ತಾಲಿಬಾನ್ ಆದೇಶಕ್ಕೆ ವಿರೋಧ – ಅಫ್ಘಾನಿಸ್ತಾನ ನಡುವಿನ ಏಕದಿನ ಸರಣಿಯಿಂದ ಹಿಂದೆ ಸರಿದ ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ನಡುವಿನ ಏಕದಿನ ಸರಣಿಯಿಂದ ಆಸ್ಟ್ರೇಲಿಯಾ ತಂಡ ಹಿಂದೆ ಸರಿದಿದೆ. ಅಫ್ಘಾನಿಸ್ತಾನದಲ್ಲಿ ಹೊರಡಿಸಲಾದ ತಾಲಿಬಾನ್ ಆದೇಶದಿಂದ ಬೇಸತ್ತು ಆಸ್ಟ್ರೈಲಿಯಾ ಟೀಮ್ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗ್ತಿದೆ. ವಿಶ್ವದಾದ್ಯಂತ ಕ್ರೀಡೆಗಳಲ್ಲಿ ಮಹಿಳೆಯರನ್ನು ಉತ್ತೇಜಿಸಲು ಸತತವಾಗಿ ಪ್ರಯತ್ನಿಸುತ್ತಿರುವ ದೇಶಗಳಲ್ಲಿ ಆಸ್ಟ್ರೇಲಿಯಾ ಕೂಡ ಒಂದು. ಆದರೆ, ತಾಲಿಬಾನ್ ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಶಿಕ್ಷಣ ಸಹಿತ ಉದ್ಯೋಗಕ್ಕೆ ನಿಷೇಧ ಹೇರಿತ್ತು. ಪಾರ್ಕ್ ಮತ್ತು ಜಿಮ್ಗೆ ತೆರಳಬಾರದೆಂದು ಸೂಚಿಸಿತ್ತು. ಈ ಎಲ್ಲಾ ಬೆಳವಣಿಗೆಯಿಂದ ಮಹಿಳೆಯರ ಪರ ಬೆಂಬಲ ವ್ಯಕ್ತಪಡಿಸಿದ, ಕ್ರಿಕೆಟ್ ಆಸ್ಟ್ರೇಲಿಯಾ ಅಘ್ಫಾನಿಸ್ತಾನ ವಿರುದ್ಧ ಕ್ರಿಕೆಟ್ ಸರಣಿ ಆಡದಿರಲು ನಿರ್ಧರಿಸಿದೆ. ಮಾರ್ಚ್ 2023 ರಲ್ಲಿ, ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ನಡುವೆ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಿತ್ತು. ತನ್ನ ಹೇಳಿಕೆಯಲ್ಲಿ ತಾಲಿಬಾನ್ನಲ್ಲಿ ಮಹಿಳೆಯರು ಮತ್ತು ಹುಡುಗಿಯರ ಮೇಲಿನ ನಿಷೇಧವನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ, ‘ ಅಫ್ಘಾನಿಸ್ತಾನ ಸೇರಿದಂತೆ ವಿಶ್ವದಾದ್ಯಂತ ಮಹಿಳೆಯರು ಮತ್ತು ಪುರುಷರಿಗಾಗಿ ಆಟವನ್ನು ಬೆಳೆಸಲು ಕ್ರಿಕೆಟ್ ಆಸ್ಟ್ರೇಲಿಯಾ ಬದ್ಧವಾಗಿದೆ ಮತ್ತು ದೇಶದಲ್ಲಿ ಮಹಿಳೆಯರು ಮತ್ತು ಹುಡುಗಿಯರ ಸುಧಾರಿತ ಪರಿಸ್ಥಿತಿಗಳ ನಿರೀಕ್ಷೆಯಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯೊಂದಿಗೆ ತೊಡಗಿಸಿಕೊಳ್ಳುವುದನ್ನು ಮುಂದುವರಿಸುತ್ತದೆ.’ ಎಂದು ಹೇಳಿಕೊಂಡಿದೆ.