ಈಡೇರಲಿಲ್ಲ ಭಾರತದ ದಶಕದ ಕನಸು – ಚಾಂಪಿಯನ್ ಆದ ಆಸ್ಟ್ರೇಲಿಯಾ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಟ್ರೋಫಿ ಕಾಂಗರೂಗಳ ಪಾಲಾಗಿದೆ. ಕಳೆದ ಹತ್ತು ವರ್ಷಗಳಿಂದ ಐಸಿಸಿ ಟ್ರೋಫಿಯ ಬರ ಎದುರಿಸುತ್ತಿರುವ ಭಾರತಕ್ಕೆ ಮತ್ತೊಂದು ಅವಕಾಶವೂ ಕೈತಪ್ಪಿ ಹೋಗಿದೆ. 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ, ಭಾರತ ಇದುವರೆಗೂ ಕಪ್ ಗೆದ್ದಿಲ್ಲ. ಈ ಬಾರಿಯಾದರೂ ಕಪ್ ನಮ್ಮದೇ ಅಂತಾ ನಿರೀಕ್ಷೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ.
ಇದನ್ನೂ ಓದಿ: ಮೂರನೇ ದಿನದಾಟದಲ್ಲಿ ಜಡೇಜಾ ಜಾದು – ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ರವೀಂದ್ರ ಜಡೇಜಾ ದಾಖಲೆ
ಟೀಮ್ ಇಂಡಿಯಾದ ಸೋಲಿಗೆ ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯವೂ ಕಾರಣವಾಗಿದೆ. ಅದರಲ್ಲೂ ಬೇಡದ ಶಾಟ್ ಆಡಿ ಅಗ್ಗವಾಗಿ ವಿಕೆಟ್ ಒಪ್ಪಿಸಿದ ವಿರಾಟ್ ಕೊಹ್ಲಿ ಮೇಲೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರು ಅಸಮಾಧಾನ ಹೊರಹಾಕುತ್ತಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 14 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿದ್ದ ಕೊಹ್ಲಿ, ಎರಡನೇ ಇನ್ನಿಂಗ್ಸ್‌ನಲ್ಲಿ ಕೊಂಚ ಹೋರಾಟದ ಇನ್ನಿಂಗ್ಸ್ ಆಡುವ ಮೂಲಕ 49 ರನ್ ಬಾರಿಸಿದರು. ಆದರೆ ಕೊಹ್ಲಿ ವಿಕೆಟ್ ನೀಡಿದ ರೀತಿಯನ್ನು ಕಂಡು ಟೀಂ ಇಂಡಿಯಾದ ಮಾಜಿ ಆಟಗಾರರು ಕೊಹ್ಲಿ ವಿರುದ್ಧ ಹರಿಹಾಯ್ದಿದ್ದಾರೆ. ಜಡೇಜಾ ಹಾಗೂ ರಹಾನೆ ಶಾಟ್ ಆಯ್ಕೆಯಲ್ಲೂ ತಪ್ಪಾಗಿತ್ತು ಅಂತಾ ಮಾಜಿ ಆಟಗಾರರು ಅಸಮಾಧಾನ ಹೊರ ಹಾಕಿದ್ದಾರೆ.
ಟೀಂ ಇಂಡಿಯಾದ ಸೋಲಿನ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ರೋಜರ್ ಭಿನ್ನಿ, ಸೋಲಿಗೆ ವಿಚಿತ್ರ ಕಾರಣ ನೀಡಿದ್ದಾರೆ. ಮೊದಲ ದಿನವೇ ಪಂದ್ಯ ಭಾರತದ ಕೈಯಿಂದ ಜಾರಿತು. ಸ್ಮಿತ್ ಮತ್ತು ಹೆಡ್ ದ್ವಿಶತಕದ ಜೊತೆಯಾಟ ಆಡಿಲ್ಲದಿದ್ದರೆ, ಪಂದ್ಯದಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿರುತ್ತಿದ್ದವು ಎಂದು ಬಿನ್ನಿ ಹೇಳಿದ್ದಾರೆ. ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಬಗ್ಗೆ ಗಮನಹರಿಸುವಂತೆ ಟೀಂ ಇಂಡಿಯಾವನ್ನು ಕೇಳಿಕೊಂಡಿದ್ದಾರೆ. ಭವಿಷ್ಯದಲ್ಲಿ ವಿಶ್ವಕಪ್ನಂತಹ ದೊಡ್ಡ ಪಂದ್ಯಾವಳಿ ಇದೆ. ಆದ್ದರಿಂದ ನಾವು ಉತ್ಸಾಹ ಕಳೆದುಕೊಳ್ಳಬಾರದು. ತವರಿನಲ್ಲಿ ವಿಶ್ವಕಪ್ ಆಡುತ್ತಿರುವುದರಿಂದ ನಮ್ಮ ತಂಡ ಉತ್ತಮ ಪ್ರದರ್ಶನ ನೀಡಬೇಕು ಎಂದು ಬಿನ್ನಿ ಹೇಳಿದರು.