ರಾಮನಗರಿಯಲ್ಲಿ ರಾಮನವಮಿ ಅದ್ದೂರಿ ಆಚರಣೆ – ನಾಲ್ಕು ದಿನ ವಿಐಪಿ ದರ್ಶನ ಸ್ಥಗಿತ!
ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೊಂಡು 4 ತಿಂಗಳೇ ಕಳೆದಿದೆ. ಲಕ್ಷಾಂತರ ಮಂದಿ ಭಕ್ತರು ಶ್ರೀರಾಮನ ದರ್ಶನ ಪಡೆದಿದ್ದಾರೆ. ರಾಮನವಮಿಗೆ ದಿನಗಣನೆ ಆರಂಭವಾಗಿದ್ದು, ಈ ಬಾರಿಯ ರಾಮನವಮಿ ಅಯೋಧ್ಯೆಯಲ್ಲಿ ವಿಶೇಷವಾಗಿರಲಿದೆ. ರಾಮನವಮಿಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗಲೇ ಶ್ರೀರಾಮ ಮಂದಿರ ಟ್ರಸ್ಟ್ ವಿಶೇಷ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಟಾಕ್ಸಿಕ್ ಸಿನಿಮಾದಲ್ಲಿ ಬಾಲಿವುಡ್ ತಾರೆಯರು! – ರಾಕಿಂಗ್ ಸ್ಟಾರ್ ಯಶ್ ಜೊತೆ ನಟಿಸಲು ಯಾರಿಗೆಲ್ಲಾ ಸಿಕ್ತು ಅವಕಾಶ?
ಶ್ರೀರಾಮನ ಭಕ್ತರಿಗೆ ಈ ಬಾರಿಯ ರಾಮನವಮಿ ತುಂಬಾನೇ ವಿಶೇಷ. ರಾಮ ಮಂದಿರ ನಿರ್ಮಾಣದ ನಂತರ ಇದು ಮೊದಲ ರಾಮನವಮಿ. ಹೀಗಾಗಿ ಅಯೋಧ್ಯೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ರಾಮಲಲ್ಲಾನ ಜನ್ಮ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ. ರಾಮನವಮಿಯಂದೇ ಶ್ರೀರಾಮನನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ರಾಮಮಂದಿರಕ್ಕೆ ತೆರಳುತ್ತಿದ್ದಾರೆ. ಇದೀಗ ಶ್ರೀರಾಮ ಮಂದಿರ ಟ್ರಸ್ಟ್ ವಿಶೇಷ ಮಾರ್ಗಸೂಚಿಯೊಂದನ್ನು ಹೊರಡಿಸಿದೆ. ನವರಾತ್ರಿಯ ಸಂದರ್ಭದಲ್ಲಿ ನಾಲ್ಕು ದಿನಗಳ ಕಾಲ ಅಯೋಧ್ಯೆಯ ರಾಮಮಂದಿರದಲ್ಲಿ ವಿಐಪಿ ದರ್ಶನವನ್ನು ಸ್ಥಗಿತಗೊಳಿಸಲಾಗಿದೆ. ಅಧಿಸೂಚನೆಯ ಪ್ರಕಾರ, ಏಪ್ರಿಲ್ 15 ರಿಂದ 18 ರವರೆಗೆ ನಾಲ್ಕು ದಿನಗಳ ಕಾಲ ವಿಐಪಿ ದರ್ಶನವನ್ನು ಸ್ಥಗಿತಗೊಳಿಸಲಾಗಿದೆ ಎಂದು ಪ್ರಕರಣೆಯಲ್ಲಿ ತಿಳಿಸಿದೆ.
ಅಯೋಧ್ಯೆಯ ರಾಮಮಂದಿರದಲ್ಲಿ ರಾಮನವಮಿಯ ಸಂದರ್ಭದಲ್ಲಿ ದರ್ಶನಕ್ಕೆ ವಿಐಪಿ ಪಾಸ್‌ಗಳಿಗೆ ನಿಷೇಧ ಹೇರಲಾಗಿದೆ. ಟ್ರಸ್ಟ್ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಏಪ್ರಿಲ್ 15 ರಿಂದ ಏಪ್ರಿಲ್ 18 ರವರೆಗೆ ಆರತಿಗಾಗಿ ಭಕ್ತರಿಗೆ ಅನುಕೂಲಕರ ದರ್ಶನ ಅಥವಾ ವಿಐಪಿ ಪಾಸ್‌ಗಳು ಲಭ್ಯವಿರುವುದಿಲ್ಲ. ಇದರರ್ಥ ರಾಮ ನವಮಿಯಂದು ಸಾಮಾನ್ಯ ಮತ್ತು ವಿಶೇಷ ಭಕ್ತರ ದರ್ಶನದ ವ್ಯವಸ್ಥೆಯನ್ನು ಒಂದೇ ರೀತಿ ಇರಿಸಲಾಗಿದೆ.
ಇನ್ನು ರಾಮನವಮಿಯಂದು ಭಕ್ತರು ಮೊಬೈಲ್ಗಳನ್ನು ತರಬೇಡಿ ಎಂದು ರಾಮಮಂದಿರ ಟ್ರಸ್ಟ್‌ನ ಕಾರ್ಯದರ್ಶಿ ಜನರಿಗೆ ಮನವಿ ಮಾಡಿದ್ದಾರೆ. ರಾಮನ ದರ್ಶನಕ್ಕಾಗಿ ನೀಡಲಾಗಿದ್ದ ಹಿಂದಿನ ಪಾಸ್‌ಗಳನ್ನು ರಾಮಮಂದಿರ ಟ್ರಸ್ಟ್ ರದ್ದುಗೊಳಿಸಿದೆ ಎಂದು ರಾಮ ಜನ್ಮಭೂಮಿಯಿಂದ ತಿಳಿಸಲಾಗಿದೆ.