ಜಗತ್ತು ಗೆದ್ದ ಪ್ರಚಂಡ ಕುಳ್ಳ – ಟೆಂಬಾ ಕ್ಯಾಪ್ಟನ್ಸಿಗೆ ಬಹುಪರಾಕ್
WTC ಚೋಕರ್ ಪಟ್ಟ ಕಳಚಿದ್ದೇಗೆ?

ಇಂಗ್ಲೆಂಡ್ನ ಲಾರ್ಡ್ಸ್ ಮೈದಾನದಲ್ಲಿ ನಡೆದ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಪಡೆ ಇತಿಹಾಸ ಸೃಷ್ಟಿಸಿದೆ. ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನ ಬಗ್ಗು ಬಡಿದು ಐಸಿಸಿ ಟ್ರೋಫಿಗೆ ಮುತ್ತಿಕ್ಕಿದೆ. ಪಂದ್ಯಕ್ಕೂ ಮುನ್ನ ಟಾಸ್ ಗೆದ್ದಿದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ರು. ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ನಲ್ಲಿ 212 ರನ್ಗಳಿಗೆ ಆಲೌಟ್ ಆಗಿತ್ತು. ಇದಾದ ಮೇಲೆ ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ ಕೇವಲ 138 ರನ್ಗೆ ಆಲೌಟ್ ಆಗಿ ನಿರಾಸೆ ಅನುಭವಿಸಿತ್ತು. ಇನ್ನು ಎರಡನೇ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ಪೇಸ್ ಬೌಲರ್ ಮಿಚೆಲ್ ಸ್ಟಾರ್ಕ್ ಹಾಫ್ಸೆಂಚುರಿಯಿಂದಾಗಿ 207 ರನ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತ್ತು. 74 ರನ್‌ಗಳ ಹಿನ್ನಡೆ ಪ್ಲಸ್ 207 ರನ್ ಸೇರಿ ಸೌತ್ ಆಫ್ರಿಕಾ ಗೆಲುವಿಗೆ ಒಟ್ಟಾರೆಯಾಗಿ 282 ರನ್ಸ್ ಬೇಕಿತ್ತು. ಫಸ್ಟ್ ಇನ್ನಿಂಗ್ಸ್ ನೋಡ್ದಾಗ ಇಷ್ಟು ಸ್ಕೋರ್ ಮಾಡುತ್ತೆ ಅಂತಾ ಸೌತ್ ಆಫ್ರಿಕಾ ಮೇಲೆ ಯಾರಿಗೂ ಹೋಪ್ಸ್ ಇರ್ಲಿಲ್ಲ. ಅದೂ ಕೂಡ ಸಾರ್ವಕಾಲಿಕ ಶ್ರೇಷ್ಠ ಬೌಲಿಂಗ್ ಪಡೆಯನ್ನ ಹೊಂದಿರೋ ಆಸಿಸ್ ಬೌಲಿಂಗ್ ಎದುರು. ಆದ್ರೆ ಅದನ್ನೆಲ್ಲಾ ಸುಳ್ಳು ಮಾಡಿ ಆಸಿಸ್ ಬೌಲರ್ಗಳ ಸೊಕ್ಕು ಮುರಿದಿದ್ದು ಏಡನ್ ಮಾರ್ಕ್ರಂ ಹಾಗೇ ಟೆಂಬಾ ಬವುಮಾ ಜೋಡಿ.
ಇದನ್ನೂ ಓದಿ : IND Vs PAK ದಾಖಲೆ ಮುರಿದ RCB – IPL ಫೈನಲ್ ಮ್ಯಾಚ್ ನೋಡಿದವರೆಷ್ಟು?
ಆಸ್ಟ್ರೇಲಿಯಾ ನೀಡಿದ್ದ 282 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಪರ ಆರಂಭಿಕ ಆಟಗಾರ ಐಡೆನ್ ಮಾರ್ಕ್ರಾಮ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದ್ರು. ಮೊದಲ ಇನ್ನಿಂಗ್ಸ್ನಲ್ಲಿ ಮೊದಲ ಓವರ್ನಲ್ಲೇ ಸೊನ್ನೆಗೆ ಔಟಾಗಿದ್ದ ಮಾರ್ಕ್ರಾಮ್, ಎರಡನೇ ಇನ್ನಿಂಗ್ಸ್ನಲ್ಲಿ ಜವಾಬ್ದಾರಿಯುವ ಬ್ಯಾಟಿಂಗ್ ಮಾಡಿ ಶತಕ ಬಾರಿಸಿದ್ರು. ತಮ್ಮ ವೃತ್ತಿಜೀವನದ 8 ನೇ ಶತಕ ಬಾರಿಸಿದ ಮಾರ್ಕ್ರಾಮ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಇತಿಹಾಸದಲ್ಲಿ ಶತಕ ಗಳಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡ್ರು. 159 ಎಸೆತಗಳನ್ನು ಎದುರಿಸಿದ ಐಡೆನ್ ಮಾರ್ಕ್ರಾಮ್ 11 ಬೌಂಡರಿಗಳಿಂದ 102 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದು. ಹಾಗೇ ನಾಲ್ಕನೇ ದಿನದಾಟದಲ್ಲಿ ಮತ್ತೆ ಬ್ಯಾಟಿಂಗ್ ಕಂಟಿನ್ಯೂ ಮಾಡಿದ್ರು.
ಇನ್ನು ಕ್ಯಾಪ್ಟನ್ ಟೆಂಬಾ ಬವುಮಾ ಬಗ್ಗೆ ಹೇಳಲೇಬೇಕು. ಮೊದಲ ಇನಿಂಗ್ಸ್ನಲ್ಲಿ 36 ರನ್ ಬಾರಿಸಿದ್ದ ಟೆಂಬಾ ಬವುಮಾ, ದ್ವಿತೀಯ ಇನಿಂಗ್ಸ್ನಲ್ಲಿ ಅಜೇಯ 65 ರನ್ಗಳಿಸಿ ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ರು. ಆದ್ರೆ ನಾಲ್ಕನೇ ದಿನದಾಟದಲ್ಲಿ ಒಂದು ರನ್ ಗಳಿಸಿ ಅಂದ್ರೆ ಟೋಟಲ್ಲಾಗಿ 66 ರನ್ ಗಳಿಸಿ ಔಟಾದ್ರು. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 36 ರನ್ ಬಾರಿಸಿದ್ದ ಟೆಂಬಾ ಬವುಮಾ, ದ್ವಿತೀಯ ಇನಿಂಗ್ಸ್ನಲ್ಲಿ 65 ರನ್ ಗಳಿಸಿದ್ರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಸತತವಾಗಿ 30+ ಸ್ಕೋರ್‌ಗಳನ್ನು ಗಳಿಸಿದ ವಿಶ್ವದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಸಾಧನೆ ಮಾಡಿದ ಸೌತ್ ಆಫ್ರಿಕಾದ ಮೊದಲ ಬ್ಯಾಟರ್ ಆಗಿದ್ದಾರೆ. ಟೆಂಬಾ ಬವುಮಾ ಸತತ 9 ಇನಿಂಗ್ಸ್ಗಳಲ್ಲಿ 30+ ಸ್ಕೋರ್ ಗಳಿಸುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಬ್ಯಾಟರ್ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.
ಮೂರನೇ ದಿನದಾಟದಲ್ಲಿ ಬವುಮಾ ಬ್ಯಾಟಿಂಗ್ ಬಂದ ಆರಂಭದಲ್ಲೇ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ರು. 6 ರನ್ ಗಳಿಸಿದ್ದಾಗಲೇ ಹಾಮ್ಸ್ಟ್ರಿಂಗ್ ಇಂಜುರಿಗೆ ಒಳಗಾಗಿ ಓಡಲೂ ಕೂಡ ಕಷ್ಟವಾಗ್ತಿತ್ತು. ಫಿಸಿಯೋಗಳು ಬಂದು ದೀರ್ಘಕಾಲ ಚಿಕಿತ್ಸೆ ನೀಡಿದರು. ಗಾಯದ ತೀವ್ರತೆ ಕಂಡಂತಹ ಅಭಿಮಾನಿಗಳು, ಹಾಗೇ ಇತರೆ ಆಟಗಾರರು ಬವುಮಾ ರಿಟೈರ್ಡ್ ಹರ್ಟ್ ಆಗಬಹುದು ಅಂತಾನೇ ಬಾವಿಸಿದ್ರು. ಆದರೆ ಇತಿಹಾಸ ಸೃಷ್ಟಿಸೋಕೆ ರೆಡಿಯಾಗಿದ್ದ ಬವುಮಾ ಎದೆಗುಂದಲಿಲ್ಲ. ಕುಂಟುತ್ತಲೇ ಕ್ರೀಸ್ನಲ್ಲಿ ಓಡಿದ್ರು. 3 ರನ್ ಬರೋ ಕಡೆ 2 ರನ್ ತಗೊಂಡ್ರು. 2 ರನ್ ಬರೋ ಕಡೆ ಒಂದೇ ರನ್ ಓಡಿದ್ರು. ಯಾಕಂದ್ರೆ ಈ ಪಂದ್ಯದ ರಿಸಲ್ಟ್ ಸೌತ್ ಆಫ್ರಿಕಾಗೆ ಅದೆಷ್ಟು ಮುಖ್ಯ ಅನ್ನೋದು ಅವ್ರಿಗೆ ಗೊತ್ತಿತ್ತು. ಅದೇ ಗೋಲ್ಡನ್ ಮೂಮೆಂಟ್ಗಾಗಿಯೇ ಕೊನೇವರೆಗೂ ಹೋರಾಡಿ ಮಾರ್ಕ್ರಮ್ ಜೊತೆ ಅಜೇಯ 143 ರನ್‌ಗಳ ಜೊತೆಯಾಟವಾಡಿದ್ರು. ಈ ಜೋಡಿಯ ಬಲವಾದ ಜೊತೆಯಾಟದ ಫಲವಾಗಿ ದಕ್ಷಿಣ ಆಫ್ರಿಕಾ ತಂಡವು 3ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತ್ತು. ಆದ್ರೆ ನಾಲ್ಕನೇ ದಿನ ಬವುಮಾಗೆ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲೋಕೆ ಸಾಧ್ಯವಾಗ್ಲಿಲ್ಲ.
ಬವುಮಾ ಬರೀ ಬ್ಯಾಟಿಂಗ್ ಅಷ್ಟೇ ಅಲ್ಲ. ಬಲಿಷ್ಠ ಬ್ಯಾಟಿಂಗ್ ಯುನಿಟ್ ಹೊಂದಿರೋ ಆಸ್ಟ್ರೇಲಿಯಾ ತಂಡವನ್ನ ಕಡಿಮೆ ಸ್ಕೋರ್ಗೆ ಕಟ್ಟಿಹಾಕುವಲ್ಲಿ ಅವ್ರ ಬುದ್ಧಿವಂತಿಕೆ ಮೆಚ್ಚಲೇಬೇಕು. ಹೇಳಿ ಕೇಳಿ ಆಸ್ಟ್ರೇಲಿಯಾ ಬ್ಯಾಟಿಂಗ್ ಯುನಿಟ್ಗೆ ಹೋಲಿಸಿದ್ರೆ ಸೌತ್ ಆಫ್ರಿಕಾ ಆಟಗಾರರ ಅನುಭವ ಕಡಿಮೆ. ಆದ್ರೆ ಅವ್ರನ್ನ ಕಡಿಮೆ ರನ್ಸ್ಗೆ ಔಟ್ ಮಾಡುವಲ್ಲಿ ಬವುಮಾ ಕ್ಲೆವರ್ ಆಗಿ ಯೂಸ್ ಮಾಡ್ಕೊಂದ್ರು. ಹಾಗೇ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಟಾಪ್ ಆರ್ಡರ್ ಬ್ಯಾಟರ್ಸ್ ಕೈಕೊಟ್ರೂ ಆಸಿಸ್ ಪರ ಸ್ಟಾರ್ಕ್ ಮತ್ತು ಹೇಜಲ್ವುಡ್ ಕ್ರೀಸ್ ಕಚ್ಚಿ ನಿಂತಿದ್ರು. ಮಿಚೆಲ್ ಸ್ಟಾರ್ಕ್ ಅಜೇಯ 58 ರನ್ ಗಳಿಸಿದರು. ಜೋಶ್ ಹ್ಯಾಜಲ್‌ವುಡ್ 17 ರನ್ ಗಳಿಸಿದರು. 10ನೇ ವಿಕೆಟ್‌ಗೆ ಇವರಿಬ್ಬರ ನಡುವೆ 59 ರನ್‌ಗಳ ಜೊತೆಯಾಟ ನಡೆಸಿದರು. ಐಸಿಸಿ ಈವೆಂಟ್‌ನ ಫೈನಲ್ ಪಂದ್ಯದಲ್ಲಿ ಇದು 10ನೇ ವಿಕೆಟ್‌ಗೆ ಅತಿ ದೊಡ್ಡ ಜೊತೆಯಾಟ ಇದು. ಈ ಜೋಡಿಯ ವಿಕೆಟ್ ಬೀಳಿಸೋದೇ ಸೌತ್ ಆಫ್ರಿಕಾ ಪಡೆಗೆ ದೊಡ್ಡ ಸವಾಲಾಗಿತ್ತು,. ಈ ವೇಳೆ ಕ್ಲೆವರ್ ಪಾನ್ ಮೂವ್ ಮಾಡಿದ ಬವುಮಾ ಏಡನ್ ಮಾರ್ಕ್ರಂ ಅವ್ರ ಕೈಗೆ ಬಾಲ್ ಕೊಟ್ಟಿದ್ರು. ಅವ್ರ ನಂಬಿಕೆ ಹುಸಿಯಾಗಲಿಲ್ಲ. ಮಾರ್ಕ್ರಂ ಬೌಲಿಂಗ್ನಲ್ಲಿ ಹೇಜಲ್ವುಡ್ ವಿಕೆಟ್ ಒಪ್ಪಿಸಿದ್ರು. ಅಲ್ಲಿಗೆ ಇಬ್ಬರ ಪಾಟ್ನರ್ಶಿಪ್ ಬ್ರೇಕ್ ಆಯ್ತು.
ದಕ್ಷಿಣ ಆಫ್ರಿಕಾ ತಂಡದಲ್ಲಿ ದಿಗ್ಗಜ ಆಟಗಾರರೇ ಆಡಿದ್ರೂ ಐಸಿಸಿ ಕಪ್ ಅನ್ನೋದು ಮರೀಚಿಕೆಯಾಗಿಯೇ ಇತ್ತು. ಕಳೆದ 27 ವರ್ಷಗಳಿಂದ ಒಂದೇ ಒಂದು ಟ್ರೋಫಿ ಗೆಲ್ಲೋಕೂ ಅವ್ರಿಂದ ಸಾಧ್ಯವಾಗಿರಲಿಲ್ಲ. ಅದೆಲ್ಲಕ್ಕಿಂತ ದುರಂತ ಅಂದ್ರೆ ಸೌತ್ ಆಫ್ರಿಕಾ ತಂಡ ನಾಕೌಟ್ ಮತ್ತು ಫೈನಲ್ ಪಂದ್ಯಗಳಲ್ಲೇ ಸಾಕಷ್ಟು ಸಲ ಎಡವಿ ಪ್ರಶಸ್ತಿ ವಂಚಿತವಾಗುತ್ತಿತ್ತು. ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ 5 ಬಾರಿ ಸೆಮಿಫೈನಲ್‌ನಲ್ಲೇ ಸೋತಿತ್ತು. 1992, 1999, 2007, 2015, 2023 ರಲ್ಲಿ ಸೋಲು ಕಂಡಿತ್ತು. 2024ರ ಟಿ-20ವಿಶ್ವಕಪ್ ಫೈನಲ್, 2025ರ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ನಲ್ಲಿ ಎಡವಿತ್ತು. ವಿಶ್ವಕಪ್‌ನ ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ತೋರಿ ಪದೇ ಪದೆ ನಾಕೌಟ್ ಪಂದ್ಯಗಳಲ್ಲಿ ಎಡವುತ್ತಿರುವ ಕಾರಣ ಆಫ್ರಿಕಾಗೆ ಚೋಕರ್ಸ್ ಪಟ್ಟ ಅಂಟಿಕೊಂಡಿದೆ. ಆದರೆ ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ದಕ್ಷಿಣ ಆಫ್ರಿಕಾ ತಂಡ ಚಾಂಪಿಯನ್ ಪಟ್ಟಕ್ಕೇರಿದೆ. ಅದೂ ಕೂಡ ಹಾಲಿ ಚಾಂಪಿಯನ್ ಆಗಿದ್ದ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನ ಬಗ್ಗು ಬಡಿಯೋ ಮೂಲಕ.