ಲಂಕಾದಲ್ಲಿ ಗಂಭೀರ್ ಖಾಲಿ ಖಾಲಿ! – CSK ಕೋಚ್ ದಿನೇಶ್ ಕಾರ್ತಿಕ್?
6 ಬಾಲ್ 8 ರನ್.. ವೈಭವ್ ಫ್ಲಾಪ್

ಲಂಕಾದಲ್ಲಿ ಗಂಭೀರ್ ಖಾಲಿ ಖಾಲಿ! –  CSK ಕೋಚ್ ದಿನೇಶ್ ಕಾರ್ತಿಕ್?6 ಬಾಲ್ 8 ರನ್.. ವೈಭವ್ ಫ್ಲಾಪ್

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು

ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಇನ್ನಿಂಗ್ಸ್ ಮತ್ತು 51 ರನ್​ಗಳಿಂದ ಮಣಿಸಿದ ಆಸ್ಟ್ರೇಲಿಯಾ ಸರಣಿ ಸೋಲಿನಿಂದ ಪಾರಾಗಿದೆ. ಪೂರ್ಣ ಎರಡು ದಿನವೂ ನಡೆಯದ ಈ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ, ಬಾಂಗ್ಲಾದೇಶ ತಂಡಕ್ಕೆ ಎರಡು ಇನ್ನಿಂಗ್ಸ್​ಗಳಲ್ಲಿ 100 ರನ್​ಗಳ ಗಡಿ ದಾಟಲು ಬಿಡಲಿಲ್ಲ. ಈ ಗೆಲುವಿನೊಂದಿಗೆ ಮೊದಲ ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಂಡ ಆಸ್ಟ್ರೇಲಿಯಾ WTC ಫೈನಲ್ ರೇಸ್​ನಲ್ಲಿ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.

ಆಸೀಸ್ ಗೆಲ್ಲುತ್ತಿದ್ದಂತೆ ಭಾರತದ WTC ಫೈನಲ್ ಲೆಕ್ಕಾಚಾರ ಜೋರಾಗಿದೆೆ. ಕೊಲಂಬೊ ಟೆಸ್ಟ್ ಸೇರಿದಂತೆ ಉಳಿದ ಎಲ್ಲಾ ಟೆಸ್ಟ್ ಪಂದ್ಯಗಳನ್ನು ಭಾರತ ಗೆದ್ದರೆ, ಅದು 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ನೇರವಾಗಿ ಅರ್ಹತೆ ಪಡೆಯಲಿದೆ. ಅಲ್ಲದೆ ಕೊಲಂಬೊ ಟೆಸ್ಟ್ ಸೇರಿದಂತೆ ಆರು ಪಂದ್ಯಗಳನ್ನು ಗೆದ್ದು, ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡರೂ ಮತ್ತು ಒಂದು ಪಂದ್ಯವನ್ನು ಸೋತರೂ, ಟೀಂ ಇಂಡಿಯಾ WTC ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ತಲುಪಬಹುದು. ಒಂದು ವೇಳೆ ಎರಡು ಪಂದ್ಯಗಳಲ್ಲಿ ಸೋತರೆ, ಅದರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವ ಆಸೆ ಭಗ್ನವಾಗಲಿದೆ.   

ಕೃಷ್ಣಮಾಚಾರಿ ಶ್ರೀಕಾಂತ್, ಪ್ರಧಾನ ಕೋಚ್ ಗೌತಮ್ ಗಂಭೀರ್ ವಿರುದ್ಧ ಹರಿಹಾಯ್ದಿದ್ದಾರೆ. ಶ್ರೀಲಂಕಾ ಅತ್ಯಂತ ಕಳಪೆ ತಂಡ, ಇಂತಹ ಸರಣಿಯಲ್ಲಿ ಕೋಚ್ ಗಂಭೀರ್ ಅವರಿಗೆ ಯಾವುದೇ ಕೆಲಸವಿಲ್ಲ ಎಂದು ಲೇವಡಿ ಮಾಡಿದ್ದಾರೆ.  ನಾನು ವ್ಯೂಸ್, ಲೈಕ್ ಗಾಗಿ ಕೆಲಸ ಮಾಡುವ ವ್ಯಕ್ತಿಯೇ ಅಲ್ಲ ಎಂದು ಗೌತಮ್ ಗಂಭೀರ್ ಅವರು ಹೇಳಿದ ಬಳಿಕ ಶ್ರೀಕಾಂತ್ ಕಡೆಯಿಂದ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಟೀಂ ಇಂಡಿಯಾದ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ದಿನ ಭರ್ಜರಿ ಶತಕ ಸಿಡಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 193 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 12 ಬೌಂಡರಿಗಳ ಸಹಿತ 117 ರನ್ ಗಳಿಸಿದರು. ಈ ಶತಕದೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾದಲ್ಲಿ ಪ್ರವಾಸಿ ತಂಡದ ನಂಬರ್ 3 ಬ್ಯಾಟರ್ ಆಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.

ಭಾರತದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ 50 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯಗಳಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 37 ವರ್ಷ ವಯಸ್ಸಿನ ಆಲ್‌ರೌಂಡರ್,  ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಪರ ಆಡುವ ಮೂಲಕ ಈ ಮೈಲಿಗಲ್ಲು ತಲುಪಿದರು. ಜಡೇಜ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ, ಬ್ಯಾಟಿಂಗ್‌ನಲ್ಲಿ 4117 ರನ್‌ಗಳನ್ನು ಗಳಿಸಿದ್ದಾರೆ, ಗರಿಷ್ಠ 175* ಸ್ಕೋರ್ ಮತ್ತು ಆರು ಶತಕಗಳನ್ನು ಗಳಿಸಿದ್ದಾರೆ. ಬೌಲಿಂಗ್‌ನಲ್ಲಿ 352 ವಿಕೆಟ್‌ಗಳನ್ನು ಪಡೆದಿದ್ದಾರೆ.

ಸಿಎಸ್‌ಕೆ ಹೊಸ ಕೋಚ್ ಆಯ್ಕೆಯಲ್ಲಿ ಮಾಜಿ ನಾಯಕ ಎಂಎಸ್ ಧೋನಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ವರದಿಯಾಗಿವೆ. ಸಿಎಸ್‌ಕೆಯ ಹೊಸ ಮುಖ್ಯ ಕೋಚ್ ಆಗಿ ವಿದೇಶಿ ಕೋಚ್ ನೇಮಕಗೊಳ್ಳುವ ಸಾಧ್ಯತೆ ಹೆಚ್ಚಿದೆ.  ಹೊಸ ಕೋಚ್ ನೇಮಕಾತಿಗೆ ಸಂಬಂಧಿಸಿದ ಘೋಷಣೆ ಅಕ್ಟೋಬರ್ ನಂತರವಷ್ಟೇ ಹೊರಬೀಳುವ ನಿರೀಕ್ಷೆಯಿದೆ. ಈ ವಿದೇಶಿ ಕೋಚ್ ಆಯ್ಕೆ ಪ್ರಕ್ರಿಯೆಯನ್ನು ಧೋನಿ ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಸಿಎಸ್‌ಕೆ ಹೆಡ್‌ ಕೋಚ್ ಹುದ್ದೆಗೆ ದಿನೇಶ್ ಕಾರ್ತಿಕ್ ಸೂಕ್ತ ಅಭ್ಯರ್ಥಿ ಎಂದು ಮ್ಯಾಥ್ಯೂ ಹೇಡನ್ ಅಭಿಪ್ರಾಯಪಟ್ಟಿದ್ದಾರೆ. ಸಿಎಸ್‌ಕೆ ಹೆಡ್‌ಕೋಚ್ ಆಗುವಂತಹ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಅವರು ಸಿದ್ದರಾಗಿದ್ದಾರೆ ಎಂದೇ ನನಗೆ ಅನಿಸುತ್ತಿದೆ. ತಂಡಕ್ಕೆ ಸ್ಥಳೀಯ ಕೋಚ್ ಇರುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ ಎಂದು ಸಿಎಸ್‌ಕೆ ಮಾಜಿ ಆಟಗಾರರೂ ಆಗಿರುವ ಮ್ಯಾಥ್ಯೂ ಹೇಡನ್ ಹೇಳಿದ್ದಾರೆ.

ಭಾರತದ ಅನುಭವಿ ಲೆಗ್ ಸ್ಪಿನ್ನರ್ ಕರ್ಣ್​ ಶರ್ಮಾ  ತಮ್ಮ 38ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಷೋಷಿಸಿದ್ದಾರೆ. ‘ನಾನು ಈಗ ನಿವೃತ್ತಿ ಹೊಂದಲು ಬಯಸುತ್ತೇನೆ. ನನ್ನ ಕುಟುಂಬ, ಬಿಸಿಸಿಐ, ರೈಲ್ವೇಸ್, ಯುಪಿಸಿಎ, ಆಂಧ್ರಪ್ರದೇಶ, ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಮತ್ತು ಈ ಪ್ರಯಾಣದುದ್ದಕ್ಕೂ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಿವೃತ್ತಿಯ ನಂತರ ನಾನು ತರಬೇತಿ ಮತ್ತು ಇತರ ಕ್ರಿಕೆಟ್ ಸಂಬಂಧಿತ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಸಿದ್ಧನಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ದುಲೀಪ್‌ ಟ್ರೋಫಿಯ ಹೈಲೈಟ್ ಆಗಿದ್ದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಪಾದಾರ್ಪಣೆ ಪಂದ್ಯದಲ್ಲೇ ವಿಫಲರಾಗಿದ್ದಾರೆ. ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ  ನಡೆದ ಪೂರ್ವ ವಲಯ ಮತ್ತು ಈಶಾನ್ಯ ವಲಯ ನಡುವಿನ ಪಂದ್ಯದ ಎರಡನೇ ಓವರ್‌ನಲ್ಲಿ ವೈಭವ್‌ ಸೂರ್ಯವಂಶಿ ಆರು ಎಸೆತಗಳಲ್ಲಿ ಕೇವಲ 8 ರನ್‌ಗಳಿಸಿ ಔಟ್ ಆಗಿ ನಿರಾಸೆ ಮೂಡಿಸಿದ್ರು.

ಇಮ್ರಾನ್ ಖಾನ್ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ, ಭಾರತದ ಕ್ರಿಕೆಟ್ ದಿಗ್ಗಜರಾದ ಸುನಿಲ್ ಗವಾಸ್ಕರ್ ಮತ್ತು ಕಪಿಲ್ ದೇವ್ ಸೇರಿದಂತೆ ವಿಶ್ವದ 21 ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ನಾಯಕರು ಪಾಕಿಸ್ತಾನ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ರಾಜಕೀಯವನ್ನು ಬದಿಗಿಟ್ಟು, ಮಾನವೀಯತೆಯ ನೆಲೆಯಲ್ಲಿ ಇಮ್ರಾನ್ ಖಾನ್ ಅವರಿಗೆ ಕೂಡಲೇ ಸರಿಯಾದ ವೈದ್ಯಕೀಯ ಚಿಕಿತ್ಸೆ ಕೊಡಿಸುವಂತೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಈ ಆಟಗಾರರು ಒತ್ತಾಯಿಸಿದ್ದಾರೆ.

 

Kishor KV

Leave a Reply

Your email address will not be published. Required fields are marked *