ಗಾಯಕ್ವಾಡ್ ಚೊಚ್ಚಲ ಶತಕ ವ್ಯರ್ಥ, ಕೆಟ್ಟ ದಾಖಲೆ ಬರೆದ ಕನ್ನಡಿಗ – ಟೀಮ್ ಇಂಡಿಯಾ ವಿರುದ್ಧ ಗೆದ್ದು ಬೀಗಿದ ಕಾಂಗರೂ ಪಡೆ
ಗ್ಲೆನ್ ಮ್ಯಾಕ್ಸ್‌ವೆಲ್ ಸಿಡಿಸಿದ ಸಿಡಿಲಬ್ಬರದ ಶತಕದ ನೆರವಿನಿಂದ ಟೀಮ್ ಇಂಡಿಯಾ ವಿರುದ್ಧ ಕಾಂಗರೂ ಪಡೆ ಗೆದ್ದು ಬೀಗಿದೆ. ಗುವಾಹಟಿಯಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಐದು ವಿಕೆಟ್‌ಗಳಿಂದ ಭಾರತವನ್ನು ಸೋಲಿಸುವ ಮೂಲಕ ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ. ಆದರೆ, ಟೀಮ್ ಇಂಡಿಯಾದ ರುತುರಾಜ್ ಗಾಯಕ್ವಾಡ್ ಚೊಚ್ಚಲ ಶತಕ ವ್ಯರ್ಥವಾದರೆ, ಕನ್ನಡಿಗ ಪ್ರಸಿಧ್ ಕೃಷ್ಣ ಬೇಡದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರು.
ಇದನ್ನೂ ಓದಿ: ಹಣಕ್ಕಿಂತ ನಿಯತ್ತು ಮುಖ್ಯ ಎಂದ ವಿರಾಟ್ ಕೊಹ್ಲಿ ಆರ್‌ಸಿಬಿ ತೊರೆಯಲು ಮುಂದಾಗಿದ್ದು ಏಕೆ?
ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-1 ಅಂತರದಿಂದ ಮುನ್ನಡೆಯಲ್ಲಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ರುತುರಾಜ್ ಅವರ ಅಜೇಯ 123 ರನ್‌ಗಳ ನೆರವಿನಿಂದ 3 ವಿಕೆಟ್‌ಗಳನ್ನು ಕಳೆದುಕೊಂಡು 222 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ, ಮ್ಯಾಕ್ಸ್‌ವೆಲ್ ಅವರ ಅಜೇಯ 104 ರನ್‌ಗಳ ಆಧಾರದ ಮೇಲೆ ಐದು ವಿಕೆಟ್‌ಗಳನ್ನು ಕಳೆದುಕೊಂಡು ಕೊನೆಯ ಓವರ್‌ನಲ್ಲಿ ಪಂದ್ಯವನ್ನು ಗೆದ್ದುಕೊಂಡಿತು.
ರುತುರಾಜ್ 57 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 7 ಸಿಕ್ಸರ್‌ಗಳ ನೆರವಿನಿಂದ ಶತಕ ಸಿಡಿಸಿದರು. ಇದು ರುತುರಾಜ್ ಅವರ ಮೊದಲ ಟಿ20 ಅಂತಾರಾಷ್ಟ್ರೀಯ ಶತಕವಾಗಿದೆ. ಆದರೆ, ಭಾರತದ ಪರ ದುಬಾರಿ ಬೌಲರ್ ಎನಿಸಿಕೊಂಡ ವೇಗಿ ಕೃಷ್ಣ ಈ ಪಂದ್ಯದ ಮೂಲಕ ಕುಖ್ಯಾತಿಯೊಂದಕ್ಕೆ ಪಾತ್ರರಾದರು. 4 ಓವರ್ ಬೌಲ್ ಮಾಡಿದ ಪ್ರಸಿದ್ಧ್ ಯಾವುದೇ ವಿಕೆಟ್ ಪಡೆಯದೆ 68 ರನ್ ನೀಡಿದರು. ಈ ಮೂಲಕ ಕೃಷ್ಣ ಭಾರತದ ಪರ ಟಿ20 ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ನೀಡಿದ ಬೌಲರ್ ಎಂಬ ಕುಖ್ಯಾತಿಗೆ ಪಾತ್ರರಾದರು. ಈ ಮೂಲಕ ಕನ್ನಡಿಗ ಪ್ರಸಿದ್ಧ್ ಕೃಷ್ಣ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡರು. ಈ ಹಿಂದೆ ಈ ದಾಖಲೆ 4 ಓವರ್‌ಗಳಲ್ಲಿ 64 ರನ್ ನೀಡಿದ್ದ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಹೆಸರಿನಲ್ಲಿತ್ತು.
ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 222 ರನ್ ಗಳಿಸಿತು. ತಂಡದ ಪರ ಗಾಯಕ್ವಾಡ್ 57 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 13 ಬೌಂಡರಿಗಳ ಸಹಿತ 123 ರನ್ ಗಳಿಸಿದರು. ಇವರನ್ನು ಹೊರತುಪಡಿಸಿ ನಾಯಕ ಸೂರ್ಯಕುಮಾರ್ ಯಾದವ್ 29 ಎಸೆತಗಳಲ್ಲಿ 39 ರನ್ ಗಳಿಸಿದರು. ತಿಲಕ್ ವರ್ಮಾ 24 ಎಸೆತಗಳಲ್ಲಿ 31 ರನ್ ಗಳಿಸಿದರು.