648 ದಿನ.. ಹಾಫ್ ಸೆಂಚುರಿಯೂ ಇಲ್ಲ! – ಪಾಕ್ ಕೊಹ್ಲಿ ಬಾಬರ್ ಕಂಪ್ಲೀಟ್ ZERO
ಕ್ಯಾಪ್ಟನ್ಸಿ ಕೊಕ್.. ತಂಡದಿಂದಲೇ ಔಟ್?
ಜಗತ್ತಿನ ಬಲಿಷ್ಠ ಕ್ರಿಕೆಟ್ ಟೀಮ್ಗಳಲ್ಲಿ ಪಾಕಿಸ್ತಾನ ಕೂಡ ಒಂದು. ಒಂದು ಕಾಲದಲ್ಲಿ ವಿಶ್ವದಲ್ಲೇ ಅತ್ಯಂತ ಯಶಸ್ವೀ ಆಟಗಾರರ ಬಳಗವನ್ನ ಹೊಂದಿದ್ದ ಪಾಕ್, ಐಸಿಸಿ ಟ್ರೋಫಿಗಳನ್ನ ಗೆದ್ದು ಚಾಂಪಿಯನ್ ಆಗಿ ಮೆರೆದಾಡಿತ್ತು. ಆದ್ರೆ ಈಗಿನ ಸಿಚುಯೇಷನ್ ಕಂಪ್ಲೀಟ್ ಉಲ್ಟಾ. ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಹೋಗ್ತಿದ್ರೆ ಕ್ರಿಕೆಟ್ ಕೂಡ ಕೈಕೊಡ್ತಿದೆ. ಆಟಗಾರರರೆಲ್ಲಾ ಬ್ಯಾಟಿಂಗ್, ಬೌಲಿಂಗ್ನೇ ಮರೆತಂತಿದ್ದಾರೆ. ಅದ್ರಲ್ಲೂ ಪಾಕ್ನ ಯಂಗ್ ಹೀರೋ ಬಾಬರ್ ಅಜಂ ಈಗ ಬಿಗ್ ಝೀರೋ ಆಗ್ತಿದ್ದಾರೆ. ಕಳೆದ 2 ವರ್ಷಗಳಿಂದ ಬಾಬರ್ ಬ್ಯಾಟ್ ಫುಲ್ ಸೈಲೆಂಟ್ ಆಗಿದೆ. ಕ್ಯಾಪ್ಟನ್ಸಿ ಕಳ್ಕೊಂಡ್ರೂ ಎಚ್ಚೆತ್ತುಕೊಳ್ಳದ ಬಾಬರ್ ಇದೀಗ ಟೀಂನಿಂದಲೇ ಹೊರಬೀಳೋ ಆತಂಕದಲ್ಲಿದ್ದಾರೆ. ಅಷ್ಟಕ್ಕೂ ಬಾಬರ್ ಫೇಲ್ಯೂರ್ ಹಿಂದಿನ ಕಾರಣ ಏನು? ಟೀಂನಿಂದಲೇ ಗೇಟ್ಪಾಸ್ ಪಡೀತಾರಾ? ಪಾಕ್ ಕ್ರಿಕೆಟ್ನಲ್ಲಿ ಆಗ್ತಿರೋದೇನು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ರಿಯಲ್ ಹೀರೋ KL RAHUL – ವಿದ್ಯಾರ್ಥಿ ಶಿಕ್ಷಣಕ್ಕೆ ಬೆಳಕಾದ ಕನ್ನಡಿಗ
ಪಾಕಿಸ್ತಾನದ ಅನುಭವಿ ಹಾಗೇ ಸ್ಟಾರ್ ಪ್ಲೇಯರ್ ಬಾಬರ್ ಅಜಂ. ಬಾಬರ್ಗೆ ಪಾಕ್ನಲ್ಲಿ ಅದೆಂಥಾ ಫ್ಯಾನ್ಸ್ ಇದ್ದಾರೆ ಅಂದ್ರೆ ನಮ್ಮ ಕಿಂಗ್ ವಿರಾಟ್ ಕೊಹ್ಲಿಗೆ ಹೋಲಿಕೆ ಮಾಡ್ತಾರೆ. ನಿಜ. ನಮ್ಮ ವಿರಾಟ್ ಕೊಯ್ಲಿಯಷ್ಟು ಅಲ್ದೇ ಇದ್ರೂ ಬಾಬರ್ ಉತ್ತಮ ಆಟಗಾರರನೇ. ಆದ್ರೆ ಕಳೆದ 2 ವರ್ಷಗಳಿಂದ ಫೇಲ್ಯೂರ್ ಅನ್ನೋದು ಬಾಬರ್ ಬೆನ್ನು ಬಿದ್ದಿದೆ. ನಾಯಕನಾಗಿಯೂ ಯಶಸ್ಸು ಸಿಗ್ತಿಲ್ಲ. ಆಟಗಾರರನಾಗಿಯೂ ಸಕ್ಸಸ್ ಕಾಣೋಕೆ ಆಗ್ತಿಲ್ಲ. ಆಫ್ ಸೆಂಚುರಿ, ಸೆಂಚುರಿ ಅಂತಾ ವಿಶ್ವಕ್ರಿಕೆಟ್ ದಿಗ್ಗಜರ ರೆಕಾರ್ಡ್ಸ್ ಬ್ರೇಕ್ ಮಾಡ್ತಿದ್ದ ಬಾಬರ್ ಇದೀಗ ಕ್ರೀಸ್ ಕಚ್ಚಿ ನಿಲ್ಲೋಕೂ ಒದ್ದಾಡ್ತಿದ್ದಾರೆ. ಪೆವಿಲಿಯನ್ ಪರೇಡ್ ನಡೆಸ್ತಿದ್ದಾರೆ. ಸದ್ಯ ಮುಲ್ತಾನ್ನಲ್ಲಿ ನಡೆಯುತ್ತಿರೋ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲೂ ಬಾಬರ್ ಸದ್ದು ಮಾಡ್ಲಿಲ್ಲ. 71 ಬಾಲ್ ಫೇಸ್ ಮಾಡಿದ ಬಾಬರ್ ಕೇವಲ 30 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಇದರ ಬೆನ್ನಲ್ಲೇ ಬಾಬರ್ ಬ್ಯಾಟಿಂಗ್ ಬಗ್ಗೆ ಮತ್ತಷ್ಟು ಟೀಕೆಗಳು ಹೆಚ್ಚಾಗಿವೆ.
ಟೆಸ್ಟ್ ನಲ್ಲಿ ಬಾಬರ್ ಅರ್ಧ ಶತಕ ಸಿಡಿಸಿ 2 ವರ್ಷ!
ಬಾಬರ್ ಒಬ್ಬ ಒಳ್ಳೆ ಆಟಗಾರ ನಿಜ. ಆದ್ರೆ ಕಳೆದ 2 ವರ್ಷಗಳಿಂದ ಬಾಬರ್ ಬ್ಯಾಟ್ ಅಷ್ಟೇನು ಸದ್ದು ಮಾಡ್ತಿಲ್ಲ. ಅದ್ರಲ್ಲೂ ಬಾಬರ್ ಅಝಂ ಟೆಸ್ಟ್ ಕ್ರಿಕೆಟ್ನಲ್ಲಿ ಅರ್ಧಶತಕ ಬಾರಿಸಿ ಬರೋಬ್ಬರಿ 648 ದಿನಗಳೇ ಕಳೆದಿವೆ. ಡಿಸೆಂಬರ್ 26, 2022 ರಲ್ಲಿ ನ್ಯೂಝಿಲೆಂಡ್ ವಿರುದ್ಧ ಬಾಬರ್ ಕೊನೆಯ ಬಾರಿಗೆ ಅರ್ಧಶತಕ ಬಾರಿಸಿದ್ದರು. ಇದಾದ ಬಳಿಕ ಟೆಸ್ಟ್ನಲ್ಲಿ ಒಂದೇ ಒಂದು ಹಾಫ್ ಸೆಂಚುರಿ ಕೂಡ ಸಿಡಿಸಿಲ್ಲ. ಇದೇ ಫೇಲ್ಯೂರ್ ಬಗ್ಗೆ ಮಾಜಿ ಆಟಗಾರರು ಸಿಟ್ಟಾಗಿದ್ದಾರೆ. ಟೆಸ್ಟ್ ತಂಡಕ್ಕೆ ಬಾಬರ್ ಆಝಂ ಅವರ ಆಯ್ಕೆಯನ್ನು ಪ್ರಶ್ನಿಸಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಕ್ರೀಸ್ ಕಚ್ಚಿ ನಿಲ್ಲಲು ಪರದಾಡುತ್ತಿರೋ ಬಾಬರ್, ಕಳೆದ 17 ಇನಿಂಗ್ಸ್ಗಳಲ್ಲಿ ಒಂದೇ ಒಂದು ಅರ್ಧಶತಕವನ್ನೂ ಬಾರಿಸಿಲ್ಲ. ಹೀಗಿದ್ರೂ ಪಾಕ್ ಟೆಸ್ಟ್ ತಂಡದಲ್ಲಿ ಸತತ ಅವಕಾಶಗಳನ್ನು ನೀಡಲಾಗಿದೆ. ಆದರೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಬಾಬರ್ ಎಡವುತ್ತಿದ್ದಾರೆ. ಕಳೆದ 648 ದಿನಗಳಿಂದ ಒಂದೇ ಒಂದು ಹಾಫ್ ಸೆಂಚುರಿ ಸಿಡಿಸೋಕೂ ಆಗಿಲ್ಲ.
ಇಂಗ್ಲೆಂಡ್ ಸರಣಿಯಲ್ಲೂ ಫೇಲ್ ಆದ್ರೆ ತಂಡದಿಂದಲೇ ಔಟ್!
ಸದ್ಯ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ ಮುಲ್ತಾನ್ನಲ್ಲಿ ಮೊದಲ ಟೆಸ್ಟ್ ಮ್ಯಾಚ್ ನಡೀತಿದೆ. ಇಲ್ಲೂ ಕೂಡ ಬಾಬರ್ 30 ರನ್ ಗಳಿಸಿ ಔಟಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ವಿಫಲನಾಗಿರುವ ಬಾಬರ್ ಆಝಂ ದ್ವಿತೀಯ ಇನಿಂಗ್ಸ್ನಲ್ಲಿ ಲಯ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದರಲ್ಲೂ ವಿಫಲರಾದರೆ ಅವರು ಮುಂದಿನ ಸರಣಿ ವೇಳೆಗೆ ತಂಡದಿಂದ ಹೊರಬೀಳುವುದು ಗ್ಯಾರಂಟಿ. ಯಾಕಂದ್ರೆ ಬಾಬರ್ ಆಝಂ ಸದ್ಯ ಪಾಕ್ ತಂಡದಲ್ಲಿ ಕೇವಲ ಆಟಗಾರನಾಗಿ ಮಾತ್ರ ಕಣಕ್ಕಿಳಿಯುತ್ತಿದ್ದಾರೆ. ಅಂದರೆ ತಂಡದ ನಾಯಕತ್ವ ಕೈತಪ್ಪಿದೆ. ಇದೀಗ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಸ್ಥಾನ ಪಡೆದಿರುವ ಬಾಬರ್ ಶೀಘ್ರದಲ್ಲೇ ಲಯ ಕಂಡುಕೊಳ್ಳಬೇಕಿದೆ. ಹೀಗಾಗಿ ಬಾಬರ್ ಪಾಲಿಗೆ ಮುಂದಿನ ಮ್ಯಾಚ್ಗಳು ಮಾಡು ಇಲ್ಲವೇ ಮಡಿ ಪಂದ್ಯವಾಗಿರಲಿದೆ.
ಒಂದೇ ವರ್ಷದಲ್ಲಿ 2 ಬಾರಿ ಕ್ಯಾಪ್ಟನ್ಸಿಯಿಂದ ಕೆಳಗಿಳಿದಿದ್ದ ಬಾಬರ್!
ಪಾಕ್ ತಂಡದ ಚುಕ್ಕಾಣಿಯನ್ನು ಹಿಡಿದಿದ್ದ ಬಾಬರ್ ಅಜಂ ಒಂದೇ ವರ್ಷದಲ್ಲಿ ಎರಡೆರಡು ಸಲ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಇದಕ್ಕೂ ಮೊದಲು ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲವಾಗಿತ್ತು. 2023 ರಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡದ ಹೀನಾಯ ಪ್ರದರ್ಶನದ ಹಿನ್ನಲೆಯಲ್ಲಿ ಬಾಬರ್ ಆಝಂ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಅಲ್ಲದೆ ಟಿ20 ತಂಡ ಹಾಗೂ ಏಕದಿನ ತಂಡಗಳಿಗೆ ಶಾಹೀನ್ ಅಫ್ರಿದಿಯನ್ನು ಹಾಗೂ ಟೆಸ್ಟ್ ಕ್ರಿಕೆಟ್ಗೆ ಶಾನ್ ಮಸೂದ್ ಅವರನ್ನು ಹೊಸ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಅದರಂತೆ ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಶಾಹೀನ್ ಅಫ್ರಿದಿ ನಾಯಕತ್ವದಲ್ಲಿ ಕಣಕ್ಕಿಳಿದ ಪಾಕಿಸ್ತಾನ್ ತಂಡವು 4-1 ಅಂತರದಿಂದ ಸೋಲನುಭವಿಸಿತ್ತು. ಇದರ ಬೆನ್ನಲ್ಲೇ ಶಾಹೀನ್ ನಾಯಕತ್ವದ ಬಗ್ಗೆ ಅಪಸ್ವರಗಳು ಕೇಳಿ ಬಂದಿದ್ದವು. ಹೀಗಾಗಿ 2024ರ ಟಿ20 ವಿಶ್ವಕಪ್ಗೂ ಮುನ್ನ ಬಾಬರ್ ಆಝಂ ಅವರನ್ನು ಮತ್ತೆ ನಾಯಕನಾಗಿ ನೇಮಿಸಲಾಗಿತ್ತು. ಆ ಬಳಿಕ ಟಿ20 ವಿಶ್ವಕಪ್ಗೂ ಮೊದಲು ಬಾಬರ್ ಅಜಮ್ ಅವರನ್ನು ಸೀಮಿತ ಓವರ್ಗಳ ನಾಯಕರನ್ನಾಗಿ ಪಿಸಿಬಿ ನೇಮಿಸಿತು. ಆದ್ರೆ ಇಲ್ಲೂ ಕೂಡ ಬಾಬರ್ ಕಂಪ್ಲೀಟ್ ಫೇಲ್ ಆಗಿದ್ರು. ಕ್ರಿಕೆಟ್ ಶಿಶು ಅಂತಾ ಕರೆಸಿಕೊಳ್ಳೋ ಅಮೆರಿಕದಂತಹ ತಂಡದೆದುರು ಸೋತು ಲೀಗ್ ಹಂತದಲ್ಲೇ ಪಾಕಿಸ್ತಾನ ಹೊರಬಿದ್ದಿತ್ತು. ಆ ಬಳಿಕ ಬಾಬರ್ ಆಝಂ ಟಿ20 ಹಾಗೂ ಏಕದಿನ ತಂಡಗಳ ನಾಯಕತ್ವದಿಂದ ಕೆಳಗಿಳಿದಿದ್ರು.
ಯಶಸ್ವೀ ನಾಯಕನಾದ್ರೂ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ಫೇಲ್!
ಬಾಬರ್ ಆಝಂ ಪಾಕಿಸ್ತಾನ್ ತಂಡವನ್ನು 147 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ವೇಳೆ ಪಾಕ್ ಪಡೆ 83 ಪಂದ್ಯಗಳಲ್ಲಿ ಜಯ ಸಾಧಿಸಿದರೆ, 50 ಮ್ಯಾಚ್ಗಳಲ್ಲಿ ಸೋಲನುಭವಿಸಿದೆ. ಇನ್ನು 4 ಪಂದ್ಯಗಳು ಡ್ರಾ ಆದರೆ, 2 ಮ್ಯಾಚ್ಗಳು ಟೈ ಆಗಿತ್ತು. ಹಾಗೆಯೇ 8 ಪಂದ್ಯಗಳು ಫಲಿತಾಂಶರಹಿತವಾಗಿ ಕೊನೆಗೊಂಡಿತ್ತು. ಈ ಅಂಕಿ ಅಂಶಗಳ ಪ್ರಕಾರ ಬಾಬರ್ ಆಝಂ ಪಾಕಿಸ್ತಾನ್ ತಂಡದ ಯಶಸ್ವಿ ನಾಯಕರಲ್ಲಿ ಒಬ್ಬರು. ಇದಾಗ್ಯೂ ಅವರ ನಾಯಕತ್ವದಲ್ಲಿ ಪಾಕಿಸ್ತಾನ್ ತಂಡವು ಈವರೆಗೆ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ನಾಯಕತ್ವ ಬದಲಿಸಲು ಪಿಸಿಬಿ ಮುಂದಾಗಿದೆ. ಇತ್ತೀಚೆಗಷ್ಟೇ ಬಾಬರ್ ಕೂಡ ನಾನು ನಾಯಕತ್ವದಿಂದ ಕೆಳಗಿಳಿದು, ಬ್ಯಾಟಿಂಗ್ಗೆ ಕೇಂದ್ರಿ ಕರಿಸಲು ಬಯಸುತ್ತೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ರು.
ಟೆಸ್ಟ್ ಕ್ರಿಕೆಟ್ ನಲ್ಲಿ ಕಮ್ಮಿಯಾಯ್ತು ಬಾಬರ್ ಪ್ರಾಬಲ್ಯ!
ಟೆಸ್ಟ್ ಕ್ರಿಕೆಟ್ನಲ್ಲಿ ಬಾಬರ್ ಅಜಮ್ ಪ್ರಾಬಲ್ಯ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಅವರಿಂದ ಕಳೆದ 16 ಇನ್ನಿಂಗ್ಸ್ ಗಳಲ್ಲಿ ಒಂದೇ ಒಂದು ಅರ್ಧಶತಕ ಗಳಿಸಲು ಸಾಧ್ಯವಾಗಿಲ್ಲ. 2022ರ ಡಿಸೆಂಬರ್ನಲ್ಲಿ ಅವರು ಕೊನೆಯ ಬಾರಿ ಟೆಸ್ಟ್ ಕ್ರಿಕೆಟ್ನಲ್ಲಿ 50 ರನ್ಗಳ ಗಡಿ ದಾಟಿದ್ದರು. ಕರಾಚಿಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಇನ್ನಿಂಗ್ಸ್ನಲ್ಲಿ 161 ರನ್ ಗಳಿಸಿದ್ದರು. ಅಂದಿನಿಂದ ಅವರು 14, 24, 27, 13, 24, 39, 21, 14, 1, 41, 26, 23, 0, 22, 31, 11 ರನ್ ಗಳಿಸಿ ಔಟಾಗಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕಿಯೂ ಬಾಬರ್ ಉತ್ತಮ ಪ್ರದರ್ಶನ ನೀಡಲಿಲ್ಲ ಎಂದರೆ ತಂಡದ ಹೊರ ಬೀಳುವುದು ಬಹುತೇಕ ಪಕ್ಕ. ಒಟ್ನಲ್ಲಿ ಮುಂದಿನ ವರ್ಷ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯ ಪಾಕಿಸ್ತಾನದಲ್ಲಿ ನಡೆಯಲಿದೆ. ಇದೇ ವೇಳೆ ಅನುಭವಿ ಬ್ಯಾಟರ್ ಬಾಬರ್ ಅಜಮ್ ನಾಯಕತ್ವದಿಂದ ಕೆಳಗೆ ಇಳಿದಿದ್ದ ತಂಡಕ್ಕೆ ಪೆಟ್ಟು ನೀಡಲಿದೆ. ಬಾಬರ್ ಅಜಮ್ ಅವರಿಂದ ತೆರವಾದ ನಾಯಕತ್ವ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬುದೇ ದೊಡ್ಡ ಪ್ರಶ್ನೆ ಆಗಿದೆ.