ಈ ಬಾರಿ ರಾಮನಗರಿಯಲ್ಲಿ ರಾಮನವಮಿ ಅದ್ಧೂರಿ ಆಚರಣೆ- ಅಯೋಧ್ಯೆಯಲ್ಲಿ ಸೂರ್ಯ ತಿಲಕಕ್ಕೆ ಸಿದ್ಧತೆ

ಈ ಬಾರಿ ರಾಮನಗರಿಯಲ್ಲಿ ರಾಮನವಮಿ ಅದ್ಧೂರಿ ಆಚರಣೆ- ಅಯೋಧ್ಯೆಯಲ್ಲಿ ಸೂರ್ಯ ತಿಲಕಕ್ಕೆ ಸಿದ್ಧತೆ

ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೊಂಡು 4 ತಿಂಗಳೇ ಕಳೆದಿದೆ. ಲಕ್ಷಾಂತರ ಮಂದಿ ಭಕ್ತರು ಶ್ರೀರಾಮನ ದರ್ಶನ ಪಡೆದಿದ್ದಾರೆ. ರಾಮನವಮಿಗೆ ದಿನಗಣನೆ ಆರಂಭವಾಗಿದ್ದು, ಈ ಬಾರಿಯ ರಾಮನವಮಿ ಅಯೋಧ್ಯೆಯಲ್ಲಿ ವಿಶೇಷವಾಗಿರಲಿದೆ.

ಶ್ರೀರಾಮನ ಭಕ್ತರಿಗೆ ಈ ಬಾರಿ ವಿಶೇಷ ರಾಮನವಮಿ. ರಾಮ ಮಂದಿರ ನಿರ್ಮಾಣದ ನಂತರ ಇದು ಮೊದಲ ರಾಮನವಮಿ. ಹೀಗಾಗಿ ಅಯೋಧ್ಯೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ರಾಮಲಲ್ಲಾನ ಜನ್ಮ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ. ರಾಮನವಮಿಯಂದು ರಾಮಮಂದಿರದಲ್ಲಿರುವ ಶ್ರೀರಾಮನ ಹಣೆಗೆ ಸೂರ್ಯ ತಿಲಕವಿಡಲು ಸಿದ್ಧತೆಗಳು ನಡೆಯುತ್ತಿವೆ. ರೂರ್ಕಿಯ ವಿಜ್ಞಾನಿಗಳು ಹಗಲಿರುಳು ಈ ಕೆಲಸದಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ:ಎಲೆಕ್ಷನ್‌ಗೆ ನಿಂತ ಬೆನ್ನಲ್ಲೇ  2.46 ಕೋಟಿ ರೂಪಾಯಿ ಬೆಲೆಯ ಕಾರು ಖರೀದಿಸಿದ ಕಂಗನಾ!

500 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಶ್ರೀರಾಮನು ಗರ್ಭಗುಡಿಯಲ್ಲಿ ಕುಳಿತಿದ್ದಾನೆ. ರಾಮನವಮಿಯ ದಿನದಂದು ಸೂರ್ಯನ ಕಿರಣಗಳು ರಾಮಲಲ್ಲಾನ ಹಣೆಯ ಮೇಲೆ ಬೀಳುವ ರೀತಿಯಲ್ಲಿ ರಾಮಮಂದಿರದ ಗರ್ಭಗುಡಿಯನ್ನು ನಿರ್ಮಿಸಲಾಗಿದೆ. ರಾಮ ಮಂದಿರದ ಕೆಳ ಅಂತಸ್ತಿನ ಕಾಮಗಾರಿ ಪೂರ್ಣಗೊಂಡಿದ್ದು, ಮೊದಲ ಮಹಡಿಯ ಕಾಮಗಾರಿ ನಡೆಯುತ್ತಿದ್ದು, ಶಿಖರದ ಕಾಮಗಾರಿ ಇನ್ನೂ ಬಾಕಿ ಇದೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಾರ, ದೇವಾಲಯವು ಪೂರ್ಣಗೊಂಡು ಶಿಖರವನ್ನು ನಿರ್ಮಿಸಿದಾಗ, ಶಿಖರದ ಮೇಲೆ ಸಾಧನವನ್ನು ಸ್ಥಾಪಿಸಿ, ಪ್ರತಿ ರಾಮನವಮಿಯಂದು ಭಗವಾನ್ ರಾಮನ ಹಣೆಗೆ ಸೂರ್ಯ ತಿಲಕವನ್ನು ಇರಿಸಲಾಗುತ್ತದೆ. ಆದರೆ ಇದಕ್ಕಾಗಿ ಭಕ್ತರು ತುಂಬಾ ಸಮಯ ಕಾಯಬೇಕಾಗಿದೆ. ಹೀಗಾಗಿ ಈ ರಾಮನವಮಿಯಂದೇ ಸೂರ್ಯ ತಿಲಕವನ್ನಿಡಲು ಪ್ರಯತ್ನಿಸಲಾಗುತ್ತಿದೆ. ಗೋಪುರವನ್ನು ಇನ್ನೂ ನಿರ್ಮಿಸಲಾಗಿಲ್ಲ, ಈ ಸಾಧನವನ್ನು ದೇವಾಲಯದ ಮೊದಲ ಮಹಡಿಯಲ್ಲಿ ಇರಿಸಲಾಗಿದ್ದು, ರಾಮನವಮಿಯಂದು ಮಧ್ಯಾಹ್ನ 12 ಗಂಟೆಗೆ ಶ್ರೀರಾಮನ ವಿಗ್ರಹದ ಹಣೆಗೆ ಇಡಲು ಸೂರ್ಯ ತಿಲಕದ ಸಿದ್ಧತೆಗಳು ನಡೆಯುತ್ತಿವೆ. ರೂರ್ಕಿಯ ವಿಜ್ಞಾನಿಗಳು ಈ ಕೆಲಸದಲ್ಲಿ ತೊಡಗಿದ್ದಾರೆ.

ಇನ್ನು  ರಾಮನವಮಿಯ ಸಂದರ್ಭದಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ 20 ಗಂಟೆಗಳ ಕಾಲ ಭಕ್ತರಿಗೆ ರಾಮಲಲ್ಲಾನ ದರ್ಶನ ಮಾಡುವ ಅವಕಾಶವಿದೆ. ಈ ವ್ಯವಸ್ಥೆಯು ಏಪ್ರಿಲ್ 15 ರಿಂದ 17 ರವರೆಗೆ ಜಾರಿಯಲ್ಲಿರುತ್ತದೆ. ರಾಮನವಮಿಯಂದು ಅಯೋಧ್ಯೆಯ 100 ಸ್ಥಳಗಳಲ್ಲಿ ಎಲ್ಇಡಿ ಪರದೆಗಳಲ್ಲಿ ನೇರ ಪ್ರಸಾರವಾಗಲಿದೆ.

ಭಕ್ತರು ತಮ್ಮ ಮೊಬೈಲ್ ಫೋನ್, ಶೂ ಮತ್ತು ಇತರ ವಸ್ತುಗಳನ್ನು ಮಂದಿರದೊಳಗೆ ತರದಂತೆ ಸೂಚಿಸಲಾಗಿದೆ. ರಾಮಜನ್ಮಭೂಮಿ ಪಥದಿಂದ ದೇವಸ್ಥಾನದ ಆವರಣದವರೆಗೆ ಭಕ್ತರಿಗೆ 50 ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಸೆಣಬಿನ ಕಂಬಳಿ ಹಾಸಲಾಗುವುದು. ನೆರಳಿಗಾಗಿ ಜರ್ಮನ್ ಹ್ಯಾಂಗರ್‌ ಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರಸಾದದ ಜೊತೆಗೆ ಒಆರ್‌ಎಸ್ ಅನ್ನು ಸಹ ಭಕ್ತರಿಗೆ ನೀಡಲಾಗುವುದು. ಇದರಿಂದ ಅವರಿಗೆ ಬೇಸಿಗೆಯಲ್ಲಿ ಶಕ್ತಿ ಸಿಗುತ್ತದೆ. ರಾಮ ನವಮಿಯ ಸಂದರ್ಭದಲ್ಲಿ ಪಾಸ್ ವ್ಯವಸ್ಥೆಯು ಏಪ್ರಿಲ್ 15 ರಿಂದ 18 ರವರೆಗೆ ರದ್ದಾಗಿರುತ್ತದೆ.

Shwetha M