ಕಾಂಗ್ರೆಸ್​ ಪಕ್ಷ ಡಿಎಂಕೆಯ ಬಿ ಟೀಂ.. ಕರ್ನಾಟಕದಲ್ಲಿರುವುದು ಸ್ಟಾಲಿನ್​ ಬಾಡಿಗೆ ಸರ್ಕಾರ! – ಮಾಜಿ ಸಿಎಂ ಎಚ್​ಡಿಕೆ ಕಿಡಿ

ಕಾಂಗ್ರೆಸ್​ ಪಕ್ಷ ಡಿಎಂಕೆಯ ಬಿ ಟೀಂ.. ಕರ್ನಾಟಕದಲ್ಲಿರುವುದು ಸ್ಟಾಲಿನ್​ ಬಾಡಿಗೆ ಸರ್ಕಾರ! – ಮಾಜಿ ಸಿಎಂ ಎಚ್​ಡಿಕೆ ಕಿಡಿ

ಬೆಂಗಳೂರು: ಬೆಂಗಳೂರು ಬಂದ್‌ ಗೆ ಕರೆ ಕೊಟ್ಟಿದ್ದ ರೈತ ನಾಯಕನನ್ನುಮಂಗಳವಾರ ಬೆಳಗ್ಗೆಯೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆಗೆ ತಯಾರಿ ನಡೆಸಿದ್ದ ಕುರುಬೂರು ಶಾಂತಕುಮಾರ್‌ ಸೇರಿದಂತೆ ಹಲವು ರೈತ ಮುಖಂಡರನ್ನು ಬೆಂಗಳೂರಿನ ಮೈಸೂರ್‌ ಬ್ಯಾಂಕ್‌ ವೃತ್ತದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿರುವುದಕ್ಕೆ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಹೆಚ್‌ಡಿಕೆ, ಕಾಂಗ್ರೆಸ್​ ಪಕ್ಷ ಡಿಎಂಕೆಯ ಬಿ ಟೀಂ. ಕರ್ನಾಟಕದಲ್ಲಿರುವುದು ಸ್ಟಾಲಿನ್​ ಬಾಡಿಗೆ ಸರ್ಕಾರ ಎಂದು ಆರೋಪಿಸಿದ್ದಾರೆ. ಇದೆಂಥಾ ಚೋದ್ಯ ಒಂದು ಕಡೆ ಮೇಕೆದಾಟು ಬೇಕು ಎಂದು ಪಾದಯಾತ್ರೆ ಮಾಡಿದವರು, ಇಂದು ಕಾವೇರಿಗಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದ ರೈತರನ್ನು, ಹೋರಾಟಗಾರರನ್ನು ಬಂಧಿಸಿದ್ದಾರೆ. ರಾತ್ರೋರಾತ್ರಿ ಹೋರಾಟಗಾರರನ್ನು ಬಂಧಿಸಿರುವುದು ಕಾಂಗ್ರೆಸ್​ ಸರ್ಕಾರದ ಕಿಡಿಗೇಡಿತನದ ಪರಮಾವಧಿ. ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರಿಗೆ ಒಂದು ನ್ಯಾಯ, ಕನ್ನಡಿಗರಿಗೆ ಇನ್ನೊಂದು ನ್ಯಾಯ ಎನ್ನುವುದು ಇದೆಯಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕಾವೇರಿ ನೀರಿಗಾಗಿ ಬೆಂಗಳೂರು ಬಂದ್ – ಕುರುಬೂರು ಶಾಂತಕುಮಾರ್ ಪೊಲೀಸ್ ವಶಕ್ಕೆ

ಕೋವಿಡ್ ನಿಯಮ ಉಲ್ಲಂಘಿಸಿ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಮಾಡಬಹುದಾದರೆ, ನಾಡಿನ ಜೀವನಾಡಿ ಕಾವೇರಿಗಾಗಿ ಕನ್ನಡಿಗರು ಪ್ರತಿಭಟನೆ ನಡೆಸಬಾರದೇ ಶಾಂತವಾಗಿ ಹೋರಾಟ ನಡೆಸುತ್ತಿದ್ದ ರೈತರು, ಹೋರಾಟಗಾರರನ್ನು ಬಂಧಿಸಿರುವುದು ಖಂಡನೀಯ. ಇದೇನು ಕನ್ನಡಿಗರ ಸರಕಾರವೋ ಸ್ಟಾಲಿನ್ ಅಧೀನದಲ್ಲಿರುವ ಬಾಡಿಗೆ ಸರಕಾರವೋ? ಇಷ್ಟಕ್ಕೂ ಕನ್ನಡಿಗರು ಮತ ಹಾಕಿದ್ದು ಯಾರಿಗೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಹೋರಾಟಗಾರರು, ರೈತರನ್ನು ಕೂಡಲೇ ಬಂಧಮುಕ್ತಗೊಳಿಸಬೇಕು. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಬೇಕು. ಕಾಂಗ್ರೆಸ್ ಪಕ್ಷವು ಡಿಎಂಕೆ ಪಕ್ಷದ ಬಿ ಟೀಂ ಆಗಿ ಪರಿವರ್ತನೆ ಆದ ಪರಿಣಾಮವೇ ಈ ಕಾವೇರಿ ಬಿಕ್ಕಟ್ಟು ಎನ್ನುವುದು ಕನ್ನಡಿಗರಿಗೆ ಈಗ ಸ್ಪಷ್ಟವಾಗಿ ಅರ್ಥವಾಗಿದೆ ಎಂದು ಹೆಚ್‌ಡಿಕೆ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Shwetha M