ಆಸ್ಟ್ರೇಲಿಯಾಗೆ ಕೈಕೊಟ್ಟ ಸೂಪರ್ ಸ್ಟಾರ್ಸ್ – ಚಾಂಪಿಯನ್ಸ್ ಟ್ರೋಫಿ ಗೆಲ್ಲಲ್ವಾ ಆಸಿಸ್?
![ಆಸ್ಟ್ರೇಲಿಯಾಗೆ ಕೈಕೊಟ್ಟ ಸೂಪರ್ ಸ್ಟಾರ್ಸ್ – ಚಾಂಪಿಯನ್ಸ್ ಟ್ರೋಫಿ ಗೆಲ್ಲಲ್ವಾ ಆಸಿಸ್?](https://suddiyaana.com/wp-content/uploads/2025/02/Mitchell-Starc.webp)
ಮುಂದಿನ ವಾರದಿಂದ ಶುರುವಾಗಲಿರೋ ಚಾಂಪಿಯನ್ಸ್ ಟ್ರೋಫಿಗೆ ಸ್ಟಾರ್ ಆಟಗಾರರೇ ಗೈರಾಗ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ಇಂಜುರಿ ಭೂತ. ಈ ಇಂಜುರಿ ಭೂತ ಅತೀ ಹೆಚ್ಚಾಗಿ ಕಾಡ್ತಿರೋದು ಆಸ್ಟ್ರೇಲಿಯಾ ತಂಡಕ್ಕೆ. ಒಬ್ರಲ್ಲ ಇಬ್ರಲ್ಲ ಐದು ಪ್ಲೇಯರ್ಸ್ ಚಾಂಪಿಯನ್ಸ್ ಟ್ರೋಫಿಯಿಂದ ರೂಲ್ಡ್ ಔಟ್ ಆಗಿದ್ದಾರೆ. ಕ್ಯಾಪ್ಟನ್ನೇ ಹೊರಬಿದ್ದಿದ್ದಾರೆ. ಇದೇ ಕಾರಣಕ್ಕೆ ಈಗ ಆಸ್ಟ್ರೇಲಿಯಾ ತಂಡ ಚಾಂಪಿಯನ್ಸ್ ಟ್ರೋಫಿ ಗೆಲ್ಲೋದು ಹೈ ರಿಸ್ಕ್ ಅಂತಾ ಆಸಿಸ್ ತಂಡದ ಮಾಜಿ ಆಟಗಾರನೇ ಹೇಳಿದ್ದಾರೆ.
ಇದನ್ನೂ ಓದಿ : ಬೂಮಾಸ್ತ್ರವಿಲ್ಲದ ಭಾರತ ಬಲಹೀನ – ಚಾಂಪಿಯನ್ಸ್ ಟ್ರೋಫಿ ಮಿಸ್ಸಾಗುತ್ತಾ?
ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನವೇ ಆಸ್ಟ್ರೇಲಿಯಾ ತಂಡಕ್ಕೆ ಬ್ಯಾಕ್ ಟು ಬ್ಯಾಕ್ ಹೊಡೆತ ಬೀಳ್ತಿದೆ. ಟೂರ್ನಿಗೆ ಆಯ್ಕೆ ಮಾಡಲಾಗಿದ್ದ 15 ಸದಸ್ಯರಲ್ಲಿ ಐವರು ಆಟಗಾರರು ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ತಂಡದಲ್ಲಿ ಐದು ಬದಲಾವಣೆ ಮಾಡ್ಲಾಗಿದೆ.
ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಪಾದದ ನೋವಿನ ಕಾರಣ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಈ ಬಾರಿ ತಂಡವನ್ನು ಸ್ಟೀವ್ ಸ್ಮಿತ್ ಮುನ್ನಡೆಸಲಿದ್ದಾರೆ. ಹಾಗೇ ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗಿ ಜೋಶ್ ಹ್ಯಾಝಲ್ವುಡ್ ಕೂಡ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿದಿದ್ದಾರೆ. ಕಣಕಾಲಿನ ಹಿ೦ಭಾಗದ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನು ಆಸ್ಟ್ರೇಲಿಯಾ ತಂಡದ ಆಲ್ರೌಂಡರ್ ಮಿಚೆಲ್ ಮಾರ್ಷ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಸಹ ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯರಾಗಿದ್ದಾರೆ. ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಸಹ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯುವುದಿಲ್ಲ. ವೈಯುಕ್ತಿಕ ಕಾರಣಗಳಿಂದಾಗಿ ಅವರು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಆಸೀಸ್ ಪಡೆಯ ಆಲ್ ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಅಚ್ಚರಿ ಎಂಬಂತೆ ಕೆಲ ದಿನಗಳ ಹಿಂದೆ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಮಾರ್ಕಸ್ ಸ್ಟೊಯಿನಿಸ್ ಕಾಣಿಸಿಕೊಳ್ಳುವುದಿಲ್ಲ. ಇದೀಗ ಈ ಐವರ ಸ್ಥಾನಕ್ಕೆ ಬದಲಿಯಾಗಿ ಜೇಕ್ ಫ್ರೇಸರ್ ಮೆಕ್ಗುರ್ಕ್, ತನ್ವೀರ್ ಸಂಘ, ಸೆನ್ಸರ್ ಜಾನ್ಸನ್, ಬೆನ್ ದ್ವಾರ್ಶುಯಿಸ್ ಹಾಗು ಶಾನ್ ಅಬಾಟ್ ಆಯ್ಕೆಯಾಗಿದ್ದಾರೆ. ಪರಿಷ್ಕೃತ ಆಸ್ಟ್ರೇಲಿಯಾ ತಂಡವನ್ನ ಪ್ರಕಟ ಮಾಡಲಾಗಿದೆ.
ಹೀಗೆ ಆಸಿಸ್ನ ಹೊಸ ತಂಡ ಪ್ರಕಟವಾದ ಬೆನ್ನಲ್ಲೇ ಹಲವು ರೀತಿಯ ಚರ್ಚೆಗಳು ಶುರುವಾಗಿವೆ. ಶ್ರೀಲಂಕಾ ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಮುನ್ನಡೆಸುತ್ತಿದ್ದ ಸ್ಟೀವ್ ಸ್ಮಿತ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಉತ್ತಮ ನಾಯಕತ್ವದ ದಾಖಲೆಯೊಂದಿಗೆ, ಸ್ಮಿತ್ ಮುನ್ನಡೆ ಸಾಧಿಸಿದ್ದು ಅಚ್ಚರಿಯೇನಲ್ಲ. ತಂಡದ ನಿರ್ಧಾರವನ್ನು ಡೇವಿಡ್ ವಾರ್ನರ್ ಸೇರಿದಂತೆ ಅನೇಕರು ಶ್ಲಾಘಿಸಿದ್ದಾರೆ. ಆದ್ರೆ ಸ್ಟಾರ್ ಪ್ಲೇಯರ್ಸ್ ಇಲ್ಲದೆ ಆಸ್ಟ್ರೇಲಿಯಾ ಚಾಂಪಿಯನ್ಸ್ ಟ್ರೋಫಿಯನ್ನ ಗೆಲ್ಲೋದು ತುಂಬಾನೇ ರಿಸ್ಕ್ ಇದೆ ಎಂದಿದ್ದಾರೆ.
ಆಸ್ಟ್ರೇಲಿಯಾ ಮಾತ್ರವಲ್ದೇ ಸೌತ್ ಆಫ್ರಿಕಾ ತಂಡದ ಬಲಗೈ ವೇಗದ ಬೌಲರ್ ಜೆರಾಲ್ಡ್ ಕೋಟ್ಝಿ, ವೇಗದ ಬೌಲರ್ ಅನ್ರಿಕ್ ನೋಕಿಯ ಕೂಡ ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯರಾಗಿದ್ದಾರೆ. ಹಾಗೇ ಟೀಂ ಇಂಡಿಯಾದಲ್ಲಿ ಬೆನ್ನು ನೋವಿನ ಸಮಸ್ಯೆಯ ಕಾರಣ ಜಸ್ಪ್ರೀತ್ ಬುಮ್ರಾ ಸಹ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ.