ಬೈಕ್ ಅಪಘಾತದಲ್ಲಿ ಮೃತಪಟ್ಟ ಪ್ರೀತಿಯ ಮೊಮ್ಮಗ – ಶವ ನೋಡ್ತಿದ್ದಂತೆ ಕುಸಿದು ಬಿದ್ದು ತಾತನೂ ಸಾವು!
ಅಜ್ಜ, ಮೊಮ್ಮಕ್ಕಳ ಸಂಬಂಧವೇ ಅಂಥಾದ್ದು. ತಾವು ತಂದೆಯಾಗಿದ್ದಾಗ ತಮ್ಮ ಮಕ್ಕಳು ಏನು ಕೇಳಿದ್ರೂ ಕೊಡಿಸೋಕೆ ಹಿಂದೆ ಮುಂದೆ ನೋಡ್ತಾರೆ. ಆದ್ರೆ ಅದೇ ಮೊಮ್ಮಕ್ಕಳು ಹುಟ್ಟಿದ್ರೆ ತಲೆ ಮೇಲೆ ಹೊತ್ತು ಮೆರೆಸ್ತಾರೆ. ಕೇಳಿದ್ದನ್ನೆಲ್ಲಾ ಕೊಡಿಸಿ ಮುದ್ದು ಮಾಡ್ತಾರೆ. ಅದ್ರಲ್ಲೂ ಮಗಳ ಮಕ್ಕಳು ಅಂದ್ರೆ ಇನ್ನೂ ಒಂದು ಕೈ ಮೇಲೆ. ಹೀಗೆಯೇ ಇಲ್ಲೊಬ್ಬ ಅಜ್ಜ ಮೊಮ್ಮಗನ ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿದ್ರು. ಕೊನೆಗೆ ಮೊಮ್ಮಗನ ಜತೆಯೇ ಉಸಿರು ಚೆಲ್ಲಿದ್ದಾರೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನಲ್ಲಿ ಭೀಕರ ದುರಂತ ನಡೆದಿದೆ. ತಾಲೂಕಿನ ವಂದಾಲ ಗ್ರಾಮದ ಯುವಕ ಅಭಿಷೇಕ ಚಂದ್ರಶೇಖರ ಪ್ಯಾಟಿಗೌಡ್ರ (18) ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿರುವ ತನ್ನ ಚಿಕ್ಕಮ್ಮನ ಮನೆಯಲ್ಲಿ ವಾಸಿಸುತ್ತಿದ್ದ. ಅಲ್ಲಿಯೇ ದ್ವಿತೀಯ ಪಿಯುಸಿ ಓದುತ್ತಿದ್ದ. ಸೋಮವಾರ ರಾತ್ರಿ ಈತ ಬೈಕ್ ನಲ್ಲಿ ಹೋಗುವಾಗ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ : 6 ವರ್ಷದ ಬಾಲಕಿ ಮೇಲೆ ಪಿಟ್ ಬುಲ್ ದಾಳಿ – ಮುಖದ ಮೇಲೆ 1,000 ಹೊಲಿಗೆ!
ಅಭಿಷೇಕ್ ಅಪಘಾತದಲ್ಲಿ ಸಾವಿಗೀಡಾದ ಸುದ್ದಿ ತಿಳಿಯುತ್ತಿದ್ದಂತೆ ವಿಜಯಪುರ ಜಿಲ್ಲೆಯ ವಂದಾಲ ಗ್ರಾಮದಲ್ಲಿದ್ದ ತಾಯಿ ಬಸಮ್ಮ ಮತ್ತು ಆತನ ಅಜ್ಜ ಬಸಪ್ಪ ರಾಮಪ್ಪ ಗುಡ್ಡದ ಹಾಗೂ ಸಂಬಂಧಿಕರು ಗುಳೇದಗುಡ್ಡಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ರಕ್ತಸಿಕ್ತವಾಗಿ ಶವವಾಗಿ ಮಲಗಿದ್ದ ಪ್ರೀತಿಯ ಮೊಮ್ಮಗ ಅಭಿಷೇಕ್ ಮೃತದೇಹ ನೋಡಿದ ಅವರ ಅಜ್ಜ ಬಸಪ್ಪ ಗುಡ್ಡದ ಸ್ಥಳದಲ್ಲಿಯೇ ಕುಸಿದುಬಿದ್ದಿದ್ದಾರೆ. ಸ್ಥಳದಲ್ಲಿದ್ದ ವೈದ್ಯಕೀಯ ಸಿಬ್ಬಂದಿ ತಪಾಸಣೆ ಮಾಡಿದಾಗ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂಬುದು ತಿಳಿದಿದೆ.
ಮೊದ್ಲೇ ಅಭಿಷೇಕ್ ಸಾವಿನ ನೋವಿನಲ್ಲಿದ್ದ ಕುಟುಂಬಸ್ಥರು ಹೃದಯಾಘಾತಕ್ಕೀಡಾದ ಬಸಪ್ಪ ಅವರನ್ನು ತಕ್ಷಣ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಮಾರ್ಗ ಮಧ್ಯೆಯೇ ಅವರ ಪ್ರಾಣಪಕ್ಷಿ ಹಾರಿಹೋಗಿದೆ. ಈ ಎರಡೂ ಸಾವುಗಳು ಅಭಿಷೇಕ ಪ್ಯಾಟಿಗೌಡ್ರ ಪೋಷಕರು ಮತ್ತು ಆತನ ಚಿಕ್ಕಮ್ಮ ಹಾಗೂ ಕುಟುಂಬಕ್ಕೆ ಬರಸಿಡಿಲು ಬಡಿದಂತೆ ಮಾಡಿದೆ.
ಅಷ್ಟಕ್ಕೂ ಬಸಪ್ಪ ರಾಮಪ್ಪ ಗುಡ್ಡದ ಅವರು ಗಂಡು ಮಕ್ಕಳಿರಲಿಲ್ಲ. ಹೀಗಾಗಿ ವಂದಾಲದಲ್ಲಿ ತನ್ನ ಮಗಳಾದ ಬಸಮ್ಮ ಪ್ಯಾಟಿಗೌಡ್ರ ಜತೆ ವಾಸಿಸುತ್ತಿದ್ದರು. ಬಸಮ್ಮ ಪ್ಯಾಟಿಗೌಡ್ರ ನೇಕಾರಿಕೆಯಲ್ಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದಾರೆ. ಅಭಿಷೇಕ್ ತಂದೆ ಚಂದ್ರಶೇಖರ ಪ್ಯಾಟಿಗೌಡ್ರ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬಡತನ ಹಿನ್ನೆಲೆಯಲ್ಲಿ ಮಗನಿಗೆ ಉತ್ತಮ ಶಿಕ್ಷಣ ನೀಡಲು ಚಂದ್ರಶೇಖರ ಪ್ಯಾಟಿಗೌಡ್ರ ಮತ್ತು ಬಸಮ್ಮ ಪ್ಯಾಟಿಗೌಡ್ರ ದಂಪತಿ ತಮ್ಮ ಹಿರಿಯ ಪುತ್ರ ಅಭಿಷೇಕ್ ನನ್ನ ಗುಳೇದಗುಡ್ಡದಲ್ಲಿ ಓದಲು ಆತನ ಚಿಕ್ಕಮ್ಮನ ಮನೆಯಲ್ಲಿ ಬಿಟ್ಟಿದ್ದರು. ಚಿಕ್ಕಮ್ಮನ ಮನೆಯಲ್ಲಿದ್ದುಕೊಂಡು ಓದುತ್ತಿದ್ದ ಅಭಿಷೇಕ್ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.
ಇನ್ನು ಅಭಿಷೇಕ್ ಹಾಗೂ ಬಸಪ್ಪರ ಪಾರ್ಥಿವ ಶರೀರಗಳನ್ನು ವಿಜಯಪುರ ಜಿಲ್ಲೆಯ ವಂದಾಲ ಗ್ರಾಮಕ್ಕೆ ತಂದು ಪ್ರೀತಿಯ ಅಜ್ಜ ಮೊಮ್ಮಗ ಇಬ್ಬರನ್ನು ಒಟ್ಟಿಗೆ ಅಂತ್ಯಕ್ರಿಯೆ ಮಾಡಿದ್ದಾರೆ. ಇಬ್ಬರ ಸಾವಿನ ನೋವಲ್ಲಿ ಕುಟುಂಬಸ್ಥರು ಗೋಳಾಡ್ತಿದ್ದಾರೆ.