ಬೌಲರ್ ಅಲ್ಲ ನನ್ನ ಗುರಿ ಬಾಲ್ ಅಷ್ಟೇ – Baby Boss ಬ್ಯಾಟಿಂಗ್ ಸೀಕ್ರೆಟ್ ಇದೇ..!

ಬೌಲರ್ ಅಲ್ಲ ನನ್ನ ಗುರಿ ಬಾಲ್ ಅಷ್ಟೇ – Baby Boss ಬ್ಯಾಟಿಂಗ್ ಸೀಕ್ರೆಟ್ ಇದೇ..!

ಕ್ರಿಕೆಟ್ ಲೋಕದ ಬೇಬಿ ಬಾಸ್. ಐಪಿಎಲ್‌ನಲ್ಲಿ ಅಬ್ಬರಿಸುತ್ತಿರುವ ಯಂಗ್ ಸ್ಟಾರ್.. ವೈಭವ್ ಸೂರ್ಯವಂಶಿ ಇದ್ದಲ್ಲಿ ಸಿಕ್ಸರ್.. ಫೋರ್.. ರನ್‌ಗಳ ಸುರಿಮಳೆ. ಈ ಸೀಸನ್‌ನಲ್ಲಿ ಸೋಲಿಲ್ಲದ ಸರದಾರನಂತೆ ಮುನ್ನುಗುತ್ತಿದ್ದ ಆರ್‌ಸಿಬಿ ಟೀಮ್ ಕಟ್ಟಿಹಾಕಿದ್ದು ಕೂಡಾ ಈತನೇ. ಇದೀಗ ವೈಭವ್ ಸೂರ್ಯವಂಶಿ ತನ್ನ ಬ್ಯಾಟಿಂಗ್ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ:ಸಿಡಿದೆದ್ರೆ ಮಾತ್ರ CSK ಸೇಫ್ – ಸಂಜು & ರುತುರಾಜ್ ಗೆ ಅಗ್ನಿಪರೀಕ್ಷೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೊದಲ ಸೋಲಿಗೆ ಕಾರಣ ಈ ಬೇಬಿ ಬಾಸ್ ವೈಭವ್ ಸೂರ್ಯವಂಶಿ. ವೈಭವ್ ಮತ್ತು ಧ್ರುವ ಜ್ಯುರೇಲ್ ಬ್ಯಾಟಿಂಗ್ ಅಬ್ಬರಕ್ಕೆ ಬೆಂಗಳೂರು ಟೀಮ್ ಸೋಲಬೇಕಾಯಿತು. 26 ಎಸೆತಗಳಲ್ಲಿ 8 ಫೋರ್ ಹಾಗೂ 7 ಭರ್ಜರಿ ಸಿಕ್ಸ್ ಸಿಡಿಸಿ ಬರೋಬ್ಬರಿ 78 ರನ್ ಗಳಿಸಿದ ವೈಭವ್ ಸೂರ್ಯವಂಶಿಯ ಬ್ಯಾಟಿಂಗ್ ಶಕ್ತಿಯ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.

ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ವೈಭವ್ ಸೂರ್ಯವಂಶಿ, ಬೌಲರ್ ಯಾರೇ ಇರಲಿ, ನನ್ನ ಗುರಿ ಚೆಂಡಿನ ಮೇಲಷ್ಟೇ ಎಂದಿದ್ದಾರೆ. ಆರ್​ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿ ಮುಂಬೈ ಇಂಡಿಯನ್ಸ್ ವಿರುದ್ಧ ಅಬ್ಬರಿಸಿದ್ದರು. ಅದರಲ್ಲೂ ಜಸ್​ಪ್ರೀತ್ ಬುಮ್ರಾ ಅವರ ಒಂದೇ ಓವರ್​ನಲ್ಲಿ  2 ಸಿಕ್ಸ್​ನೊಂದಿಗೆ 13 ರನ್ ಚಚ್ಚಿದ್ದರು. ಇದೀಗ ಭುವನೇಶ್ವರ್ ಕುಮಾರ್ ಹಾಗೂ ಜೋಶ್ ಹೇಝಲ್​ವುಡ್ ಅವರ ಬೆಂಡೆತ್ತಿದ್ದಾರೆ. ಅದರಲ್ಲೂ ಹೇಝಲ್ ವುಡ್ ಅವರ ಮೊದಲ ಬಾಲ್ ಎದುರಿಸಿದ ಸೂರ್ಯವಂಶಿ ಫೋರ್ ಹೊಡೆದರು. ಅದೇ ಓವರ್‌ನಲ್ಲಿ ಇವರೊಬ್ಬರೇ ಬರೋಬ್ಬರಿ 18 ರನ್ ಹೊಡೆದಿದ್ದಾರೆ. ಹೀಗಾಗಿಯೇ ಬುಮ್ರಾ ಮತ್ತು ಹೇಝಲ್‌ವುಡ್ ಅವರಂತಹ ದಿಗ್ಗಜರನ್ನು ಎದುರಿಸುವಾಗ ಭಯವಿತ್ತೇ ಎಂಬ ಪ್ರಶ್ನೆಯನ್ನು ವೈಭವ್ ಮುಂದಿಡಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಯುವ ದಾಂಡಿಗ, “ಬೌಲಿಂಗ್ ಮಾಡುತ್ತಿರುವುದು ಯಾರು ಎಂಬುದು ಮನಸ್ಸಿನ ಮೂಲೆಯಲ್ಲಿ ಇದ್ದೇ ಇರುತ್ತದೆ. ಆದರೆ ನಾನು ಬೌಲರ್ ಮುಖ ನೋಡಿ ಆಡುವುದಿಲ್ಲ, ಬದಲಿಗೆ ಬರುತ್ತಿರುವ ಚೆಂಡನ್ನು ನೋಡಿ ಆಡಲು ಪ್ರಯತ್ನಿಸುತ್ತೇನೆ. ನನ್ನ ಸಹಜ ಆಟಕ್ಕೆ ನಾನು ಬೆಂಬಲ ನೀಡುತ್ತೇನೆ. ಇಲ್ಲಿ ಬೌಲರ್ ಯಾರು ಎಂಬುದು ನನಗೆ ಮುಖ್ಯವಲ್ಲ. ನನ್ನು ಗುರಿ ಚೆಂಡಿನ ಮೇಲೆ ಮಾತ್ರ ಇರುತ್ತದೆ ಎಂದು ವೈಭವ್ ಸೂರ್ಯವಂಶಿ ಹೇಳಿದ್ದಾರೆ. ಇನ್ನು ಪಂದ್ಯದ ಗೆಲುವಿನ ನಂತರ ಸಂಭ್ರಮಾಚರಣೆ ಅಥವಾ ಕೇಕ್ ಕತ್ತರಿಸುವ ಯೋಜನೆ ಇದೆಯೇ ಎಂದು ಕೇಳಿದಾಗ, ಇಲ್ಲ ಸರ್, ಅಂತಹದ್ದೇನೂ ಇಲ್ಲ. ನಮಗೆ ನಾಳೆ ಬೆಳಿಗ್ಗೆ ಬೇಗ ವಿಮಾನ ಇರುವುದರಿಂದ ಇವತ್ತು ಬೇಗ ಮಲಗಬೇಕಿದೆ. ಶಿಸ್ತು ನಮಗೆ ಮುಖ್ಯ, ಎಂದು ಹೇಳುವ ಮೂಲಕ ತಮ್ಮ ವೃತ್ತಿಪರತೆಯನ್ನು ಮೆರೆದಿದ್ದಾರೆ. ಇದೇ ವೇಳೆ ತಮ್ಮ ಈ ಬೆಳವಣಿಗೆಗೆ ತಂದೆ ಮತ್ತು ಕೋಚ್‌ಗಳ ಮಾರ್ಗದರ್ಶನವೇ ಕಾರಣ ಎಂದು ಅವರು ಸ್ಮರಿಸಿರುವ ವೈಭವ್. ನನ್ನ ತಂದೆ ಮತ್ತು ಕೋಚ್‌ಗಳು, ವಿಶೇಷವಾಗಿ ಇಲ್ಲಿನ ಗಾರ್ಡಿಯನ್ ರೋಮಿ ಸರ್ ಅವರು ಯಾವಾಗಲೂ ಒಂದು ಮಾತನ್ನು ಹೇಳುತ್ತಾರೆ – ಈ ಪ್ರಯಾಣ ಬಹಳ ದೀರ್ಘವಾಗಿದೆ, ಇದು ಕೇವಲ ಆರಂಭವಷ್ಟೇ. ಹೊರಗಿನ ವಿಚಾರಗಳತ್ತ ಗಮನ ಹರಿಸದೆ ಕೇವಲ ಆಟ ಮತ್ತು ಪ್ರಕ್ರಿಯೆಯಮೇಲೆ ಮಾತ್ರ ಗಮನ ಹರಿಸಬೇಕು ಎಂದು ಹೇಳಿದ್ದಾರೆ. ನಾನು ಅವರ ಮಾತನ್ನು ಪಾಲಿಸುತ್ತಿದ್ದೇನೆ ಎಂದು ವೈಭವ್ ಸೂರ್ಯವಂಶಿ ಹೇಳಿದ್ದಾರೆ. ಇದೇ ವೇಳೆ ಬೇಗನೆ ಔಟಾದ ಬಗ್ಗೆ ಮಾತನಾಡಿದ ವೈಭವ್, “ನಾನು ಕ್ರೀಸ್‌ನಲ್ಲಿ ಇನ್ನೂ ಸ್ವಲ್ಪ ಸಮಯ ಉಳಿದಿದ್ದರೆ ತಂಡಕ್ಕೆ ಇನ್ನೂ 10-20 ರನ್ ಬರುತ್ತಿತ್ತು. ಗುರಿ ಬೆನ್ನಟ್ಟುವಾಗ ಪಂದ್ಯವನ್ನು ಇನ್ನೂ ಎರಡು ಓವರ್ ಮೊದಲೇ ಮುಗಿಸಬಹುದಿತ್ತು. ಅನಗತ್ಯ ಹೊಡೆತಕ್ಕೆ ಕೈಹಾಕಿ ಔಟ್ ಆದಾಗ ತಂಡಕ್ಕೆ ಹಿನ್ನಡೆಯಾಗುತ್ತದೆ ಎಂಬ ಬೇಸರ ನನಗಿರುತ್ತದೆ.  ನನ್ನ ಮೊದಲ ಆದ್ಯತೆ ತಂಡದ ಗೆಲುವು. ಹೀಗಾಗಿ ಕೆಲವೊಮ್ಮೆ ತಪ್ಪುಗಳಾಗುತ್ತದೆ ಎಂದಿದ್ದಾರೆ. ವೈಭವ್ ಸೂರ್ಯವಂಶಿ ಅವರ ಈ ಮಾತುಗಳು ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದೆ.

Sulekha