15 ವರ್ಷಗಳ ಬಳಿಕ ಕಾಂಗರೂ ಪಡೆಗೆ ಇದೆಂಥಾ ಅವಮಾನ? – ಮೊದಲ ಸುತ್ತಿನಲ್ಲೇ ಹೊರಬಿದ್ದ ಆಸ್ಟ್ರೇಲಿಯಾ

ಟಿ20 ವಿಶ್ವಕಪ್ ನಲ್ಲಿ ಬಲಿಷ್ಠ ತಂಡವೆಂದೇ ಗುರುತಿಸಿಕೊಂಡಿದ್ದ ಆಸ್ಟ್ರೇಲಿಯಾ ಟೀಮ್ ಮೊದಲ ಸುತ್ತಿನಲ್ಲೇ ಹೊರಬಿದ್ದಿದೆ. ಕಾಂಗರೂ ಪಡೆಗೆ ಮಳೆರಾಯನೇ ವಿಲನ್ ಆಗಿದ್ದು ಮಾತ್ರ ವಿಪರ್ಯಾಸ.
ಇದನ್ನೂ ಓದಿ:ಕೊನೆಯ ಪಂದ್ಯ ಗೆದ್ದು ಟಿ20 ವಿಶ್ವಕಪ್ ಟೂರ್ನಿ ಮುಗಿಸಿದ ನೇಪಾಳ
ಆಸ್ಟ್ರೇಲಿಯಾ ತಂಡ ಆಡಿದ್ದು ಕೇವಲ ಮೂರು ಪಂದ್ಯಗಳು. ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಜಯ ಸಾಧಿಸಿದೆ. ನಂತರ ಕಾಂಗರೂಗಳಿಗೆ ಅದೃಷ್ಟ ಕೈ ಹಿಡಿಯಲೇ ಇಲ್ಲ. ಝಿಂಬಾಬ್ವೆ ಹಾಗೂ ಶ್ರೀಲಂಕಾ ವಿರುದ್ಧ ಸೋಲನುಭವಿಸಿದೆ. ಈ ಸೋಲುಗಳೊಂದಿಗೆ ಆಸೀಸ್ ಪಡೆಯ ಈ ಬಾರಿಯ ವಿಶ್ವಕಪ್ ಅಭಿಯಾನ ಕೂಡ ಮುಗಿದ ಅಧ್ಯಾಯವಾಗಿದೆ. ಐರ್ಲೆಂಡ್ ಮತ್ತು ಝಿಂಬಾಬ್ವೆ ನಡುವಿನ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಇದರಿಂದ ಉಭಯ ತಂಡಗಳಿಗೂ ಒಂದೊಂದು ಅಂಕ ಸಿಕ್ಕಿದೆ. ಹೀಗಾಗಿ ಝಿಂಬಾಬ್ವೆ ತಂಡವು ಒಂದು ಅಂಕ ಪಡೆಯುವುದರೊಂದಿಗೆ ಒಟ್ಟು 5 ಪಾಯಿಂಟ್ಸ್ನೊಂದಿಗೆ ಸೂಪರ್-8 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಜಿಂಬಾಬ್ವೆ ಸೋಲಿಗೆ ಕಾಯುತ್ತಿದ್ದ ಕಾಂಗರೂ ಪಡೆಗೆ ಸಿಕ್ಕಾಪಟ್ಟೆ ನಿರಾಶೆಯಾಗಿದೆ. ಇನ್ನು ಆಸ್ಟ್ರೇಲಿಯಾ ತಂಡ ತನ್ನ ಕೊನೆಯ ಪಂದ್ಯದಲ್ಲಿ ಒಮಾನ್ ವಿರುದ್ಧ ಗೆದ್ದರೂ ಗರಿಷ್ಠ 4 ಅಂಕಗಳನ್ನು ಮಾತ್ರ ಪಡೆಯಲು ಸಾಧ್ಯ. 6 ಅಂಕಗಳನ್ನು ಪಡೆದಿರುವ ಶ್ರೀಲಂಕಾ ಮತ್ತು 5 ಅಂಕಗಳಿಸಿರುವ ಝಿಂಬಾಬ್ವೆ ಗ್ರೂಪ್-ಸಿ ಯಿಂದ ಸೂಪರ್-8 ಹಂತಕ್ಕೇರಿದೆ.
ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ಲೀಗ್ ಹಂತದಲ್ಲಿ ಹೊರಬಿದ್ದಿರುವುದು ಇದು ಎರಡನೇ ಬಾರಿ. ನಾಕೌಟ್ ಹಂತ ತಲುಪಲು ವಿಫಲವಾಗಿರುವುದು ಇದು ಮೂರನೇ ಬಾರಿ. 2009 ರಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದಿತ್ತು, ನಂತರ 2022ರಲ್ಲಿ ನಾಕೌಟ್ ಪ್ರವೇಶಿಸಲು ವಿಫಲವಾಗಿತ್ತು. ಇದೀಗ 17 ವರ್ಷಗಳ ನಂತರ ಮತ್ತೊಮ್ಮೆ ಲೀಗ್ ಹಂತದಲ್ಲೇ ಹೊರಬಿದ್ದಿದೆ.

ನೋಡಿರಿ

