ಐಶ್ ಗೆ ಬಚ್ಚನ್ ಫ್ಯಾಮಿಲಿ ದೂರ ದೂರ.. – ನಟಿಯೊಂದಿಗಿನ ಸಲುಗೆಯೇ ಮುಳುವಾಯ್ತಾ?
ಐಶ್ವರ್ಯಾ-ಅಭಿಷೇಕ್ ಜಗಳಕ್ಕೆ ಈಕೆ ಕಾರಣ?
ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಬಿದ್ದಿದೆ ಅನ್ನೋ ಸುದ್ದಿ ಸದ್ದು ಮಾಡ್ತಾ ಇದೆ.. ಅವರಿಬ್ಬರು ಶೀಘ್ರದಲ್ಲೇ ಡಿವೋರ್ಸ್ ಪಡೆಯಲಿದ್ದಾರೆ ಅನ್ನೋ ಮಾತು ಕೇಳಿ ಬರ್ತಾ ಇದೆ. ಇದಕ್ಕೆ ಕಾರಣ ಅಭಿಷೇಕ್ ಹಾಗೂ ಐಶ್ ನಾನೊಂದು ತೀರಾ.. ನೀನೊಂದು ತೀರಾ ಅಂತಾ ದೂರ ಇರೋದು.. ಅಷ್ಟೇ ಅಲ್ಲ ಈ ಜೋಡಿ ಮಧ್ಯೆ ಬಿರುಕು ಬಿದ್ದಿದೆ ಅನ್ನೋ ಸುದ್ದಿಗೆ ಪುಷ್ಠಿ ನೀಡುವಂತೆ ಸಾಕಷ್ಟು ಬೆಳವಣಿಗೆಗಳು ಕೂಡ ನಡೆಯುತ್ತಿದೆ. ಇದೀಗ ಐಶ್ ಹಾಗೂ ಅಭಿಷೇಕ್ ದೂರವಾಗಲು ಕಾರಣ ಏನು ಅಂತಾ ಅಭಿಮಾನಿಗಳು ಹುಡುಕಾಟ ಶುರುಮಾಡಿದ್ದಾರೆ.. ಐಶ್ವರ್ಯಾ ಮೇಲೆ ಕೋಪಗೊಂಡ್ರಾ ಅಪ್ಪ-ಮಗ ಅನ್ನೋ ಪ್ರಶ್ನೆ ಕೂಡ ಎದುರಾಗಿದೆ. ಇದಲ್ಲದೇ ಅಭಿಷೇಕ್ ಹಾಗೂ ಐಶ್ ದೂರವಾಗಲು ಈ ನಟಿಯೇ ಕಾರಣ.. ಇವರಿಬ್ಬರ ಬಾಳಲ್ಲಿ ಈಕೆಯೇ ವಿಲನ್.. ಅತ್ತೆ ಸೊಸೆಯನ್ನೂ ದೂರ ಮಾಡಿದ್ದು ಕೂಡ ಈಕೆಯೇ ಅನ್ನೋ ಚರ್ಚೆ ಜೋರಾಗಿ ನಡಿತಾ ಇದೆ.
ಇದನ್ನೂ ಓದಿ: ಮಾಡಿದ್ದುಣ್ಣೋ ಮಹರಾಯ – ಪಾಂಡ್ಯ MIಗೆ ಬಂದಿದ್ದೇ ತಪ್ಪಾಯ್ತಾ?
ಬಚ್ಚನ್ ಫ್ಯಾಮಿಲಿಯ ಗುಟ್ಟು ಒಂದೊಂದಾಗಿಯೇ ಬಯಲಾಗುತ್ತಿದೆ.. ಎಲ್ಲವೂ ಸರಿಯಿಲ್ಲ ಅನ್ನೋ ಮಾತು ಜೋರಾಗಿಯೇ ಕೇಳಿ ಬರ್ತಾ ಇದೆ.. ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ದೂರವಾಗೋದು ಪಕ್ಕಾ ಎನ್ನುವ ಮಾತುಗಳು ಕೂಡ ಕೇಳಿ ಬರ್ತಿದೆ. ಇದಕ್ಕೆ ಪೂರಕ ಎಂಬಂತೆ ಐಶ್ ಹಾಗೂ ಅಭಿಷೇಕ್ ಎಲ್ಲಿಯೂ ಜೊತೆಯಾಗಿ ಕಾಣಿಸಿಕೊಳ್ಳುವುದಿಲ್ಲ. ಅಭಿಷೇಕ್ ಇಡೀ ಕುಟುಂಬವೆ ಜೊತೆಗಿದ್ದರೂ ಕೂಡ ಅಲ್ಲಿ ಐಶ್ವರ್ಯ ರೈ ಮತ್ತು ಮಗಳು ಆರಾಧ್ಯ ಇರುವುದಿಲ್ಲ. ಈ ದೃಶ್ಯ ಅನಂತ್ ಅಂಬಾನಿ ಮದುವೆಯಲ್ಲಿಯೂ ಕಂಡು ಬಂದಿತ್ತು. ಅಭಿಷೇಕ್ ತನ್ನ ಸಹೋದರಿ ಮತ್ತವರ ಮಕ್ಕಳು, ತಂದೆ ಅಮಿತಾಬ್, ತಾಯಿ ಜಯಾ ಬಚ್ಚನ್ ಜೊತೆ ಬಂದಿದ್ದರೆ, ಸುಮಾರು ಗಂಟೆಗಳ ನಂತರ ಐಶ್ವರ್ಯ ಮತ್ತು ಆರಾಧ್ಯ ಮದುವೆ ಸಮಾರಂಭಕ್ಕೆ ಎಂಟ್ರಿ ಕೊಟ್ಟಿದ್ರು. ಮದುವೆ ಬಳಿಕ ಐಶ್ವರ್ಯ ಮಗಳ ಜೊತೆ ವಿದೇಶಕ್ಕೆ ಹಾರಿದ್ರು. ಐಶ್ ವಿದೇಶಕ್ಕೆ ಹೋಗುದ್ದಕ್ಕೆ ಅಭಿಷೇಕ್-ಅಮಿತಾಬ್ ಕೋಪಗೊಂಡಿದ್ದಾರೆ ಎನ್ನಲಾಗ್ತಿದೆ. ಇದೀಗ ಬಚ್ಚನ್ ಮನೆಯಲ್ಲಿ ಭಿನ್ನಾಭಿಪ್ರಾಯ ಹೆಚ್ಚಿದ್ದು, ಇದಕ್ಕೆಲ್ಲಾ ಈ ನಟಿಯೇ ಕಾರಣ ಎಂದು ನೆಟ್ಟಿಗರು ಹೇಳ್ತಿದ್ದಾರೆ.
ಐಶ್ವರ್ಯಗೆ ಜಯಾ ಬಚ್ಚನ್ ಅಮ್ಮನಂತೆ ಇದ್ರು.. ಹೋದಲೆಲ್ಲಾ ಮುದ್ದಿನ ಸೊಸೆಯನ್ನ ಹಾಡಿ ಹೊಗಳ್ತಾ ಇದ್ರು. ಆದ್ರೀಗ ಮಗಳಂತಿದ್ದ ಸೊಸೆಯನ್ನ ಜಯಾ ದೂರ ಇಟ್ಟಿದ್ದಾರೆ ಎನ್ನಲಾಗ್ತಿದೆ. ಇನ್ನು ಐಶ್ವರ್ಯಾ ನಾದಿನಿ ಜೊತೆ ಕೂಡ ಜಗಳವಾಡಿಕೊಂಡಿದ್ದಾರಂತೆ. ಹೀಗಾಗಿ ಐಶ್ವರ್ಯ ಫ್ಯಾಮಿಲಿಯಿಂದ ದೂರ ಉಳಿದುಕೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಐಶ್ವರ್ಯ ರೈ ಹಿರಿಯ ನಟಿ ರೇಖಾ ಜೊತೆಗೆ ಕ್ಲೋಸ್ ಆಗಿರುವುದೇ ಇಷ್ಟೆಲ್ಲಾ ವಿವಾದಕ್ಕೆ ಕಾರಣ ಅಂತಾ ಹೇಳಲಾಗ್ತಿದೆ.
ಐಶ್ವರ್ಯ ಅವರು ನಟಿ ರೇಖಾ ಜೊತೆ ಬಹಳ ಸಲಿಗೆಯಿಂದ ಇರುತ್ತಾರೆ. ಯಾವುದೇ ಸಭೆ ಸಮಾರಂಭ ಇರಲಿ ಎಲ್ಲೇ ಇರಲಿ ಇವರಿಬ್ಬರ ನಡುವಿನ ಬಾಂಧವ್ಯ ಅಲ್ಲಿ ಕಾಣಸಿಗುತ್ತದೆ. ಅಂಬಾನಿ ಕುಟುಂಬದ ಮದುವೆಯಲ್ಲಿ ಹಿರಿಯ ನಟಿ ರೇಖಾ ಮೇಲೆ ಪ್ರೀತಿಯ ಸುರಿಮಳೆಗೈದಿದ್ದಾರೆ. ಇಬ್ಬರೂ ಭೇಟಿಯಾಗಿ ಅಪ್ಪಿಕೊಂಡಿದ್ದು ಮಾತ್ರವಲ್ಲದೆ, ಗುಸು-ಗುಸು, ಪಿಸು-ಪಿಸು ಅಂತ ಕಿವಿಯಲ್ಲಿ ಮಾತಾಡಿಕೊಂಡಿದ್ದಾರೆ. ಐಶ್ವರ್ಯಾ ಮತ್ತು ರೇಖಾ ಒಟ್ಟಿಗೆ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. 2019ರಲ್ಲಿ, ಉರ್ದು ಕವಿ ಕೈಫಿ ಅಜ್ಮಿ ಅವರ 100 ನೇ ಜನ್ಮ ವಾರ್ಷಿಕೋತ್ಸವದಂದು, ಇಬ್ಬರೂ ಕೈ ಕೈ ಹಿಡಿದು ನಡೆದುಕೊಂಡು ಬಂದಿದ್ರು. ಐಶ್ವರ್ಯ ರೇಖಾ ಜೊತೆ ಕ್ಲೋಸ್ ಆಗಿರೋದು ಜಯಾಬಚ್ಚನ್ ಗಾಗಲೀ, ಬಚ್ಚನ್ ಪರಿವಾರಕ್ಕಾಗಲೀ ಇಷ್ಟವಿಲ್ಲವಂತೆ. ಬಚ್ಚನ್ ಪರಿವಾರ ನಟಿ ರೇಖಾ ಜೊತೆ ಅಂತರ ಕಾಯ್ದುಕೊಂಡೆ ಬಂದಿದೆ. ಆದರೆ ಐಶ್ವರ್ಯ ಅದಕ್ಕೆ ತಯಾರಿಲ್ಲ ಎನ್ನಲಾಗಿದೆ.
ಇನ್ನು ನಟಿ ರೇಖಾ ಅವರನ್ನ ಬಚ್ಚನ್ ಫ್ಯಾಮಿಲಿಯ ವಿಲನ್ ಅಂತ ಕರೆಯೋದಕ್ಕೂ ಕಾರಣ ಇದೆ. ರೇಖಾ ಮತ್ತು ಅಮಿತಾಬ್ ಬಚ್ಚನ್ ಮಾಜಿ ಪ್ರೇಮಿಗಳು ಅನ್ನೋದು ಅಲ್ಮೋಸ್ಟ್ ಎಲ್ಲರಿಗೂ ಗೊತ್ತೇ ಇದೆ. ರೇಖಾ ಮತ್ತು ಜಯಾ ನಡುವಿನ ಜಗಳ ಕೂಡ ಜಗತ್ ಜಾಹಿರ್ ಆಗಿದೆ. ಇದೀಗ ನಟಿ ರೇಖಾ ಜೊತೆಗೆ ಐಶ್ವರ್ಯಾ ರೈ ಕ್ಲೋಸ್ ಆಗಿದ್ದು, ಬಚ್ಚನ್ ಕುಟುಂಬದ ನಡುವಿನ ಜಗಳಕ್ಕೆ ಕಾರಣ ಎಂದು ಹೇಳಲಾಗ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಡಿವೋರ್ಸ್ ವಿಚಾರವಾಗಿ ಜನರು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ಬಚ್ಚನ್ ಕುಟುಂಬದಲ್ಲಿನ ಜಗಳಕ್ಕೆ ರೇಖಾ ಕಾರಣ ಎಂದಿದ್ದಾರೆ. ಮತ್ತೊಬ್ಬರು ಬಚ್ಚನ್ ಸಂಸಾರದಲ್ಲಿ ಭಿನ್ನಾಭಿಪ್ರಾಯವಿದೆ, ಅಪ್ಪ, ಅಮ್ಮ, ಸಹೋದರಿ ಪಾರ್ಟಿ ಸೇರಿದ್ದಾರೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ‘ಶತ್ರುವಿನ ಶತ್ರು ನನ್ನ ಸ್ನೇಹಿತ’ ಎಂದೆಲ್ಲಾ ಕಮೆಂಟ್ ಹರಿದಾಡ್ತಿದೆ.
ಬಿಗ್‌ಬಿ ಫ್ಯಾಮಿಲಿಯಲ್ಲಿ ಮನಸ್ತಾಪ ಹೆಚ್ಚಾಗಿದೆ ಅನ್ನೋ ವಿಚಾರ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಐಶ್ವರ್ಯ ಹಾಗೂ ಅಭಿಷೇಕ್ ಶೀಘ್ರದಲ್ಲೇ ಡಿವೋರ್ಸ್ ಪಡೆಯುವ ಸಾಧ್ಯತೆ ಇದೆ ಎಂದು ಕೂಡ ಹೇಳಲಾಗ್ತಿದೆ. ಆದ್ರೆ ಈ ಬಗ್ಗೆ ಈ ದಂಪತಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಇನ್ನಾದ್ರೂ ಅಭಿಷೇಕ್ ಹಾಗೂ ಐಶ್ವರ್ಯ ರೈ ಸ್ಪಷ್ಟನೆ ನೀಡ್ತಾರಾ? ಹರಿದಾಡ್ತಿರುವ ಸುದ್ದಿಗಳಿಗೆ ಬ್ರೇಕ್ ಹಾಕ್ತಾರಾ ಅಂತಾ ಕಾದು ನೋಡ್ಬೇಕು.