದೆ. ಇಂಥದ್ದೇ ಕಾನೂನನ್ನು ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ತರಬೇಕು ಎಂದು ಕಾನೂನು ಆಯೋಗ ಹೇಳಿದೆ.

Shwetha M