ಬೈಕ್‌ ಟ್ಯಾಕ್ಸಿ ವಿರುದ್ಧ ಆಟೋ ಚಾಲಕರ ಮುಷ್ಕರ: ಪ್ರಯಾಣಿಕರ ಪರದಾಟ

ಬೈಕ್‌ ಟ್ಯಾಕ್ಸಿ ವಿರುದ್ಧ ಆಟೋ ಚಾಲಕರ ಮುಷ್ಕರ: ಪ್ರಯಾಣಿಕರ ಪರದಾಟ

ಬೆಂಗಳೂರು: ಬೆಂಗಳೂರು ಆಟೋರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ನಗರದಲ್ಲಿ ಬೈಕ್ ಟ್ಯಾಕ್ಸಿ ನಿಷೇಧಿಸುವಂತೆ ಆಗ್ರಹಿಸಿ ಭಾನುವಾರ ಮಧ್ಯರಾತ್ರಿಯಿಂದ ಸೇವೆಯನ್ನು ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಿದ್ದಾರೆ.

ಆಟೋ ಚಾಲಕರ ಸಂಘ ಸೋಮವಾರ ಮಧ್ಯರಾತ್ರಿಯವರೆಗೆ ಆಟೋರಿಕ್ಷಾ ಬಂದ್‌ ನಡೆಸಲು ನಿರ್ಧರಿಸಿದ್ದಾರೆ. ಬಂದ್ ಗೆ ಈಗಾಗಲೇ ಸುಮಾರು 2 ಲಕ್ಷಕ್ಕೂ ಅಧಿಕ ಆಟೋ ಚಾಲಕರು ಬೆಂಬಲ ನೀಡಿದ್ದಾರೆ. ಆಟೋ ಸೇವೆ ಬಂದ್‌ನಿಂದಾಗಿ ಪ್ರಯಾಣಿಕರು ನಗರದಲ್ಲಿ ಸಂಚರಿಸಲು ಬಿಎಂಟಿಸಿ ಬಸ್‌, ಮೆಟ್ರೋ, ಖಾಸಗಿ ವಾಹನ, ಟ್ಯಾಕ್ಸಿ ಹಾಗೂ ಓಲಾ, ಊಬರ್ ವಾಹನಗಳನ್ನು ಹೆಚ್ಚಾಗಿ ಅವಲಂಬಿಸಬೇಕಾಗಿದೆ.

ಇದನ್ನೂ ಓದಿ:ಬಾವಿಗೆ ಬಿದ್ದ ಆನೆಮರಿ ರಕ್ಷಣೆ – ಕಾಡಿಗೆ ಬಿಡುವ ವೇಳೆ ಕಣ್ಣೀರಿಟ್ಟ ಅರಣ್ಯಾಧಿಕಾರಿಗಳು 

ಸಾರಿಗೆ ಇಲಾಖೆ ಮತ್ತು ಸಾರಿಗೆ ಸಚಿವರ ಕುಮ್ಮಕ್ಕಿನಿಂದ ಬೆಂಗಳೂರಿನಲ್ಲಿ ಕಳೆದ 2 ವರ್ಷಗಳಿಂದ ಆ್ಯಪ್ ಆಧಾರಿತ ಅನಧಿಕೃತ ವೈಟ್ ಬೋರ್ಡ್ ಬೈಕ್ ಹಾವಳಿ ಹೆಚ್ಚಾಗಿದೆ. ಇದರಿಂದ ಆಟೋ ಚಾಲಕರ ಸಂಪಾದನೆಯನ್ನು ಹಗಲು ದರೋಡೆ ಮಾಡಲಾಗುತ್ತಿದೆ. ಆಟೋ ಚಾಲಕರ ಭವಿಷ್ಯಕ್ಕೆ ಮಾರಕವಾಗಿರುವ ಈ ಯೋಜನೆಗೆ ಸರ್ಕಾರವೇ ಬೆಂಬಲ ನೀಡುತ್ತಿದೆ ಎಂದು ಆಟೋ ಚಾಲಕರ ಸಂಘ ಆರೋಪಿಸಿತ್ತು. ಅಲ್ಲದೇ ಅಕ್ರಮ ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಲು ಮಾರ್ಚ್ 17 ರಿಂದ ಮೂರು ದಿನಗಳವರೆಗೆ ಸರ್ಕಾರಕ್ಕೆ ಗಡುವು ನೀಡಿತ್ತು. ಇದೀಗ ಆಟೋ ಚಾಲಕರು ಸರ್ಕಾರಕ್ಕೆ ಕೊಟ್ಟ ಗಡುವು ಮುಗಿದಿದೆ. ಹೀಗಾಗಿ ಆಟೋ ಚಾಲಕರ ಸಂಘ ಇಂದು ಬಂದ್ ಗೆ ಕರೆ ನೀಡಿದ್ದಾರೆ.

ಸೋಮವಾರ ಬೆಳಗ್ಗೆ 11ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿಯಿಂದ ಚಾಲಕರು ಪಾದಯಾತ್ರೆ ಮೂಲಕ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುವುದಾಗಿ ಒಕ್ಕೂಟ ತಿಳಿಸಿದೆ.

ಆಟೋ ಚಾಲಕರ ಮುಷ್ಕರದ ಹಿನ್ನೆಲೆಯಲ್ಲಿ ಎಚ್ಚೆತ್ತ ಬಿಎಂಟಿಸಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಹೆಚ್ಚಿನ ಬಸ್ ಕಾರ್ಯಾಚರಣೆಗೆ ಮುಂದಾಗಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್ ಸೇವೆ ನೀಡಲು ತಯಾರಿ ನಡೆಸಿದೆ. ಮೆಜೆಸ್ಟಿಕ್, ಕೆ.ಆರ್‌ ಮಾರುಕಟ್ಟೆ, ಶಾಂತಿನಗರ, ಶಿವಾಜಿನಗರ, ಯಶವಂತಪುರ, ಸೇರಿ ಪ್ರಮುಖ ನಿಲ್ದಾಣಗಳಿಂದ ಹೆಚ್ಚಿನ ಕಾರ್ಯಾಚರಣೆಗೆ ಬಿಎಂಟಿಸಿ ಮುಂದಾಗಿದೆ.

ಇನ್ನು ಕೆಲ ಆಟೋ ಚಾಲಕರು ಈ ಬಂದ್ ಅನ್ನೇ ಬಂಡವಾಳ ಮಾಡಿಕೊಂಡಿದ್ದು ಪ್ರಯಾಣಿಕರಿಂದ ದುಪ್ಪಟ್ಟು ಹಣ ಪಾವತಿಸುವಂತೆ ಬೇಡಿಕೆ ಇಡುತ್ತಿದ್ದಾರೆ. ಇದರಿಂದಾಗಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

suddiyaana