ನನ್ನ ತಲೆಗೆ 10 ರೂಪಾಯಿ ಸಾಕು.. 10 ಕೋಟಿ ಬೇಡ! – ಬಹುಮಾನ ಘೋಷಿಸಿದ ಅಯೋಧ್ಯೆಯ ಸಾಧುಗೆ ಉದಯನಿಧಿ ತಿರುಗೇಟು
ಸನಾತನ ಧರ್ಮವನ್ನ ನಿರ್ಮೂಲನೆ ಮಾಡಬೇಕು ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಪುತ್ರ ಹಾಗೂ ಹಾಲಿ ಸಚಿವ ಉದಯನಿಧಿ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ತಮಿಳುನಾಡು ಸಿಎಂ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಅವರ ತಲೆಗೆ 10 ಕೋಟಿ ರೂ. ಇನಾಮು ಘೋಷಣೆ ಮಾಡಿರುವ ಅಯೋಧ್ಯೆಯ ಪರಮಹಂಸ ಆಚಾರ್ಯರಿಗೆ ಉದಯನಿಧಿ ಅವರು ತಿರುಗೇಟು ನೀಡಿದ್ದಾರೆ. ತಮಿಳುನಾಡಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಕರುಣಾನಿಧಿ ಅವರ ಮೊಮ್ಮಗ ನಾನು, ಇಂಥಾ ಬೆದರಿಕೆಗಳಿಗೆ ಹೆದರುವ ಮಾತೇ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ: ಉದಯನಿಧಿ ತಲೆ ಕಡಿದುಕೊಟ್ಟವರಿಗೆ 10 ಕೋಟಿ ರೂಪಾಯಿ ಬಹುಮಾನ ಘೋಷಿಸಿದ ಅಯೋಧ್ಯೆಯ ಸಾಧು
ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉದಯನಿಧಿ ಅವರು, ನಾನು ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕೆ ಉತ್ತರ ಪ್ರದೇಶದ ಪರಮಹಂಸ ಆಚಾರ್ಯರು ನನ್ನ ತಲೆಯನ್ನು ಕಡಿದವರಿಗೆ 10 ಕೋಟಿ ರೂ. ಬಹುಮಾನ ಕೊಡುವುದಾಗಿ ಹೇಳಿದ್ದಾರೆ. ನನ್ನ ತಲೆಗೆ 10 ರೂ. ಬಾಚಣಿಗೆ ಸಾಕು ಎನ್ನುವ ಮೂಲಕ ಜೀವ ಬೆದರಿಕೆಯ ಬಗ್ಗೆ ಹಗುರವಾಗಿ ಮಾತನಾಡಿದ ಉದಯನಿಧಿ, ಚಾಪ್ ಅಥವಾ ಸ್ಲೈಸ್ ಎಂಬ ಪದವು ತಮಿಳಿನಲ್ಲಿ ಕೂದಲು ಬಾಚುವುದು ಎಂಬರ್ಥವನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.
ಇದೆಲ್ಲ ನಮಗೆ ಹೊಸದೇನಲ್ಲ. ಇಂತಹ ಬೆದರಿಕೆಗಳಿಗೆ ನಾನು ಹೆದರುವವನೂ ಅಲ್ಲ. ತಮಿಳುನಾಡಿಗಾಗಿ ತಮ್ಮ ತಲೆಯನ್ನೇ ರೈಲು ಹಳಿಯ ಮೇಲೆ ಇಟ್ಟಂತಹ ವ್ಯಕ್ತಿಯ ಮೊಮ್ಮಗ ನಾನು ಎಂದು ತನ್ನ ತಾತ ಕರುಣಾನಿಧಿಯನ್ನು ನೆನಪಿಸಿ ತಿರುಗೇಟು ನೀಡಿದರು.
ಏನಿದು ವಿವಾದ?
ಶನಿವಾರ ಚೆನ್ನೈನಲ್ಲಿ ನಡೆದ ಸನಾತನ ನಿರ್ಮೂಲನ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಕೆಲವೊಂದು ವಿಚಾರಗಳನ್ನು ಕೇವಲ ವಿರೋಧಿಸಿದರೆ ಸಾಲದು, ಅವುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ನಾವು ಡೆಂಘೆ, ಮಲೇರಿಯಾ ಅಥವಾ ಕರೊನಾವನ್ನು ಎದುರಿಸಬಾರದು ಅವುಗಳನ್ನು ಶಾಶ್ವತವಾಗಿ ತೊಡೆದುಹಾಕಬೇಕು. ಅದರಂತೆ ಸನಾತನವನ್ನು ನಿರ್ಮೂಲನೆ ಮಾಡಬೇಕು ಎಂದು ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದರು. ಈ ಹೇಳಿಕೆಗೆ ದೇಶದಾದ್ಯಂತ ಭಾರಿ ವಿರೋಧ ವ್ಯಕ್ತವಾಗುತ್ತಿದೆ.