ರೋಹಿತ್‌, ಕೊಹ್ಲಿ ತಂಡದಲ್ಲಿ ಬೇಕಾ? – ಆಸಿಸ್‌ ಅಬ್ಬರಿಸಿದಲ್ಲ.. ಭಾರತ ಎಡವಿದ್ದು!

ರೋಹಿತ್‌, ಕೊಹ್ಲಿ ತಂಡದಲ್ಲಿ ಬೇಕಾ? – ಆಸಿಸ್‌ ಅಬ್ಬರಿಸಿದಲ್ಲ.. ಭಾರತ ಎಡವಿದ್ದು!

ಅದೇನೋ ಹೇಳ್ತಾರಲ್ಲ. ಆಡ್ಕೊಳ್ಳೋರ ಮುಂದೆ ಹೇಳ್ಕೊಂಡು ಅಳದಿರು ಅಂತಾ. ಹಂಗಾಯ್ತು ಟೀಂ ಇಂಡಿಯಾ ಪರಿಸ್ಥಿತಿ. ಮೊದ್ಲೇ ಭಾರತದ ಆಟಗಾರರನ್ನ ಕಂಡ್ರೆ ಕಂಡಕಂಡಲ್ಲಿ ಗೇಲಿ ಮಾಡ್ತಿದ್ರು ಆಸ್ಟ್ರೇಲಿಯಾ ಅಭಿಮಾನಿಗಳು. ಈಗ ಅವ್ರ ಮುಂದೆಯೇ ನಾಲ್ಕನೇ ಪಂದ್ಯವನ್ನ ಸೋತು ಕೂತಿದ್ದಾರೆ ಟೀಂ ಇಂಡಿಯಾ ಪ್ಲೇಯರ್ಸ್. ನಾಲ್ಕನೇ ಪಂದ್ಯದ ಸೋಲಿಗೆ ಮೇನ್ ರೀಸನ್ಸ್ ಏನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬಿಗ್‌ ಬಾಸ್‌ ಮನೆಯಿಂದ ಐಶ್ವರ್ಯ ಔಟ್‌ – ಸೋಲಿಗೆ ಇದೇ ಕಾರಣವಾಯ್ತಾ?

ಟೀಂ ಇಂಡಿಯಾದಲ್ಲಿ ಇರೋರೆಲ್ಲಾ ಹೇಳ್ಕೊಳ್ಳೋಕೆ ಜಗತ್ತಿನಲ್ಲೇ ಸ್ಟಾರ್ ಬ್ಯಾಟರ್ಸ್. ಬಟ್ ಆಸ್ಟ್ರೇಲಿಯಾ ಸರಣಿಯಲ್ಲಿ ಆಡ್ತಿರೋದನ್ನ ನೋಡಿದ್ರೆ ಗಲ್ಲಿ ಕ್ರಿಕೆಟ್​ಗಿಂತ ಕಡೆಯಾಗಿ ಆಡಿದ್ದಾರೆ. ಸೀನಿಯರ್​​ಗಳಲ್ಲಿ ಸೀರಿಯಸ್​ನೆಸ್ ಇರ್ಲಿಲ್ಲ.. ಜೂನಿಯರ್ಸ್​ಗೆ ಎಕ್ಸ್​ಪೀರಿಯನ್ಸ್ ಸಾಕಾಗ್ಲಿಲ್ಲ. ಮೆಲ್ಬೋರ್ನ್ ಟೆಸ್ಟ್ ಮ್ಯಾಚ್ ಭಾರತಕ್ಕೆ ಎಷ್ಟು ಇಂಪಾರ್ಟೆಂಟ್ ಅನ್ನೋದು ಗೊತ್ತಿದ್ರೂ ಯಾರೊಬ್ರೂ ರೆಸ್ಪಾನ್ಸಿಬಿಲಿಟಿ ತಗೊಳ್ಳೋಕೆ ರೆಡಿನೇ ಇರ್ಲಿಲ್ಲ. ಕೊನೆಗೇ ಪಂದ್ಯವನ್ನೇ ಸೋತು ಕೂತಿದ್ದಾರೆ. ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ರೇಸ್​ನಲ್ಲಿ ಇದ್ದೀವಿ ಅನ್ನೋದನ್ನೇ ಮರೆತು ಬೇಕಾಬಿಟ್ಟಿ ಪರ್ಫಾಮೆನ್ಸ್ ನೀಡಿ ಕಾಂಗರೂಗಳ ಮುಂದೆ ಮುಖಭಂಗ ಅನುಭವಿಸಿದ್ದಾರೆ. ಮೊದಲೇ ಟೀಸ್ ಮಾಡ್ತಿದ್ದ ಆಸಿಸ್ ಫ್ಯಾನ್ಸ್ ಗೆ ಬಹುಶಃ ಈಗ ಹಾಲು ಕುಡಿದಷ್ಟೇ ಸಂತೋಷ ಆಗಿರಬಹುದು. ಭಾರತೀಯ ಆಟಗಾರರನ್ನ ಆಡಿಕೊಳ್ಳೋಕೆ ಮತ್ತೊಂದು ಚಾನ್ಸ್ ಸಿಕ್ತು.

184 ರನ್ ಗಳ ಹೀನಾಯ ಸೋಲು.. ಡಬ್ಲ್ಯುಟಿಸಿ ಫೈನಲ್ ಕನಸು ಭಗ್ನ!

ಬಾರ್ಡರ್​ ಗವಾಸ್ಕರ್ ಟ್ರೋಫಿಯ 4ನೇ ಪಂದ್ಯದಲ್ಲಿ ಭಾರತ ತಂಡ 184 ರನ್​ಗಳ ಹೀನಾಯ ಸೋಲು ಕಂಡಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ನಿರ್ಧರಿಸುವ ಪಂದ್ಯದಲ್ಲಿ ಟೀಮ್ ಇಂಡಿಯಾ ಕಳಪೆ ಬ್ಯಾಟಿಂಗ್ ನಿಂದಲೇ ಸೋಲೊಪ್ಪಿಕೊಂಡಿದೆ. 4ನೇ ಟೆಸ್ಟ್​​ನ ಮೊದಲ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ 474 ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಭಾರತ 369 ರನ್​ಗಳಿಸಿತ್ತು. ಇದರೊಂದಿಗೆ ಆಸ್ಟ್ರೇಲಿಯಾ 105 ರನ್​ಗಳ ಮುನ್ನಡೆ ಕಾಯ್ದುಕೊಂಡಿತ್ತು. ಎರಡನೇ ಇನ್ನಿಂಗ್ಸ್​ನಲ್ಲಿ 234 ರನ್​ಗಳಿಸಿದ್ದ ಆಸ್ಟ್ರೇಲಿಯಾ ಭಾರತದ ಗೆಲುವಿಗೆ ಒಟ್ಟು 339 ರನ್​​ಗಳ ಗುರಿಯನ್ನು ನೀಡಿತ್ತು. ಭಾರತ ಎರಡನೇ ಇನ್ನಿಂಗ್ಸ್​ನಲ್ಲಿ 155 ರನ್​​ಗಳಿಸಿ ಸೋಲಿಗೆ ಶರಣಾಗಿದೆ. ಈ ಸೋಲಿನೊಂದಿಗೆ ಭಾರತ ಸರಣಿಯಲ್ಲಿ 1-2ರಲ್ಲಿ ಹಿನ್ನಡೆ ಅನುಭವಿಸಿದೆ. ಅಲ್ಲದೆ ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ ನೇರವಾಗಿ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿದೆ.

ಜೈಸ್ವಾಲ್ ಮತ್ತು ಪಂತ್ ಬಿಟ್ರೆ ಉಳಿದವ್ರೆಲ್ಲಾ ಒಂದಂಕಿಗೇ ಔಟ್!

ಆಸ್ಟ್ರೇಲಿಯಾ ಟೀಮ್​ನಲ್ಲಿ ಬ್ಯಾಟರ್ಸ್ ಬಿಡಿ. ಬೌಲರ್ಸ್ ಗೆ ಇರೋ ಜವಾಬ್ದಾರಿ ಕೂಡ ನಮ್ಮ ಟಾಪ್ ಆರ್ಡರ್ ಬ್ಯಾಟರ್ಸ್​ಗೂ ಇಲ್ಲ. ಲಾಸ್ಟ್ ವಿಕೆಟ್​​ನಲ್ಲೂ ಗಂಟೆಗಟ್ಟಲೆ ಕ್ರೀಸ್​ನಲ್ಲಿ ನಿಂತು ಭಾರತೀಯ ಬೌಲರ್ಸ್​ಗಳನ್ನ ಕಾಡ್ತಾರೆ ಅಂದ್ರೆ ಅವ್ರ ಡೆಡಿಕೇಷನ್​ನ ಮೆಚ್ಚಲೇಬೇಕು. ನಮ್ಮಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ರಿಷಭ್ ಪಂತ್ ಇಬ್ರೇ ಎರಡಂಕಿ ರನ್ಸ್ ಸ್ಕೋರ್ ಮಾಡಿದ್ದು. ಉಳಿದವ್ರೆಲ್ಲಾ ಒಂದಂಕಿಗೇ ವಿಕೆಟ್ ಒಪ್ಪಿಸಿದ್ರು. ಮೆಲ್ಬೋರ್ನ್ ನಲ್ಲಿ ನಡೆದ ನಾಲ್ಕನೇ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಓಪನರ್ ಆಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಒಬ್ರೇ ಜವಾಬ್ದಾರಿಯಿಂದ ಆಡಿದ್ದು. 208 ಎಸೆತಗಳಲ್ಲಿ 84 ರನ್ ಬಾರಿಸಿದ್ರು. ರಿಷಭ್ ಪಂತ್ 30 ರನ್ ಗಳಿಸಿ ಸೆಕೆಂಡ್ ಹೈಯೆಸ್ಟ್ ಸ್ಕೋರರ್ ಎನಿಸಿಕೊಂಡ್ರು. ಇನ್ನು ರೋಹಿತ್ ಶರ್ಮಾ 9 ರನ್, ಕೆಎಲ್ ರಾಹುಲ್ 0, ವಿರಾಟ್ ಕೊಹ್ಲಿ 5, ಜಡೇಜಾ 2 ರನ್, ನಿತೀಶ್ ಕುಮಾರ್ ರೆಡ್ಡಿ 1 ರನ್, ಸುಂದರ್ 5 ರನ್, ಆಕಾಶ್ ದೀಪ್ 7 ರನ್ ಗಳಿಸಿದ್ರು. ಬುಮ್ರಾ ಮತ್ತು ಸಿರಾಜ್​ಗೆ ಖಾತೆ ತೆರೆಯೋಕೂ ಆಗ್ಲಿಲ್ಲ.

ಮತ್ತೊಮ್ಮೆ ಒಂದಂಕಿ ಮೊತ್ತಕ್ಕೆ ರೋಹಿತ್ ಶರ್ಮಾ ಔಟ್!

ಇನ್ನು ಎಂದಿನಂತೆ ರೋಹಿತ್ ಶರ್ಮಾ ಮತ್ತೊಮ್ಮೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಪರ್ಫಾಮ್ ಮಾಡಿದ್ರು. ತಮ್ಮ ಕ್ಯಾಪ್ಟನ್ಸಿಗೆ ಹಾಗೇ ವಿಶ್ವಟೆಸ್ಟ್ ಚಾಂಪಿಯನ್ ಶಿಪ್​​ಗೆ ಈ ಮ್ಯಾಚ್ ಎಷ್ಟು ಇಂಪಾರ್ಟೆಂಟ್ ಅಂತಾ ಗೊತ್ತಿದ್ರೂ ಕಮ್ ಬ್ಯಾಕ್ ಮಾಡೋಕೆ ಆಗ್ಲಿಲ್ಲ. ಕಳೆದ ಮೂರು ಪಂದ್ಯಗಳಲ್ಲಿ 5 ಇನ್ನಿಂಗ್ಸ್​ಗಳಿಂದ ಕಣಕ್ಕಿಳಿದಿರೋ ರೋಹಿತ್ ಶರ್ಮಾ ಬಿಗ್ ಸ್ಕೋರ್ ಮಾಡ್ಲೇಇಲ್ಲ. ಈ ಬಾರಿಯ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಈವರೆಗೆ ಕಲೆಹಾಕಿದ್ದು ಜಸ್ಟ್ 31 ರನ್ ಮಾತ್ರ. ಇದ್ರಲ್ಲಿ ಹೈಯೆಸ್ಟ್ ಸ್ಕೋರ್ 10 ರನ್. ಇನ್ನುಳಿದ ನಾಲ್ಕು ಇನ್ನಿಂಗ್ಸ್ ಗಳಲ್ಲಿ ಒಂದಂಕಿ ಮೊತ್ತವನ್ನ ದಾಟೇ ಇಲ್ಲ. ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಿದ್ದ ಮೆಲ್ಬೋರ್ನ್​ ಟೆಸ್ಟ್​ನಲ್ಲಂತೂ ಮೊದಲ ಇನಿಂಗ್ಸ್​ನಲ್ಲಿ 3 ರನ್​ಗಳಿಸಿದರೆ, ದ್ವಿತೀಯ ಇನಿಂಗ್ಸ್​ನಲ್ಲಿ 9 ರನ್ ಬಾರಿಸಿ ಔಟಾಗಿದ್ದಾರೆ. ಈ ಮೂಲಕ 5 ಇನಿಂಗ್ಸ್​ಗಳಿಂದ 31 ರನ್​​ಗಳಿಸಿದ್ದಾರೆ.

ಆಸ್ಟ್ರೇಲಿಯಾ ಸ್ಪಿನ್ನರ್ ಗಿಂತ ಕಡೆಯಾದ ರೋಹಿತ್!

ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ರೋಹಿತ್ ಶರ್ಮಾ ಬ್ಯಾಟಿಂಗ್ ಆಸ್ಟ್ರೇಲಿಯಾ ಸ್ಪಿನ್ನರ್ಸ್ ಗಿಂತ ಕಡೆಯಾಗಿದೆ. ಹೀಗೆ ಹೇಳಿದ್ರೆ ಬಹುಶಃ ರೋಹಿತ್ ಶರ್ಮಾ ಫ್ಯಾನ್ಸ್ ಗೆ ಹರ್ಟ್ ಆಗ್ಬೋದು. ಬಟ್ ಅದೇ ಸತ್ಯ.  ಅದನ್ನ ಒಪ್ಪಿಕೊಳ್ಳಲೇಬೇಕು. ಮೆಲ್ಬೋರ್ನ್​ ಮೈದಾನದಲ್ಲಿ ನಡೆದ ದ್ವಿತೀಯ ಇನಿಂಗ್ಸ್​​ವೊಂದರಲ್ಲೇ ಆಸ್ಟ್ರೇಲಿಯಾ ಸ್ಪಿನ್ನರ್ ನಾಥನ್ ಲಿಯಾನ್ 41 ರನ್​​ ಕಲೆಹಾಕಿದ್ದಾರೆ. ಅದು ಕೂಡ ಯಾರ್ಕರ್ ಸ್ಪೆಷಲಿಸ್ಟ್ ಜಸ್​ಪ್ರೀತ್ ಬುಮ್ರಾ ಹಾಗೂ ಅನುಭವಿ ಬೌಲರ್​ಗಳಾದ ರವೀಂದ್ರ ಜಡೇಜಾ ಹಾಗೂ ಸಿರಾಜ್ ವಿರುದ್ಧ ಬ್ಯಾಟ್ ಬೀಸೋ ಮೂಲಕ. ಅಂದರೆ ಇಲ್ಲಿ ರೋಹಿತ್ ಶರ್ಮಾ ಐದು ಇನಿಂಗ್ಸ್​ಗಳಲ್ಲಿ ಕಲೆಹಾಕಿದ ಒಟ್ಟು ಸ್ಕೋರ್​​ಗಿಂತ ನಾಥನ್ ಲಿಯಾನ್ ಒಂದೇ ಪಂದ್ಯದಲ್ಲಿ ಗಳಿಸಿದ ಸ್ಕೋರ್ ಹೆಚ್ಚಿದೆ. ಅಲ್ದೇ ಆಸ್ಟ್ರೇಲಿಯಾದ ಮತ್ತೋರ್ವ ಬೌಲರ್ ಸ್ಕಾಟ್ ಬೋಲ್ಯಾಂಡ್​ ಮೆಲ್ಬೋರ್ನ್​​​ನಲ್ಲೇ 21 ರನ್​ ಕಲೆಹಾಕಿದ್ದಾರೆ. ಹೀಗಾಗಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಬಳಿಕ ರೋಹಿತ್ ಶರ್ಮಾ ಟೀಮ್ ಇಂಡಿಯಾದಿಂದ ಹೊರಬಿದ್ದರೂ ಅಚ್ಚರಿಪಡಬೇಕಿಲ್ಲ.

7 ಇನ್ನಿಂಗ್ಸ್ ಗಳಲ್ಲಿ ಬ್ಯಾಟಿಂಗ್.. 6 ಸಲ ಒಂದೇ ರೀತಿ ಔಟಾದ ಕೊಹ್ಲಿ!

ಇನ್ನು ಕಿಂಗ್, ರನ್ ಮಷಿನ್ ಅಂತೆಲ್ಲಾ ಕರೆಸಿಕೊಳ್ಳೋ ವಿರಾಟ್ ಕೊಹ್ಲಿಯದ್ದೂ ಅದೇ ಕಥೆ.  ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 7 ಬಾರಿ ಬ್ಯಾಟ್ ಬೀಸಿದ್ದಾರೆ. ಈ ಪೈಕಿ 6 ಬಾರಿ ಒಂದೇ ರೀತಿಯಲ್ಲಿ ವಿಕೆಟ್ ಒಪ್ಪಿಸಿದ್ದಾರೆ. ಒಂದು ವಿಕೆಟ್ ಕೀಪರ್​ಗೆ, ಇಲ್ಲ ಸ್ಲಿಪ್​ ಫೀಲ್ಡರ್​ಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದ್ದಾರೆ. ನಾಲ್ಕನೇ ಪಂದ್ಯದ ಸೆಕೆಂಡ್ ಇನ್ನಿಗ್ಸ್ ನಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೊಹ್ಲಿ 5 ರನ್ ಗಳಿಸಿದ್ದಾಗ ಮಿಚೆಲ್ ಸ್ಟಾರ್ಕ್​ ಎಸೆತದಲ್ಲಿ ಸ್ಲಿಪ್​ನಲ್ಲಿದ್ದ ಉಸ್ಮಾನ್ ಖ್ವಾಜಾಗೆ ಕ್ಯಾಚ್ ನೀಡಿ ಔಟಾದ್ರು.   ಇನ್ನು ವಿರಾಟ್ ಕೊಹ್ಲಿ ಔಟಾಗದೇ ಉಳಿದಿರರೋದು ಪರ್ತ್​ನಲ್ಲಿ ನಡೆದ ಮೊದಲ ಟೆಸ್ಟ್​ನ ದ್ವಿತೀಯ ಇನಿಂಗ್ಸ್​ನಲ್ಲಿ ಮಾತ್ರ. ಆ ಇನಿಂಗ್ಸ್​ನಲ್ಲಿ 100 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದರು. ಇದನ್ನು ಹೊರತುಪಡಿಸಿ ಉಳಿದ 6 ಇನಿಂಗ್ಸ್​ಗಳಲ್ಲೂ ಕೊಹ್ಲಿ ವಿಕೆಟ್ ಹಿಂದೆ ಕ್ಯಾಚ್ ನೀಡುವ ಮೂಲಕ ಇನಿಂಗ್ಸ್  ಮುಗಿಸಿದ್ದಾರೆ.

ನಿರ್ಣಾಯಕ ಪಂದ್ಯದಲ್ಲೇ ಶೂನ್ಯ ಸುತ್ತಿದ ಕೆಎಲ್ ರಾಹುಲ್!

ಌಕ್ಚುಲಿ ಟೀಂ ಇಂಡಿಯಾ ಪರ ಮೊದಲ ಮೂರು ಮ್ಯಾಚ್​ಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಟಗಾರ ಕೆಎಲ್ ರಾಹುಲ್. ಆರಂಭಿಕರಾಗಿ ಕಣಕ್ಕಿಳಿದು ಭರವಸೆಯ ಪ್ರದರ್ಶನ ನೀಡಿದ್ರು. ಬಟ್ ನಾಲ್ಕನೇ ಪಂದ್ಯಕ್ಕೆ ರೋಹಿತ್ ಶರ್ಮಾ ಓಪನರ್ ಆದ ಬಳಿಕ ಕೆಎಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದಿದ್ರು. ಮೊದಲ ಇನ್ನಿಂಗ್ಸ್ ನಲ್ಲಿ 24 ರನ್ ಸಿಡಿಸಿದ್ದ ರಾಹುಲ್ 5ನೇ ದಿನದಾಟದಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಡಕ್ ಔಟ್ ಆದ್ರು. ಪ್ಯಾಟ್ ಕಮಿನ್ಸ್ ಎಸೆದ ಬೌನ್ಸಿ ಎಸೆತದಲ್ಲಿ ಕ್ಯಾಚ್ ಕೊಟ್ರು. ಈ ಮೂಲಕ ಭಾರತದ ಪಾಲಿನ ನಿರ್ಣಾಯಕ ಇನಿಂಗ್ಸ್​ನಲ್ಲೇ ಖಾತೆ ತೆರೆಯದೇ ನಿರಾಸೆ ಮೂಡಿಸಿದ್ರು.

ಸಿಡ್ನಿ ಪಂದ್ಯದಲ್ಲಾದ್ರೂ ಹೊಸ ಟೀಂ ಕಣಕ್ಕಿಳಿಸುತ್ತಾ ಬಿಸಿಸಿಐ?

ಭಾರತದ ಸೋಲಿಗೆ ಅಸಲಿ ಕಾರಣವೇ ಬಿಸಿಸಿಐ ನಿರ್ಧಾರ. ಒಂದು, ಎರಡು, ಮೂರು ಅಂತಾ ಸಾಲು ಸಾಲು ಪಂದ್ಯಗಳನ್ನ ಸೋಲುತ್ತಿದ್ದಾಗ ಕಳಪೆ ಪ್ರದರ್ಶನ ನಿಡ್ತಿರುವ ಪ್ಲೇಯರ್ಸ್ಗೆ ಬಿಸಿ ಮುಟ್ಟಿಸಬೇಕಿತ್ತು. ಒಂದೆರಡು ಪಂದ್ಯಗಳಲ್ಲಿ ಬೆಂಚ್ ಕಾಯಿಸಿ ಹೊಸಬರಿಗೆ ಚಾನ್ಸ್ ಕೊಡ್ಬೇಕಿತ್ತು. ಆಗ್ಲಾದ್ರೂ ಸೀನಿಯರ್ಸ್ ಕಮ್ ಬ್ಯಾಕ್ ಮಾಡ್ತಿದ್ರೋ ಏನೊ. ಆದ್ರೆ ಟೀಂ ಇಂಡಿಯಾ ಮ್ಯಾನೇಜ್​ಮೆಂಟ್ ಪದೇಪದೆ ಚಾನ್ಸ್ ಕೊಟ್ಟು ಎಡವಟ್ಟು ಮಾಡ್ಕೊಂಡಿದೆ. ಅದ್ರ ಎಫೆಕ್ಟ್ ಈಗ ಇಡೀ ತಂಡದ ಮೇಲೆಯೇ ಬೀಳ್ತಿದೆ. ಭಾರತ ಮುಖಭಂಗ ಅನುಭವಿಸುವಂತಾಗಿದೆ. ಸದ್ಯ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಇನ್ನೊಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ನಾಲ್ಕು ಪಂದ್ಯಗಳು ಮುಗಿದಿದ್ದು ಮೊದಲ ಪಂದ್ಯವನ್ನ ಭಾರತ ಗೆದ್ದಿತ್ತು. ಎರಡನೇ ಪಂದ್ಯವನ್ನ ಆಸ್ಟ್ರೇಲಿಯಾ ತನ್ನದಾಗಿಸಿಕೊಂಡಿತ್ತು. ಮೂರನೇ ಮ್ಯಾಚ್ ಡ್ರಾ ಆಗಿತ್ತು. ಇದೀಗ ಮೆಲ್ಬೋರ್ನ್ ನಲ್ಲಿ ನಡೆದ ಮ್ಯಾಚ್ ಮತ್ತೆ ಆಸ್ಟ್ರೇಲಿಯಾ ಪಾಲಾಗಿದೆ. ಈ ಮೂಲಕ 1-2 ಅಂತರದಲ್ಲಿ ಆಸ್ಟ್ರೇಲಿಯಾ ಮುನ್ನಡೆ ಸಾಧಿಸಿದೆ. ಇದೀಗ ಸಿಡ್ನಿಯಲ್ಲಿ ಜನವರಿ 3ರಿಂದ 5ನೇ ಟೆಸ್ಟ್ ಮ್ಯಾಚ್ ಆರಂಭವಾಗಿದೆ. ಅಟ್ ಲೀಸ್ಟ್ ಈ ಪಂದ್ಯವನ್ನಾದ್ರೂ ಗೆದ್ರೆ ಭಾರತ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ರೇಸ್​ನಲ್ಲಿ ಉಳಿಯಲಿದೆ. ಸೌತ್ ಆಫ್ರಿಕಾ ಈಗಾಗ್ಲೇ ಫೈನಲ್ ರೇಸ್ ಕನ್ಫರ್ಮ್ ಮಾಡಿಕೊಂಡಿರೋದ್ರಿಂದ ಇರೋದೇ ಇನ್ನೊಂದು ಪ್ಲೇಸ್. ಹಾಗೇನಾದ್ರೂ ಸಿಡ್ನಿ ಫೈಟ್​ನಲ್ಲಿ ಸೋತ್ರೆ ಡಬ್ಲ್ಯೂಟಿಸಿ ಫೈನಲ್ ಹ್ಯಾಟ್ರಿಕ್ ಕನಸು ಭಗ್ನವಾಗಲಿದೆ.

ಒಟ್ನಲ್ಲಿ ಟೀಂ ಇಂಡಿಯಾ ಸೋಲಿಗೆ ಟಾಪ್ ಆರ್ಡರ್ ಬ್ಯಾಟರ್​ಗಳ ಅಟ್ಟರ್ ಫ್ಲ್ಯಾಪ್ ಪ್ರದರ್ಶನವೇ ಕಾರಣ. ಇನ್ನಾದ್ರೂ ಟೀಂ ಇಂಡಿಯಾ ಟೆಸ್ಟ್ ಪಂದ್ಯಗಳಿಗೆ ಮೇಜರ್ ಸರ್ಜರಿ ಆಗ್ಬೇಕಿದೆ. ಸ್ಟಾರ್ ಪ್ಲೇಯರ್ಸ್ ಅಂತಾ ಪದೇ ಪದೆ ಚಾನ್ಸ್ ಕೊಡೋ ಬದ್ಲು ಹೊಸಬರಿಗೆ ಅವಕಾಶ ಕೊಡ್ಬೇಕಿದೆ. ಇಲ್ದೇ ಇದ್ರೆ ವಿಶ್ವಕ್ರಿಕೆಟ್​ನಲ್ಲಿ ಬಲಿಷ್ಠ ಭಾರತದ ಮಾನ ಮತ್ತಷ್ಟು ಹರಾಜಾಗಲಿದೆ.

Shwetha M

Leave a Reply

Your email address will not be published. Required fields are marked *