PAK ಸೋಲಿಸಿದ್ದೇ ಬಿಲ್ಡಪ್ ಬಾಬರ್?  -ಕ್ಯಾಪ್ಟನ್ಸಿ ಕಿತ್ತಾಟಕ್ಕೆ ಬಲಿಯಾಯ್ತಾ ತಂಡ?
ಮೇಜರ್ ಸರ್ಜರಿ.. ಯಾರಿಗೆ ಗೇಟ್ ಪಾಸ್?

PAK ಸೋಲಿಸಿದ್ದೇ ಬಿಲ್ಡಪ್ ಬಾಬರ್?  -ಕ್ಯಾಪ್ಟನ್ಸಿ ಕಿತ್ತಾಟಕ್ಕೆ ಬಲಿಯಾಯ್ತಾ ತಂಡ?ಮೇಜರ್ ಸರ್ಜರಿ.. ಯಾರಿಗೆ ಗೇಟ್ ಪಾಸ್?

2022ರ ಟಿ-20 ವಿಶ್ವಕಪ್​ನಲ್ಲಿ ಪಾಕಿಸ್ತಾನ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು. ಸೋ ಈ ಬಾರಿ ಟ್ರೋಫಿ ಗೆಲ್ಲೋ ಕನಸಿನೊಂದಿಗೆ ಟೂರ್ನಿಗೆ ಕಾಲಿಟ್ಟಿದ್ರು. ಆದ್ರೆ ಸೂಪರ್ 8ಗೂ ಕೂಡ ಸೆಲೆಕ್ಟ್ ಆಗದೇ ಲೀಗ್​ ಹಂತದಲ್ಲೇ ಟೂರ್ನಿಯಿಂದ ಗೇಟ್ ಪಾಸ್ ಪಡೆದಿದ್ದಾರೆ. ಗೆಲ್ಲಬೇಕಿದ್ದ ಮ್ಯಾಚ್​ಗಳನ್ನೇ ಕೈ ಚೆಲ್ಲಿಕ್ಕೊಂಡಿದ್ದು ಬಾರೀ ಟೀಕೆಗೆ ಗುರಿಯಾಗಿದೆ. ದೈತ್ಯ ಬೌಲಿಂಗ್​ ಪಡೆಯನ್ನು ಹೊಂದಿದ್ದರೂ, ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಲೀಗ್​ ಹಂತದಲ್ಲಿ ಹೊರಬಿದ್ದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ ಹಿರಿಯ ಆಟಗಾರರ ಕಳಪೆ ಪ್ರದರ್ಶನ, ಮುಸುಕಿನ ಗುದ್ದಾಟ ಇಡೀ ತಂಡವನ್ನೇ ಬಲಿ ಪಡೆದಿದೆ. ಇದೆಲ್ಲ ಮನಗಂಡಿರುವ ಪಾಕ್ ಕ್ರಿಕೆಟ್ ಮಂಡಳಿ ತಂಡಕ್ಕೆ ಸರ್ಜರಿ ಮಾಡಲು ಮಾಸ್ಟರ್ ಪ್ಲ್ಯಾನ್ ಮಾಡಿದೆ. ಅದ್ರಲ್ಲೂ ತಂಡದ ಕ್ಯಾಪ್ಟನ್ ಬಾಬರ್ ಅಜಂ ವಿರುದ್ಧ ಪಾಕ್ ಕ್ರಿಕೆಟ್ ಫ್ಯಾನ್ಸ್ ಹಾಗೇ ಮಾಜಿ ಆಟಗಾರರು ರೊಚ್ಚಿಗೆದ್ದಿದ್ದಾರೆ. ವಿಶ್ವಕಪ್​ ಆತಿಥ್ಯ ವಹಿಸಿರುವ ಕ್ರಿಕೆಟ್​ ಶಿಶು ಅಮೆರಿಕದ ಎದುರು ಸೂಪರ್​ ಓವರ್​ನಲ್ಲಿ ಪಾಕಿಸ್ತಾನ ಹೀನಾಯ ಸೋಲು ಕಂಡಿತ್ತು. ಬಲಿಷ್ಠ ಬೌಲಿಂಗ್​ ಪಡೆಯನ್ನು ಹೊಂದಿದ್ರೂ ಕೂಡ ತಂಡ ಕಳಪೆ ಆಟವಾಡಿದ್ದು ಅಸಮಾಧಾನಕ್ಕೆ ಕಾರಣವಾಗಿದೆ. ಆದ್ರೆ ಇಲ್ಲಿ ತಂಡ ಸೋಲೋಕೇ ಬೇರೆಯದ್ದೇ ಕಾರಣ ಇದೆ.

ಇದನ್ನೂ ಓದಿ: ಐಟಂ ಸಾಂಗ್ ನಲ್ಲಿ ಸಾನಿಯಾ? –  ಯಾರ ಪ್ರೀತಿಗೆ ಬಿದ್ರು ಮಿರ್ಜಾ?

ಮನೆಯೊಂದು ಮೂರು ಬಾಗಿಲು

ಅಸಲಿಗೆ ಟಿ-20 ವಿಶ್ವಕಪ್​ನೂ ಮುನ್ನ ಬಾಬರ್ ಅಜಂ ಅವ್ರನ್ನ ಪಾಕಿಸ್ತಾನ ಟೀಂ ಕ್ಯಾಪ್ಟನ್ ಮಾಡಲಾಗಿತ್ತು. ನಾಯಕನಾಗಿ ಪುನರಾಗಮನದ ನಂತರ ಬಾಬರ್ ಅಜಮ್ ಮುಂದೆ ತಂಡವನ್ನು ಒಗ್ಗೂಡಿಸುವುದೇ ದೊಡ್ಡ ಸವಾಲಾಗಿತ್ತು. ನಾಯಕ ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ವೇಗಿ ಶಾಹೀನ್ ಶಾ ಆಫ್ರಿದಿ ತೀವ್ರ ಅಸಮಾಧಾನಗೊಂಡಿದ್ರು. ಅಲ್ಲದೇ ತಮ್ಮನ್ನು ನಾಯಕತ್ವಕ್ಕೆ ಪರಿಗಣಿಸದಿರುವುದು ಮೊಹಮ್ಮದ್ ರಿಜ್ವಾನ್​ಗೂ ಬೇಸರ ತರಿಸಿತ್ತು. ಇದೇ ಕಾರಣಕ್ಕೆ ತಂಡದಲ್ಲಿ ಯಾವುದೂ ಸರಿ ಹೋಗದೇ ತಾಳಮೇಳ ತಪ್ಪಿಸಿತ್ತು. ಅಸಲಿಗೆ ಪಾಕ್ ತಂಡದಲ್ಲಿ ಬಾಬರ್ ಅಜಮ್, ಶಾಹೀನ್ ಅಫ್ರಿದಿ, ಮೊಹಮ್ಮದ್ ರಿಜ್ವಾನ್​ ನೇತೃತ್ವದಲ್ಲಿ ಮೂರು ಗುಂಪುಗಳಿವೆ. ಮಹಮದ್​ ಅಮೀರ್​, ಇಮಾದ್ ವಾಸಿಮ್ ಅವರಂತಹ ಹಿರಿಯರು ತಂಡದಲ್ಲಿ ಸ್ಥಾನ ಪಡೆದರೂ ಒಗ್ಗಟ್ಟಿಲ್ಲದ ಕಾರಣ ವಿಶ್ವಕಪ್​ ಲೀಗ್​ನಿಂದಲೇ ಹೊರಬೀಳಲು ಕಾರಣವಾಗಿದೆ. ಇನ್ನೂ ಕೆಲ ಆಟಗಾರರು ಮುಖ ನೋಡಿ ಮಾತು ಕೂಡ ಆಡದಂತಹ ಸ್ಥಿತಿಯಲ್ಲಿದ್ದಾರೆ. ಒಂದೇ ಡ್ರೆಸ್ಸಿಂಗ್​ ರೂಮ್​ನಲ್ಲಿದ್ದರೂ ಅವರ ಮಧ್ಯೆ ಹೊಂದಾಣಿಕೆ ಇಲ್ಲ. ಇದನ್ನು ಸರಿಪಡಿಸಲು ನಾಯಕ ಬಾಬರ್​ ಒದ್ದಾಡಿದ್ದೇ ಬಂತು. ಯಾವುದೇ ಲಾಭ ಆಗಿಲ್ಲ. ಕ್ರಿಕೆಟ್​ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ರಾಷ್ಟ್ರೀಯ ಆಯ್ಕೆಗಾರ ವಹಾಬ್ ರಿಯಾಜ್ ಎಲ್ಲ ಆಟಗಾರರ ಜೊತೆ ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ. ತಂಡದ ಯಶಸ್ಸಿಗಾಗಿ ಒಟ್ಟಾಗಿ ಶ್ರಮಿಸಿ ಎಂದು ಬುದ್ಧಿವಾದ ಹೇಳಿದರೂ, ವೈಯಕ್ತಿಕ ಪ್ರತಿಷ್ಠೆಯನ್ನು ಯಾರೂ ಬಿಡದೇ ಇರುವುದು ತಂಡಕ್ಕೆ ಮುಳುವಾಗಿದೆ. ವಿಶ್ವಕಪ್​ನಲ್ಲಿ ಹೀನಾಯ ಸೋಲಿನ ಬಳಿಕ ಕ್ರಿಕೆಟ್​ ಮಂಡಳಿಯು ತಂಡದಲ್ಲಿ ಮಹತ್ತರ ಬದಲಾವಣೆ ಮಾಡಲು ಮುಂದಾಗಿದೆ. ಆಟಗಾರರ ಮೌಲ್ಯಮಾಪನ ಮಾಡಿ ಅವರನ್ನು ತಂಡದಲ್ಲಿ ಮುಂದುವರಿಸಬೇಕಾ ಬೇಡವಾ ಎಂಬ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಜೊತೆಗೆ ರಾಷ್ಟ್ರೀಯ ಗುತ್ತಿಗೆ ಪಟ್ಟಿಯಲ್ಲೂ ಬದಲಾವಣೆಯಾಗಲಿದೆ ಎಂದೂ ತಿಳಿದುಬಂದಿದೆ.

ಇನ್ನು ಟಿ20 ವಿಶ್ವಕಪ್​ನಲ್ಲಿ  ಬಾಬರ್ ಆಝಮ್ ಅವರ ಬ್ಯಾಟಿಂಗ್ ಬಗ್ಗೆ ಪ್ರತಿಕ್ರಿಯಿಸಿರೋ ಶಾಹೀದ್ ಅಫ್ರಿದಿ, ಪಾಕ್ ನಾಯಕ ಸದಾ ವಿರಾಟ್ ಕೊಹ್ಲಿ ರೀತಿ ಪಂದ್ಯ ಗೆಲ್ಲಿಸುವ ಪ್ರದರ್ಶನ ನೀಡಬೇಕೆಂದು ಸಲಹೆ ನೀಡಿದ್ದಾರೆ. ಬಾಬರ್ ಆಝಮ್ ಅವರ ವೈಯಕ್ತಿಕ ಪ್ರದರ್ಶನ ಉತ್ತಮವಾಗಿದೆ. ಆದರೆ ಆತ ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ ಉತ್ತಮ ಆಟವನ್ನು ಪ್ರದರ್ಶಿಸುವಲ್ಲಿ ಎಡವಿದ್ದಾರೆ ಎಂಬುದು ನಿಜ ಎಂದಿದ್ದಾರೆ.  ಅಸಲಿಗೆ ಪಾಕ್ ಪಾಲಿಗೆ ಬಾಬರ್ ಒಬ್ಬ ಉತ್ತಮ ಆಟಗಾರ. ಅಂತಾರಾಷ್ಟ್ರೀಯ ಟಿ20 ಮಾದರಿ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ದಾಖಲೆಯನ್ನ ಬಾಬರ್ ನಿರ್ಮಿಸಿದ್ದಾರೆ. 2016ರಿಂದ 2024ರವರೆಗೆ 123 ಪಂದ್ಯಗಳನ್ನ ಆಡಿರುವ ಬಾಬರ್ 3 ಶತಕ, 36 ಅರ್ಧಶತಕಗಳ ಸಮೇತ 4,145 ರನ್ ಗಳಿಸಿದ್ದಾರೆ. ಈ ವಿಚಾರದಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಂತರದ ಸ್ಥಾನದಲ್ಲಿದ್ದಾರೆ. ಅದ್ರಲ್ಲೂ 2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಬರ್ ಆಝಮ್ ಆಡಿದ 6 ಪಂದ್ಯಗಳಿಂದ 60.60ರ ಸರಾಸರಿಯಲ್ಲಿ 303 ರನ್ ಗಳಿಸಿದ್ದರು. ಆದರೆ ಪ್ರಸ್ತುತ ನಡೆಯುತ್ತಿರುವ ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನ ಗೆಲ್ಲಿಸುವಲ್ಲಿ ಫೇಲ್ಯೂರ್ ಆದ್ರು. ದರೆ ಕಳೆದ ಮೂರು ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲೂ ಪಾಕಿಸ್ತಾನಕ್ಕೆ ಟ್ರೋಫಿ ಗೆದ್ದು ಕೊಡುವಲ್ಲಿ ಎಡವಿರುವ ಬಾಬರ್ ಆಝಮ್ ಮತ್ತೊಮ್ಮೆ ತಮ್ಮ ಕ್ಯಾಪ್ಟನ್ಸಿ ಪಟ್ಟ ಕಳೆದುಕೊಳ್ಳುವ ಹೊಸ್ತಿಲಲ್ಲಿ ನಿಂತಿದ್ದಾರೆ. ಒಟ್ನಲ್ಲಿ ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಐರ್ಲೆಂಡ್ ವಿರುದ್ಧದ ತನ್ನ ಕೊನೆಯ ಪಂದ್ಯದಲ್ಲಿ ಪ್ರಯಾಸಕರ ಗೆಲುವಿನೊಂದಿಗೆ ಅಭಿಯಾನ ಮುಗಿಸಿದೆ. 2022ರ ವಿಶ್ವಕಪ್​ನಲ್ಲಿ ರನ್ನರ್​ಅಪ್​ ಆಗಿದ್ದ ಬಾಬರ್ ಅಜಮ್ ಪಡೆ, ಇದೀಗ ಲೀಗ್​​ನಲ್ಲೇ ತನ್ನ ಅಭಿಯಾನ ಕೊನೆಗೊಳಿಸಿ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಎ ಗುಂಪಿನ ಲೀಗ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಲೀಗ್​ನಿಂದಲೇ ಹೊರಬಿದ್ದಿದೆ. ವಿಶ್ವಕಪ್ ಟೂರ್ನಿಯಿಂದ ಪಾಕ್ ಹೊರಬಿದ್ದ ಬಳಿಕ ತಂಡದಲ್ಲಿ ಮೇಜರ್ ಸರ್ಜರಿ ಆಗೋದು ಕನ್ಫರ್ಮ್ ಆಗಿದೆ. ಎರಡನೇ ಬಾರಿಗೆ ತಂಡದ ನಾಯಕತ್ವ ವಹಿಸಿಕೊಂಡಿದ್ದ ಬಾಬರ್ ಆಝಂ ಕಥೆ ಏನಾಗಲಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

Shwetha M

Leave a Reply

Your email address will not be published. Required fields are marked *