ಉದ್ಯಮಿ ಮನೆಗೆ ಇಡಿ ಮಿಂಚಿನ ದಾಳಿ! – ಅಧಿಕಾರಿಗಳು ಎಂಟ್ರಿ ಕೊಡುತ್ತಿದ್ದಂತೆ 9ನೇ ಮಹಡಿಯಿಂದ ಹಣದ ಬ್ಯಾಗ್ ಎಸೆದ ವ್ಯಕ್ತಿ!

ಪಂಜಾಬ್ನಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಉದ್ಯಮಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಆ ಉದ್ಯಮಿ ಹಣದ ಚೀಲವನ್ನು 9 ನೇ ಮಹಡಿಯಿಂದ ಎಸೆದಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದ ಆರ್ ಜಿ ಕರ್ ಸಂತ್ರಸ್ತೆ ತಾಯಿ ಮನೆ ಬಳಿ ಬಾಂಬ್ ದಾಳಿ! – 5 ಬಿಜೆಪಿ ಕಾರ್ಯಕರ್ತರಿಗೆ ಗಾಯ
ಇಡಿ ಅಧಿಕಾರಿಗಳು ಖರಾರ್ನ ‘ವೆಸ್ಟರ್ನ್ ಟವರ್ಸ್’ ವಸತಿ ಸಮುಚ್ಚಯದ 9ನೇ ಮಹಡಿಯಲ್ಲಿರುವ ಫ್ಲಾಟ್ ನಂಬರ್ 906 ಕ್ಕೆ ಹೋಗಿ ತಪಾಸನೆ ನಡೆಸಿದ್ದಾರೆ. ಅಧಿಕಾರಿಗಳು ಬರುತ್ತಿರುವುದನ್ನು ಗಮನಿಸಿದ ಉದ್ಯಮಿ ಮನೆಯೊಳಗಿದ್ದ ಎರಡು ಹಣದ ಚೀಲಗಳನ್ನು ಕಿಟಕಿಯಿಂದ ಕೆಳಕ್ಕೆ ಎಸೆದಿದ್ದಾರೆ.
ಈ ದಾಳಿಯು ಐಟಿ ಉದ್ಯಮಿ ಎನ್ನಲಾದ ನಿತಿನ್ ಗೋಹಲ್ ಎಂಬುವವರಿಗೆ ಸೇರಿದ ಸ್ಥಳದಲ್ಲಿ ನಡೆದಿದೆ. ನಿತಿನ್ ಅವರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ವಿಶೇಷ ಕರ್ತವ್ಯಾಧಿಕಾರಿ (OSD) ರಾಜಬೀರ್ ಸಿಂಗ್ ಘುಮ್ಮನ್ ಅವರ ಆಪ್ತರೆಂದು ವಿರೋಧ ಪಕ್ಷದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಆರೋಪಿಸಿದ್ದಾರೆ.
ಗ್ರೇಟರ್ ಮೊಹಾಲಿ ಏರಿಯಾ ಡೆವಲಪ್ಮೆಂಟ್ ಅಥಾರಿಟಿ ವ್ಯಾಪ್ತಿಯಲ್ಲಿ ಭೂಬಳಕೆ ಬದಲಾವಣೆ ಪರವಾನಗಿಗಳನ್ನು ಪಡೆಯುವಲ್ಲಿ ನಡೆದ ಅಕ್ರಮಗಳು ಮತ್ತು ಸನ್ಟೆಕ್ ಸಿಟಿ ಯೋಜನೆಯಲ್ಲಿನ ಹಣಕಾಸು ವಂಚನೆಗೆ ಸಂಬಂಧಿಸಿದಂತೆ ಇಡಿ ಈ ದಾಳಿ ನಡೆಸಿತ್ತು ಎಂದು ವರದಿಯಾಗಿದೆ.
ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳ ಪ್ರಕಾರ ಮತ್ತು ಪ್ರಾಥಮಿಕ ವರದಿಗಳ ಪ್ರಕಾರ ಅಧಿಕಾರಿಗಳು ಚೀಲಗಳಿಂದ ಸುಮಾರು 21 ರಿಂದ 25 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಕೆಳಗೆ ಬಿದ್ದಿದ್ದ ಹಣವನ್ನು ತೆಗೆದುಕೊಂಡು ಓಡಿಹೋಗಲು ಯತ್ನಿಸಿದ ಬಿಳಿ ಕಾರಿನ ಚಾಲಕನನ್ನು ಇಡಿ ಅಧಿಕಾರಿಗಳು ಬೆನ್ನಟ್ಟಿ ಹಿಡಿದಿದ್ದಾರೆ.

ನೋಡಿರಿ

