ಹೂಡಿಕೆದಾರರ ಕೇಂದ್ರಬಿಂದುವಾದ ರಾಮ ನಗರಿ! – ಹೋಟೆಲ್ ಉದ್ಯಮದ ಹಾಟ್‌ಸ್ಪಾಟ್ ಆಗುತ್ತಿದೆ ಅಯೋಧ್ಯೆ!

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಶ್ರೀರಾಮಲಲ್ಲಾ ಉದ್ಘಾಟನೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮಂಗಳವಾರದಿಂದ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯ ಪೂಜಾ ವಿಧಿವಿಧಾನಗಳು ಆರಂಭವಾಗಲಿದೆ. ರಾಮಮಂದಿರ ನಿರ್ಮಾಣವಾಗುತ್ತಿದ್ದಂತೆ ಅಯೋಧ್ಯೆಯಲ್ಲಿ ರಾಮಮಂದಿರದಿಂದ ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶಗಳು ತೆರೆದುಕೊಳ್ಳುತ್ತಿವೆ.
ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆಗೆ ಕೌಂಟ್‌ಡೌನ್.. – ರಾಮಚರಿತ ಮಾನಸ ಪುಸ್ತಕಕ್ಕೆ ಫುಲ್ ಡಿಮ್ಯಾಂಡ್!
ಹೌದು, ಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಅಯೋಧ್ಯೆಯಲ್ಲಿ ಅತಿಥಿ ಸತ್ಕಾರ, ಹೋಟೆಲ್ ಉದ್ಯಮಗಳ ಮೇಲಿನ ಹೂಡಿಕೆಯತ್ತ ಗಮನ ಹರಿಸಿದ್ದಾರೆ. ಖ್ಯಾತ ಹೊಟೆಲ್ ಬ್ರಾಂಡ್ ಗಳು ಅಯೋಧ್ಯೆಯಲ್ಲಿ ಈಗ ತಮ್ಮ ಶಾಖೆಗಳನ್ನು ತೆರೆಯುತ್ತಿವೆ ಹಾಗೂ ಈ ಪ್ರದೇಶದಲ್ಲಿ ಕನಿಷ್ಠ 50 ಪ್ರಮುಖ ಹೋಟೆಲ್ ನಿರ್ಮಾಣ ಯೋಜನೆಗಳು ಪ್ರಗತಿಯಲ್ಲಿವೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.
ಹಲವಾರು ಸಣ್ಣ ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳು ಈ ಪ್ರದೇಶದಲ್ಲಿ ಹೂಡಿಕೆ ಮಾಡುವುದರೊಂದಿಗೆ, ಅಯೋಧ್ಯೆಯು ಹೋಟೆಲ್ ಉದ್ಯಮದಲ್ಲಿ ಹೊಸ ಹಾಟ್‌ಸ್ಪಾಟ್ ಆಗಿ ಹೊರಹೊಮ್ಮುತ್ತಿದೆ.
ಜೊತೆಗೆ, ಉತ್ತಮ ಹೆದ್ದಾರಿಗಳು ಮತ್ತು ರಸ್ತೆಗಳು, ಭಗವಾನ್ ರಾಮನ ಜೀವನವನ್ನು ಚಿತ್ರಿಸುವ ಗೋಡೆಯ ವರ್ಣಚಿತ್ರಗಳು, ಮುಂಭಾಗದ ದೀಪಗಳು ಮತ್ತು ವಿಕ್ಟೋರಿಯನ್ ದೀಪಗಳಿಂದ ಅಲಂಕರಿಸಲ್ಪಟ್ಟ ಭವ್ಯವಾದ ಪ್ರವೇಶದ್ವಾರವು ಅಯೋಧ್ಯೆಯ ಆಕರ್ಷಣೆಯನ್ನು ಹೆಚ್ಚಿಸುತ್ತದೆ.
ಜಾಗತಿಕ ಹೂಡಿಕೆ ಶೃಂಗಸಭೆಯಲ್ಲಿ ಅಯೋಧ್ಯೆಯಲ್ಲಿ ಪ್ರವಾಸೋದ್ಯಮಕ್ಕಾಗಿ ಸುಮಾರು 18,000 ಕೋಟಿ ಮೌಲ್ಯದ 102 ಉದ್ದೇಶಿತ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಪ್ರಸ್ತುತ, ಅಯೋಧ್ಯೆಯಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ 126 ಕಾರ್ಯಗತಗೊಳಿಸಲು ಸಿದ್ಧವಾಗಿರುವ ಯೋಜನೆಗಳಿವೆ ಎಂದು ಅಯೋಧ್ಯೆಯ ವಿಭಾಗೀಯ ಆಯುಕ್ತ ಗೌರವ್ ದಯಾಳ್ ಮಾಹಿತಿ ನೀಡಿದ್ದಾರೆ.