ಆಸ್ಟ್ರೇಲಿಯನ್ ನೋಟುಗಳಲ್ಲಿ 2ನೇ ಎಲಿಜಬೆತ್ ರಾಣಿ ಫೋಟೋ ಇರಲ್ಲ – ಕಾರಣ ಏನು ಗೊತ್ತಾ..!?

ಆಸ್ಟ್ರೇಲಿಯನ್ ನೋಟುಗಳಲ್ಲಿ 2ನೇ ಎಲಿಜಬೆತ್ ರಾಣಿ ಫೋಟೋ ಇರಲ್ಲ – ಕಾರಣ ಏನು ಗೊತ್ತಾ..!?

ಎರಡನೇ ಎಲಿಜಬೆತ್ ರಾಣಿಯ ಫೋಟೋಗಳು ಇನ್ನು ಮುಂದೆ ಆಸ್ಟ್ರೇಲಿಯನ್ ಕರೆನ್ಸಿಯ 5 ಡಾಲರ್ ನೋಟಿನಲ್ಲಿ ಇರುವುದಿಲ್ಲ. ನೋಟುಗಳಲ್ಲಿ ರಾಣಿಯ ಚಿತ್ರದ ಬದಲು ಆಸ್ಟ್ರೇಲಿಯಾದ ಸ್ಥಳೀಯ ಪ್ರಾಚೀನಾ ನಾಗರಿಕತೆಯನ್ನು ಪ್ರತಿನಿಧಿಸುವ ಚಿತ್ರವೊಂದನ್ನು ಹಾಕಲು ನಿರ್ಧರಿಸಲಾಗಿದೆ.

ಇದನ್ನೂ ಓದಿ : ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯ ಮಾತ್ರ ಸಂಪರ್ಕಿಸಿ – ಮದ್ರಾಸ್ ಹೈಕೋರ್ಟ್!

ಸದ್ಯ ಆಸ್ಟ್ರೇಲಿಯಾದ ಕರೆನ್ಸಿ ನೋಟುಗಳಲ್ಲಿ ಒಂದು ಬದಿಯಲ್ಲಿ ಎರಡನೇ ಎಲಿಜಬೆತ್ ರಾಣಿಯ ಫೋಟೋ ಇದ್ದರೆ ಮತ್ತೊಂದು ಬದಿಯಲ್ಲಿ ಆ ದೇಶದ ಸಂಸತ್ತಿನ ಚಿತ್ರ ಇದೆ. ಈಗ ರಾಣಿಯ ಚಿತ್ರವನ್ನು ಮಾತ್ರ ಬದಲಿಸಲಾಗುತ್ತದೆ. ಇನ್ನೊಂದು ಬದಿಯಲ್ಲಿ ಸಂಸತ್ತಿನ ಚಿತ್ರ ಮುಂದುವರಿಯುತ್ತದೆ. ಆದರೆ, ಬ್ರಿಟನ್ ರಾಣಿಯ ಚಿತ್ರದ ಬದಲು ಬೇರೆ ಯಾವುದನ್ನು ಮುದ್ರಿಸಬೇಕೆಂಬುದು ಇನ್ನೂ ನಿರ್ಧಾರವಾಗಿಲ್ಲ. ಅಲ್ಲಿನ ಮೂಲನಿವಾಸಿಗಳ ಸಂಘಟನೆಗಳೊಂದಿಗೆ ಆಸ್ಟ್ರೇಲಿಯಾದ ರಿಸರ್ವ್ ಬ್ಯಾಂಕ್ ಸಮಾಲೋಚನೆ ನಡೆಸುತ್ತಿದೆ. ಈ ಪ್ರಕ್ರಿಯೆ ಮುಗಿಯಲು ಸುಮಾರು ಕೆಲ ವರ್ಷಗಳೇ ಆಗಬಹುದು. ಅಲ್ಲಿಯವರೆಗೂ ಈಗಿರುವ ರೀತಿಯಲ್ಲೇ ಕರೆನ್ಸಿ ಮುದ್ರಣ ಆಗಲಿದೆ ಎಂದು ಹೇಳಲಾಗುತ್ತಿದೆ.

ಆಸ್ಟ್ರೇಲಿಯಾ ಕರೆನ್ಸಿಯಲ್ಲಿ ಬ್ರಿಟನ್ ರಾಣಿ ಫೋಟೋ ಯಾಕೆ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡಬಹುದು. ಯಾಕಂದ್ರೆ ಬ್ರಿಟಿಷರು ಆಳ್ವಿಕೆ ನಡೆಸಿದ ದೇಶಗಳನ್ನು ಕಾಮನ್​ವೆಲ್ತ್ ರಾಷ್ಟ್ರಗಳೆಂದು ಕರೆಯಲಾಗುತ್ತದೆ. ಇದರಲ್ಲಿ ಭಾರತವೂ ಒಂದು. ಆದರೆ ಬ್ರಿಟನ್ ಹೊರಗಿನ 14 ದೇಶಗಳಲ್ಲಿ ಬ್ರಿಟನ್ ಅರಸರೇ ಮುಖ್ಯಸ್ಥರಾಗಿದ್ದಾರೆ. ಇಲ್ಲಿ ಮುಖ್ಯಸ್ಥ ಸ್ಥಾನ ಕೇವಲ ನಾಮಕಾವಸ್ತೆಗೆ ಮಾತ್ರವಾಗಿದ್ದು ಅವರಿಗೆ ಯಾವುದೇ ಶಾಸನಾಧಿಕಾರ ಇರುವುದಿಲ್ಲ. ಇಂಥ 14 ದೇಶಗಳಲ್ಲಿ ಆಸ್ಟ್ರೇಲಿಯಾವೂ ಒಂದು. ಭಾರತ ಸೇರಿದಂತೆ ಇನ್ನೂ ಹಲವು ದೇಶಗಳು ಬ್ರಿಟಿಷರ ಆಳ್ವಿಕೆಯಿಂದ ಪೂರ್ಣ ಸ್ವಾತಂತ್ರ್ಯ ಪಡೆದಿವೆ. ಬ್ರಿಟಿಷ್ ಅರಸರು ಆಸ್ಟ್ರೇಲಿಯಾದ ಮುಖ್ಯಸ್ಥರಾಗುವುದು ಮುಂದುವರಿಯಬೇಕಾ ಎಂದು ಅಲ್ಲಿ 1999ರಲ್ಲಿ ಜನಾಭಿಪ್ರಾಯ ಪಡೆಯಲಾಯಿತು. ಅದರಲ್ಲಿ ಅರಸರ ಪರವಾಗಿ ತೀರಾ ಕಡಿಮೆ ಅಂತರದ ಬಹುಮತ ಬಂದಿತ್ತು.

ಆಸ್ಟ್ರೇಲಿಯಾಗೆ ಬ್ರಿಟಿಷರು ಬರುವ ಮುನ್ನ ಅಲ್ಲಿ ಮೂಲನಿವಾಸಿಗಳಿದ್ದು, ಅವರ ಸಮಾಜವು ಅದು ಜಗತ್ತಿನ ಅತ್ಯಂತ ಪ್ರಾಚೀನ ನಾಗರಿಕತೆಗಳಲ್ಲಿ ಒಂದಾಗಿತ್ತು. ಹೀಗಾಗಿ, ಆಸ್ಟ್ರೇಲಿಯಾ ಯುವ ಮತ್ತು ಮುಕ್ತ ದೇಶ ಎಂದು ಹಾಡುವ ಅಲ್ಲಿನ ರಾಷ್ಟ್ರಗೀತೆಯನ್ನು 2021ರಲ್ಲಿ ಬದಲಾಯಿಸಲಾಯಿತು.

ಎರಡನೇ ಎಲಿಜಬೆತ್ ರಾಣಿ 2022ರ ಸೆಪ್ಟೆಂಬರ್​ನಲ್ಲಿ ನಿಧನರಾಗಿ ಮೂರನೇ ಕಿಂಗ್ ಚಾರ್ಲ್ಸ್ ಬ್ರಿಟನ್​ನ ಅರಸರಾಗಿದ್ದಾರೆ. ಈಗ ಅವರೇ ಆಸ್ಟ್ರೇಲಿಯಾದ ಮುಖ್ಯಸ್ಥರು. ಆದರೆ ಆಸ್ಟ್ರೇಲಿಯಾದ ಕರೆನ್ಸಿ ನೋಟುಗಳಲ್ಲಿ ದೊರೆ ಚಾರ್ಲ್ಸ್​ನ ಫೋಟೋ ಹಾಕಲಾಗುತ್ತಿಲ್ಲ. ಕರೆನ್ಸಿ ನೋಟಿನಲ್ಲಿ ರಾಣಿಯ ಚಿತ್ರ ಹಾಕುತ್ತಿರುವುದು ಅವರ ವ್ಯಕ್ತಿತ್ವದ ಗುರುತಿಗಾಗಿಯೇ ಹೊರತು ಆಕೆ ಮಹಾರಾಣಿಯಾಗಿದ್ದರು ಎಂಬ ಕಾರಣಕ್ಕಲ್ಲ ಎಂದು ಆಸ್ಟ್ರೇಲಿಯಾ ಸರ್ಕಾರ ಸ್ಪಷ್ಟಪಡಿಸಿದೆ. ಈಗ ಆ ದೇಶದ ಸ್ಥಳೀಯ ಮೂಲ ನಾಗರಿಕತೆಯ ಗುರುತೊಂದನ್ನು ಕರೆನ್ಸಿ ನೋಟುಗಳಲ್ಲಿ ಹಾಕುವ ನಿಟ್ಟಿನಲ್ಲಿ ಪ್ರಕ್ರಿಯೆ ನಡೆದಿದೆ.

suddiyaana