ಇಂದು ಬೆಂಗಳೂರಿಗೆ ಅಮಿತ್ ಶಾ.. ಟ್ರಾಫಿಕ್ ಜಾಮ್ ಪಕ್ಕಾ – ವಾಹನ ಸವಾರರೇ ಇಲ್ಲಿದೆ ಪರ್ಯಾಯ ಮಾರ್ಗ!

ಇಂದು ಬೆಂಗಳೂರಿಗೆ ಅಮಿತ್ ಶಾ.. ಟ್ರಾಫಿಕ್ ಜಾಮ್ ಪಕ್ಕಾ – ವಾಹನ ಸವಾರರೇ ಇಲ್ಲಿದೆ ಪರ್ಯಾಯ ಮಾರ್ಗ!

ಬೆಂಗಳೂರಲ್ಲಿ ಟ್ರಾಫಿಕ್ ಜಾಮ್ ಏನು ಹೊಸದಲ್ಲ. ವಿಶ್ವ ಮಟ್ಟದಲ್ಲೇ ಈ ವಾಹನ ದಟ್ಟಣೆಯಿಂದ ಸಿಲಿಕಾನ್ ಸಿಟಿ ಕುಖ್ಯಾತಿ ಗಳಿಸಿದೆ. ಸಾಮಾನ್ಯ ದಿನಗಳಲ್ಲೇ ತಲೆ ಕೆಡುವಷ್ಟು ಟ್ರಾಫಿಕ್ ಜಾಮ್ ಉಂಟಾಗುತ್ತೆ. ಅಂಥಾದ್ರಲ್ಲಿ ಗಣ್ಯ ವ್ಯಕ್ತಿಗಳು ಬಂದಾಗ ಕೇಳ್ಬೇಕಾ. ಇವತ್ತು ಬೆಂಗಳೂರಿಗರ ಪರಿಸ್ಥಿತಿ ಹಾಗೇ ಆಗಲಿದೆ.

ಬಿಜೆಪಿ ಚಾಣಕ್ಯ ಅಮಿತ್ ಶಾ ಇಂದು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆ ಟ್ರಾಫಿಕ್ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಬೆಂಗಳೂರು ಪೊಲೀಸರು ನಗರದ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದ್ದು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ತಿಳಿಸಿದ್ದಾರೆ. ದೆಹಲಿಯಿಂದ ಮಧ್ಯಾಹ್ನ 12.50ಕ್ಕೆ ಹುಬ್ಬಳ್ಳಿ ಏರ್‌ಪೋರ್ಟ್‌ಗೆ ಬಂದಿಳಿದು ನಂತರ ಹೆಲಿಕಾಪ್ಟರ್‌ನಲ್ಲಿ ಹುಬ್ಬಳ್ಳಿಯಿಂದ ಸಂಡೂರಿಗೆ ಪ್ರಯಾಣಿಸಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಬಳ್ಳಾರಿ ಜಿಲ್ಲೆ ಸಂಡೂರಿನ ಸಮಾವೇಶ ಸ್ಥಳಕ್ಕೆ ಆಗಮಿಸಿ ಮಧ್ಯಾಹ್ನ 1.30ರಿಂದ 2.30ರವರೆಗೆ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಿ ಬಳಿಕ ಮಧ್ಯಾಹ್ನ 2.30ರಿಂದ 3.45ರವರೆಗೆ ಬಳ್ಳಾರಿ ಜಿಲ್ಲಾ ಬಿಜೆಪಿ ಮುಖಂಡರ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ : ವೇಗವಾಗಿ ಬೈಕ್ ಓಡಿಸಿ ಆಕ್ಸಿಡೆಂಟ್ ಮಾಡಿದ ಮಗ – ಕಂಪ್ಲೇಂಟ್ ಕೊಟ್ಟು ಪಾಠ ಕಲಿಸಿದ ತಾಯಿ..!

ಮಧ್ಯಾಹ್ನ 3.55ಕ್ಕೆ ಸಂಡೂರಿನಿಂದ ಬೆಂಗಳೂರಿನ ಜಕ್ಕೂರು ಹೆಲಿಪ್ಯಾಡ್‌ಗೆ ಬಂದಿಳಿದು ಸಂಜೆ 5.10ಕ್ಕೆ ರೇಸ್ ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್‌ಗೆ ಆಗಮಿಸಲಿದ್ದಾರೆ. ಸಂಜೆ 6-7 ಗಂಟೆಯವರೆಗೆ ಖಾಸಗಿ ಹೋಟೆಲ್‌ನಲ್ಲಿ ಅಮಿತ್ ಶಾ ಸಂವಾದ ಇರಲಿದೆ. ರಾತ್ರಿ 8 ಗಂಟೆಗೆ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಶಾಸಕರು, MLCಗಳ ಸಭೆ ನಡೆಯಲಿದೆ. ರಾತ್ರಿ ರೇಸ್‌ ಕೋರ್ಸ್ ರಸ್ತೆಯ ಹೋಟೆಲ್‌ನಲ್ಲಿ ಅಮಿತ್‌ ಶಾ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನಿಂದ ದೆಹಲಿಗೆ ಅಮಿತ್ ಶಾ ವಾಪಸ್ ಆಗಲಿದ್ದಾರೆ.

ಇನ್ನು ಪಕ್ಷದ ಮೂಲಗಳ ಪ್ರಕಾರ, ಚುನಾವಣಾ ಸಿದ್ಧತೆಗಳ ಕುರಿತು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ಹಿರಿಯ ನಾಯಕರ ಜೊತೆ ಅಮಿತ್ ಶಾ ಸರಣಿ ಸಭೆಗಳನ್ನು ನಡೆಸಲಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಕೂಡ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಮಿತ್​​ ಶಾ ಆಗಮನ ಹಿನ್ನೆಲೆ ಬೆಂಗಳೂರಿನಲ್ಲಿ ಕೆಲ ಕಡೆ ಮಾರ್ಗ ಬದಲಾವಣೆ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಪರ್ಯಾಯ ಮಾರ್ಗ ಬಳಸಲು ಮನವಿ ಮಾಡಲಾಗಿದೆ. ಇನ್ನು ಬಳ್ಳಾರಿ ರಸ್ತೆ, ಮೇಖ್ರಿ ಸರ್ಕಲ್, ಕಾವೇರಿ ಥಿಯೇಟರ್ ಜಂಕ್ಷನ್, ರೇಸ್ ಕೋರ್ಸ್, ಟೌನ್ ಹಾಲ್, ತಾಜ್ ವೆಸ್ಟ್ ಎಂಡ್, ಲಾಲ್ ಬಾಗ್ ರಸ್ತೆ, ಮಿನರ್ವ ಸರ್ಕಲ್, ಜೆಸಿ ರಸ್ತೆ, ಎನ್ ಆರ್ ಸರ್ಕಲ್, ಮೈಸೂರು ಬ್ಯಾಂಕ್, ಪ್ಯಾಲೇಸ್ ರಸ್ತೆ, ಸಿಐಡಿ ಜಂಕ್ಷನ್, ಬಸವೇಶ್ವರ ಜಂಕ್ಷನ್, ಅಲಿ ಅಸ್ಕರ್ ರಸ್ತೆ, ಇನ್ ಪ್ಯಾಂಟ್ರಿ ರಸ್ತೆ, ಕಾಫಿ ಬೋರ್ಡ್ ಜಂಕ್ಷನ್, ಮಣಿಪಾಲ್ ಜಂಕ್ಷನ್, ಎಂ.ಜಿ ರಸ್ತೆ, ಟ್ರಿನಿಟಿ ಸರ್ಕಲ್, ಇಂದಿರಾನಗರ 100 ಅಡಿ ರಸ್ತೆ, ಕಮಾಂಡ್ ಹಾಸ್ಪಿಟಲ್, ದೊಮ್ಮಲೂರು ಹೆಚ್ ಎಎಲ್ ಏರ್​ಪೋರ್ಟ್ ರಸ್ತೆಯಲ್ಲಿ ವಾಹನ ನಿಲುಗಡೆ ನಿರ್ಬಂಧಿಸಲಾಗಿದೆ. ವಾಹನ ಸವಾರರಿಗೆ ಸಾಧ್ಯವಾದಷ್ಟು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಟ್ರಾಫಿಕ್ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

suddiyaana