ಮೆಗಾ ಸಿಟಿಗಳಲ್ಲಿ ವಿಪರೀತ ವಾಯುಮಾಲಿನ್ಯ – ಬೆಂಗಳೂರಿನ ಪೊಲ್ಯೂಷನ್ ಬಗ್ಗೆಯೂ ಆತಂಕ..!
ಮೈ ಸುಡೋ ಬಿಸಿಲು. ಬಿಸಿ ಗಾಳಿಯ ಕಿರಿಕಿರಿ ಜೊತೆ ಈಗ ವಾಯುಮಾಲಿನ್ಯ ಕೂಡ ವಿಪರೀತವಾಗಿ ಹೆಚ್ಚಾಗ್ತಿದೆ. ವಾಯುಮಾಲಿನ್ಯದಿಂದ ಕುಖ್ಯಾತಿ ಗಳಿಸಿದ್ದ ರಾಷ್ಟ್ರ ರಾಜಧಾನಿ ದೆಹಲಿ ಮುಂಜಾಗ್ರತಾ ಕ್ರಮಗಳಿಂದ ಅಲ್ಲಿನ ಗಾಳಿಯ ಗುಣಮಟ್ಟ ಸುಧಾರಣೆ ಕಂಡಿದೆ. ಆದರೆ ಇತರ ಮೆಗಾ ಸಿಟಿಗಳಲ್ಲಿ ಮಾತ್ರ ಮಾಲಿನ್ಯ ವೇಗವಾಗಿ ಹೆಚ್ಚಾಗ್ತಿದೆ. 2022-23 ರ ಚಳಿಗಾಲದಲ್ಲಿ ಕೋಲ್ಕತ್ತಾ ಮತ್ತು ಮುಂಬೈ ನಗರಗಳು ರಾಷ್ಟ್ರ ರಾಜಧಾನಿ ಬಳಿಕ ಹೆಚ್ಚು ಕಲುಷಿತಗೊಂಡ ನಗರಗಳಾಗಿವೆ. ಜೊತೆಗೆ ಬೆಂಗಳೂರು ಮತ್ತು ಚೆನ್ನೈನಲ್ಲೂ ಅಪಾಯಕಾರಿ ಮಾಲಿನ್ಯಕಾರಕ ಕಣಗಳು ಹೆಚ್ಚಾಗುತ್ತಿದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ ವರದಿ ನೀಡಿದೆ. ಅಕ್ಟೋಬರ್ನಿಂದ ಫೆಬ್ರವರಿವರೆಗೆ ಆರು ನಗರಗಳಲ್ಲಿ ಮಾಲಿನ್ಯದ ಬಗ್ಗೆ ಡೇಟಾ ಸಂಗ್ರಹ ಮಾಡಲಾಗಿತ್ತು.
ಇದನ್ನೂ ಓದಿ : ಹೆಚ್ಚಾಯ್ತು H3N2 ವೈರಸ್ ಹಾವಳಿ – ಲಕ್ಷಣಗಳೇನು ಮತ್ತು ಮುನ್ನೆಚ್ಚರಿಕಾ ಕ್ರಮಗಳೇನು?
ಮಂಗಳವಾರ ಬಿಡುಗಡೆಯಾದ CSE ವರದಿಯಲ್ಲಿ ಈ ಅಂಶ ಬಯಲಾಗಿದೆ. ಮೆಗಾ ಸಿಟಿಗಳಲ್ಲಿ 2022-23 ರ ಚಳಿಗಾಲದಲ್ಲಿ ಪೊಲ್ಯೂಷನ್ ಮಟ್ಟ ಹೆಚ್ಚಾಗಿದೆ ಎಂದು ತಿಳಿಸಿದೆ. ದೆಹಲಿಯಲ್ಲಿನ ಮಟ್ಟವು ಅತ್ಯಧಿಕವಾಗಿದ್ದರೆ, ಉಳಿದ ನಗರಗಳು ಕೂಡ ಹದಗೆಡುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ದೆಹಲಿಯನ್ನು ಹೊರತುಪಡಿಸಿದರೆ, ಕೋಲ್ಕತ್ತಾವು ‘ಅತ್ಯಂತ ಕಳಪೆ’ ವಾಯು ಗುಣಮಟ್ಟ ಸೂಚ್ಯಂಕ ದಿನಗಳನ್ನ ಹೊಂದಿದೆ. ಮುಂಬೈ ಸ್ಥಿತಿಯೂ ಹೀಗೇ ಇದೆ ಎಂದು ವರದಿಯಿಂದ ತಿಳಿದು ಬಂದಿದೆ. ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ಚಳಿಗಾಲದ ಗರಿಷ್ಠ ಮಾಲಿನ್ಯವು ಕಳೆದ ನಾಲ್ಕು ವರ್ಷಗಳಲ್ಲಿ ಅತ್ಯಂತ ಕೆಟ್ಟದಾಗಿದೆ.
ಚಳಿಗಾಲದ ಅವಧಿಯಲ್ಲಿ (ಅಕ್ಟೋಬರ್ 1-ಫೆಬ್ರವರಿ 28) ದೆಹಲಿ, ಕೋಲ್ಕತ್ತಾ-ಹೌರಾ, ಮುಂಬೈ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈಗಳಲ್ಲಿನ ವಾಯುಮಾಲಿನ್ಯ ಹೆಚ್ಚಾಗಿದೆ. PM2.5 ಡೇಟಾದ ವಿಶ್ಲೇಷಣೆಯು ಹಿಂದಿನದಕ್ಕೆ ಹೋಲಿಸಿದರೆ ಈ ಐದು ಮೆಗಾಸಿಟಿಗಳಲ್ಲಿ ಹೆಚ್ಚಿನ ಪ್ರಮಾಣದ ಮಾಲಿನ್ಯ ದಾಖಲಾಗಿದೆ. ಆದ್ರೆ ಹಿಂದಿನ ನಾಲ್ಕು ಚಳಿಗಾಲಗಳಿಗೆ ಹೋಲಿಸಿದರೆ ದೆಹಲಿಯಲ್ಲಿ ಕಡಿಮೆ ಕಲುಷಿತ ಗಾಳಿ ದಾಖಲಾಗಿದೆ.