ಆಸೀಸ್ ನಾಯಕನ ತಾಯಿ ವಿಧಿವಶ – ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ ಕ್ರಿಕೆಟ್ ತಂಡ
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗಾಗಿ ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ತಂಡದ ನಾಯಕ ತಾಯಿಯ ಅನಾರೋಗ್ಯ ಕಾರಣದಿಂದಾಗಿ ತವರಿಗೆ ವಾಪಸ್ ಆಗಿದ್ದರು. ತಾಯಿಯ ಜೊತೆಯಲ್ಲಿ ಇರುವ ಕಾರಣ ಆಸ್ಟ್ರೇಲಿಯಾಕ್ಕೆ ಮರಳಿದ ಪ್ಯಾಟ್ ಕಮಿನ್ಸ್, ಈಗ ತಮ್ಮ ತಾಯಿಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮರಿಯಾ ವಿಧಿವಶರಾಗಿದ್ದಾರೆ. ನಾಯಕನ ತಾಯಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಅಹಮದಾಬಾದ್‌ನಲ್ಲಿ ಭಾರತ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶುಕ್ರವಾರ, ಆಸ್ಟ್ರೇಲಿಯಾ ತಂಡ ಕಪ್ಪು ಬ್ಯಾಂಡ್ ಧರಿಸಿ ಮೈದಾನಕ್ಕಿಳಿದಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಕಮಿನ್ಸ್ ಅವರ ತಾಯಿಯ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ – ಆಸ್ಟ್ರೇಲಿಯಾ ತಂಡ ತೊರೆದು ತವರು ಸೇರಿದ್ದೇಕೆ ಕ್ಯಾಪ್ಟನ್?
2005 ರಲ್ಲಿ ಕಮಿನ್ಸ್ ಅವರ ತಾಯಿಗೆ ಸ್ತನ ಕ್ಯಾನ್ಸರ್ (breast cancer ) ಇರುವುದು ಪತ್ತೆಯಾಗಿತ್ತು. ಅಂದಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಕಳೆದ ಕೆಲವು ವಾರಗಳಿಂದ ಆರೋಗ್ಯ ತೀರ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಭಾರತದ ಪ್ರವಾಸವನ್ನು ಅರ್ಧಕ್ಕೆ ಮೊಟಕು ಗೊಳಿಸಿ ತವರಿಗೆ ಮರಳಿದ್ದರು. ಇಂತಹ ಕಠಿಣ ಸನ್ನಿವೇಶದಲ್ಲಿ ಕುಟುಂಬದ ಜೊತೆಗಿದ್ದು ಪ್ರೀತಿ ಹಾಗೂ ಬೆಂಬಲ ನೀಡುತ್ತಿರುವ ಆಸೀಸ್ ನಾಯಕನನ್ನು ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರರು ಮೆಚ್ಟಿಕೊಂಡಿದ್ದಾರೆ.
ಅಲ್ಲದೇ, ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಕಮಿನ್ಸ್ ಅವರ ತಾಯಿಯ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ಮರಿಯಾ ಕಮಿನ್ಸ್ ಅವರ ನಿಧನದಿಂದ ನಾವೆಲ್ಲರೂ ದುಃಖಿತರಾಗಿದ್ದೇವೆ. ಆಸ್ಟ್ರೇಲಿಯನ್ ಕ್ರಿಕೆಟ್ ಪರವಾಗಿ, ನಾವು ಕಮಿನ್ಸ್ ಮತ್ತು ಅವರ ಕುಟುಂಬಕ್ಕೆ ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಆಸ್ಟ್ರೇಲಿಯಾ ತಂಡ ಕಪ್ಪು ಪಟ್ಟಿ ಕಟ್ಟಿಕೊಂಡು ಮೈದಾನಕ್ಕೆ ಇಳಿಯಲಿದೆ ಎಂದು ಬರೆದುಕೊಂಡಿದೆ. ಆಸೀಸ್ ನಾಯಕನ ತಾಯಿಯ ನಿಧನಕ್ಕೆ ಬಿಸಿಸಿಐ ಕೂಡ ಸಂತಾಪ ಸೂಚಿಸಿದ್ದು, ಪ್ಯಾಟ್ ಕಮಿನ್ಸ್ ಅವರ ತಾಯಿಯ ನಿಧನದಿಂದ ನಾವು ದುಃಖಿತರಾಗಿದ್ದೇವೆ. ಕಮಿನ್ಸ್ ಕುಟುಂಬಕ್ಕೆ ದುಃಖವನ್ನು ಬರಿಸುವಂತಹ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಬರೆದುಕೊಂಡಿದೆ.