ಮಹಿಳೆ ಪಕ್ಕ ರಾತ್ರಿಯಿಡೀ ಮಲಗಿದ ವಿಷಕಾರಿ ಹಾವು – ಆಮೇಲೆ ಏನಾಯ್ತು ಗೊತ್ತಾ?  

ಮಹಿಳೆ ಪಕ್ಕ ರಾತ್ರಿಯಿಡೀ ಮಲಗಿದ ವಿಷಕಾರಿ ಹಾವು – ಆಮೇಲೆ ಏನಾಯ್ತು ಗೊತ್ತಾ?  

ಇದೀಗ ಬೇಸಿಗೆ ಕಾಲ ಆರಂಭವಾಗಿದೆ. ಹೀಗಾಗಿ ಹಾವುಗಳು ನೀರನ್ನು ಹುಡುಕುತ್ತಾ ಜನವಸತಿ ಕಡೆ ಬರುತ್ತವೆ. ಈ ವೇಳೆ ಅವುಗಳು ಮನೆ ಸಂದಿಗೊಂದಿಗಳಲ್ಲಿ ಅಡಗಿಕುಳಿತಿರುತ್ತವೆ. ಕೆಲವೊಮ್ಮೆ ಮನೆಯವರ ಮುಂದೆ ಪ್ರತ್ಯಕ್ಷವಾಗಿ ಅವರನ್ನು ಆತಂಕಕ್ಕೀಡು ಮಾಡುತ್ತವೆ. ಆದರೆ ಇಲ್ಲೊಂದು ಕಡೆ ಹಾವು ಮನೆಯೊಳಗೆ ನುಗ್ಗಿದ್ದು ಮಾತ್ರ ಅಲ್ಲ. ಮನೆಯೊಡತಿಯೊಂದಿಗೆ ಬೆಡ್ ಮೇಲೆ ಹಾಯಾಗಿ ಮಲಗಿದೆ.

ಆಸ್ಟ್ರೇಲಿಯಾದ ಕ್ವೀನ್ಸ್‌ ಲ್ಯಾಂಡ್‌ ನಲ್ಲಿ ಮಹಿಳೆಯೊಬ್ಬರು ಒಂಟಿಯಾಗಿ ವಾಸಿಸುತ್ತಿದ್ದರು. ಎಂದಿನಂತೆ ದಿನನಿತ್ಯದ ಕೆಲಸ ಮುಗಿಸಿ ನಿದ್ರೆಗೆ ಜಾರಿದ್ದಾರೆ. ಆದರೆ ಬೆಳಗ್ಗೆ ಎದ್ದಾಗ ಅವರು ಆಘಾತಗೊಂಡಿದ್ದಾರೆ. ಏಕೆಂದರೆ ಆಕೆಯ ಪಕ್ಕದಲ್ಲಿ ವಿಷಕಾರಿ ಹಾವೊಂದು ರಾತ್ರಿಯಿಡೀ ಮಲಗಿತ್ತು.

ಇದನ್ನೂ ಓದಿ: ಬಿಟ್ಟೆನೆಂದರೂ ಬಿಡದೀ ಕಾಗೆ! – ಯುವಕನ ಪಾಡು ಕೇಳೋರು ಯಾರು?

ಮಹಿಳೆ ಮುಂಜಾನೆ ಎದ್ದಾಗ ಬೆಡ್ ನಲ್ಲಿ ಏನೋ ಸೇರಿಕೊಂಡಂತೆ ಭಾಸವಾಗಿತ್ತು. ಬಳಿಕ ಆಕೆ ಹಾಸಿಗೆಯ ಮೇಲಿದ್ದ ಬೆಡ್‌ಶೀಟ್ ಅನ್ನು ಪರಿಶೀಲಿಸಿದ್ದಾರೆ. ಈ ವೇಳೆ ಬೆಡ್ ನಲ್ಲಿ ಹಾವಿರುವುದು ಗೊತ್ತಾಗಿದೆ. ಹಾವನ್ನು ಕಂಡ ಕೂಡಲೇ ಮಹಿಳೆ ನಿಧಾನವಾಗಿ ತಮ್ಮ ಬೆಡ್‌ ರೂಂನಿಂದ ಹೊರಗೆ ಹೋಗಿ ಬಾಗಿಲನ್ನು ಹಾಕಿದ್ದಾರೆ. ಹಾವು ಬಾಗಿಲಿನ ಸಂದಿಯಿಂದ ಹೊರಗೆ ಹೋಗಬಾರದು ಎಂದು ಟವಲ್ ಅಡ್ಡ ಇಟ್ಟಿದ್ದಾರೆ. ಬಳಿಕ ಉರಗ ಸಂರಕ್ಷಕರಿಗೂ ಮಹಿಳೆ ಕರೆ ಮಾಡಿದ್ದಾರೆ.

ಸುದ್ದಿ ತಿಳಿದ ಉರಗ ಸಂರಕ್ಷಕರು ಸ್ಥಳಕ್ಕೆ ಧಾವಿಸಿ, ನಿಧಾನವಾಗಿ ಬೆಡ್‌ ರೂಂನ ಬಾಗಿಲು ತೆಗೆದಿದ್ದಾರೆ. ಈ ವೇಳೆ ಹಾವು ಆರಾಮವಾಗಿ ಬೆಡ್ ಮೇಲೆ ಮಲಗಿತ್ತು. ಬಾಗಿಲ ಬಳಿ ಸದ್ದು ಆದಾಗ ಅತ್ತ ತಿರುಗಿದ ಹಾವು, ಉರಗ ಸಂರಕ್ಷಕರನ್ನೇ ದಿಟ್ಟಿಸಿ ನೋಡಿದೆ. ಬಳಿಕ ಉರಗ ಸಂರಕ್ಷಕ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಉರಗ ಸಂರಕ್ಷಕರು ಬೆಡ್‌ ಮೇಲೆ ಮಲಗಿದ್ದ ಹಾವಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಈ ಹಾವಿನ ವಿವರಣೆಯನ್ನು ಬರೆದಿದ್ದಾರೆ. ಆಸ್ಟ್ರೇಲಿಯಾದ ಕಂದು ಹಾವು ಎಂದೇ ಕುಖ್ಯಾತವಾದ ಈ ಹಾವು ಅತ್ಯಂತ ವಿಷಕಾರಿಯಾಗಿದೆ. ಇದು ಸುಮಾರು 6 ಅಡಿ ಉದ್ದವಿತ್ತು. ಹಾವುಗಳು ಸಾಮಾನ್ಯವಾಗಿ ಕಿಟಕಿ, ಬಾಗಿಲು ಹಾಗೂ ಸಂದಿಗಳಲ್ಲಿ ನುಸುಳಿ ಮನೆಯೊಳಗೆ ಬರುತ್ತವೆ. ಬಿಸಿಲಿನಿಂದ ರಕ್ಷಣೆ ಪಡೆಯಲು ಹಾವುಗಳು ಮನೆಯೊಳಗೆ ನುಗ್ಗುತ್ತವೆ ಎಂದು ಹೇಳಿದ್ದಾರೆ.

ಇನ್ನು ಹಾವು ಹಾಸಿಗೆ ಮೇಲೆ ಮಲಗಿದ್ದೇಕೆ ಎಂಬುವುದಕ್ಕೆ ಕೂಡ ಉರಗತಜ್ಞರು  ವಿವರಣೆ ನೀಡಿದ್ದಾರೆ. ಹೊರಗೆ ತುಂಬಾ ಬಿಸಿಲು ಇದೆ. ಹೀಗಾಗಿ ಹಾವುಗಳು ತಣ್ಣಗಿನ ಸ್ಥಳಗಳಲ್ಲಿನ ಸಂದಿಗೊಂದಿಗಳಲ್ಲಿ ತಂಗುತ್ತವೆ. ಈ ಬೆಡ್ ರೂಂ ಒಳಗೆ ತಣ್ಣಗಿನ ವಾತಾವರಣ ಇತ್ತು. ಜೊತೆಗೆ ಬೆಡ್ ಕೂಡ ಮೆತ್ತಗೆ ಇತ್ತು.  ಇದು ಹಾವಿಗೆ ಹಿತಕರ ಎನಿಸಿರಬಹುದು. ಹಾಗಾಗಿ ನೆಮ್ಮದಿಯಿಂದ ನಿದ್ರೆಗೆ ಜಾರಿದೆ. ಮನೆಯೊಳಗೆ ಹಾವು ನುಗ್ಗಿದಾಗ ಯಾವುದೇ ಕಾರಣಕ್ಕೂ ಗಾಬರಿಯಾಗಬಾರದು. ಎಚ್ಚರಿಕೆಯಿಂದ ವರ್ತಿಸಬೇಕು ಎಂದು ಸಲಹೆ ನೀಡಿದ್ದಾರೆ.

suddiyaana