ಕೈಜಾರಿ ಬಿದ್ದ ಮಗು ಬದುಕಿದರೂ ನಿಲ್ಲದ ಟೀಕೆ – ಟ್ರೋಲ್‌ಗಳಿಗೆ ಬಲಿಯಾಯ್ತು ತಾಯಿಯ ಜೀವ!

ಕೈಜಾರಿ ಬಿದ್ದ ಮಗು ಬದುಕಿದರೂ ನಿಲ್ಲದ ಟೀಕೆ – ಟ್ರೋಲ್‌ಗಳಿಗೆ ಬಲಿಯಾಯ್ತು ತಾಯಿಯ ಜೀವ!

ಇತ್ತೀಚೆಗೆ ಚೆನ್ನೈನ ಅಪಾರ್ಟ್​ಮೆಂಟ್​ನ ಮಗುವೊಂದು ತಾಯಿಯ ಕೈಯಿಂದ ಜಾರಿ ಬಾಲ್ಕನಿಗೆ ಬಿದ್ದಿತ್ತು. ಮಗುವನ್ನು ರಕ್ಷಣೆ ಮಾಡಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿತ್ತು. ಈ ವಿಡಿಯೋ ನೋಡಿ ಅನೇಕರು ಮಗುವಿನ ತಾಯಿ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದೀಗ ಆ ಮಗುವಿನ ತಾಯಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇದನ್ನೂ ಓದಿ: ರಾಹುಲ್‌ ಗಾಂಧಿ ಪ್ರಧಾನಿಯಾಗುವವರೆಗೂ ಸಾಲ ಕೊಡುವುದಿಲ್ಲ! – ಅಂಗಡಿ ಮುಂದೆ ಬೋರ್ಡ್‌ ಹಾಕಿದ ವ್ಯಾಪಾರಿ

ಹೌದು, ಚೈನ್ನೈನಲ್ಲಿ ಈ ಘಟನೆ ನಡೆದಿತ್ತು. ಬಾಲ್ಕನಿಯಿಂದ ಬಿದ್ದ ಮಗು ಪವಾಡದಂತೆ ಸಾವನ್ನು ಗೆದ್ದು ಬಂದಿತ್ತು. ಮಗುವನ್ನು ರಕ್ಷಣೆ ಮಾಡಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿತ್ತು. ಈ ಘಟನೆ ಬಳಿಕ ಮಗುವಿನ ತಾಯಿ ವಿರುದ್ಧ ಸಾಕಷ್ಟು ನಿಂದನೆ ವ್ಯಕ್ತವಾಗಿತ್ತು. ತಾಯಿಯ ನಿರ್ಲಕ್ಷ್ಯವೇ ಕಾರಣ, ತಾಯಿ ಅಜಾಗರೂಕತೆಯಿಂದ ಈ ಅವಘಡ ಸಂಭವಿಸಿದೆ. ಹೀಗಾಗಿ ಈ ಘಟನೆ ನಡೆಯಲು ತಾಯಿಯೇ ನೇರ ಕಾರಣ ಎಂದೆಲ್ಲ ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಲಾಗಿತ್ತು.

ಇದರಿಂದ ರಮ್ಯ ಮನೊಂದಿದ್ದರು. ಇಷ್ಟು ಮಾತ್ರವಲ್ಲದೇ ಕೆಲ ಸುದ್ದಿ ವಾಹಿನಿಗಳಿಗೆ ಬೈಟ್‌ ಕೊಟ್ಟಿದ್ದ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಕೂಡ ತಾಯಿಯ ವೈಫಲ್ಯವೇ ಈ ಘಟನೆಗೆ ಕಾರಣ ಎಂದು ಬಿಂಬಿಸುವಂತಹ ಹೇಳಿಕೆಗಳನ್ನು ನೀಡಿದ್ದರು. ಈ ಎಲ್ಲಾ ಅವಮಾನಗಳು, ಹೇಳಿಕೆಗಳು ರಮ್ಯಾಳನ್ನು ಖಿನ್ನತೆಗೆ ದೂಡಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೊಯಮತ್ತೂರಿನ ಕಾರಮಡೈಯಲ್ಲಿರುವ ತವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ರಮ್ಯಾ ಚೆನ್ನೈನ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಪತಿ ವೆಂಕಟೇಶ್ ಕೂಡ ಐಟಿ ಉದ್ಯೋಗಿ. ಎರಡು ವಾರಗಳ ಹಿಂದೆ ರಮ್ಯಾ ಮತ್ತು ಅವರ ಪತಿ ತಮ್ಮ ಮಗುವಿನೊಂದಿಗೆ ಕರಾಮಡೈನಲ್ಲಿರುವ ತಮ್ಮ ತವರು ಮನೆಗೆ ಬಂದಿದ್ದರು. ಭಾನುವಾರದಂದು ಪೋಷಕರು ಶುಭ ಸಮಾರಂಭದಲ್ಲಿ ಭಾಗವಹಿಸಲು ಮನೆಯಿಂದ ತೆರಳಿದ್ದರು. ಇತ್ತ ರಮ್ಯಾ ಮನೆಯಲ್ಲಿ ಒಬ್ಬಳೇ ಇದ್ದರು. ಇದೇ ಸಮಯವನ್ನು ನೋಡಿಕೊಂಡ ರಮ್ಯಾ ಆತ್ಮಹತ್ಯೆಯ ನಿರ್ಧಾರ ಮಾಡಿದರು. ಇನ್ನು ಸಮಾರಂಭ ಮುಗಿಸಿ ಮನೆಗೆ ಬಂದಾಗ ರಮ್ಯಾ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಕೂಡಲೇ ರಮ್ಯಾರನ್ನು ಪೋಷಕರು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಆಕೆ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಕರಮಡೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Shwetha M