AUS ಫೈಟ್.. ಕೊಹ್ಲಿಯೇ KING -ಪರ್ತ್ ನಲ್ಲಿ ಸ್ಪೆಷಲ್ ಸೆಂಚುರಿ ಸಿಡಿಸ್ತಾರಾ?
ಕಾಂಗರೂ ನೆಲದಲ್ಲಿ ವಿರಾಟ್ ಫೀವರ್!
ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಮಹಾಕದನಕ್ಕೆ ಇನ್ನೊಂದೇ ದಿನ ಬಾಕಿ. ಆಸ್ಟ್ರೇಲಿಯಾದ ಪರ್ತ್ನಲ್ಲಿ ನಡೆಯಲಿರೋ ಪ್ರತಿಷ್ಠೆಯ ಕಾದಾಟಕ್ಕೆ ಈಗಾಗ್ಲೇ ಎರಡೂ ತಂಡಗಳೂ ಭರ್ಜರಿ ಅಭ್ಯಾಸ ನಡೆಸಿವೆ. ನ್ಯೂಜಿಲೆಂಡ್ ವಿರುದ್ಧ ಸರಣಿ ಸೋತಿರೋ ಭಾರತ ಕಾಂಗರೂ ನೆಲದಲ್ಲಿ ಗೆಲುವಿನ ಖಾತೆ ತೆರೆಯೋ ಪ್ಲ್ಯಾನ್ನಲ್ಲಿದೆ. ಬಟ್ ಈಗ ಇಡೀ ಕ್ರಿಕೆಟ್ ಲೋಕದ ಕಣ್ಣು ಕಿಂಗ್ ವಿರಾಟ್ ಕೊಹ್ಲಿ ಮೇಲೆಯೇ ನೆಟ್ಟಿದೆ. ಯಾಕಂದ್ರೆ ಆಸಿಸ್ ವಿರುದ್ಧದ ಫೈಟ್ನಲ್ಲಿ ವಿರಾಟ್ ಮೇನ್ ಹೀರೋ. ಅದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಸ್ಟಾರ್ಸ್ ಕೈಬಿಟ್ಟು ಫ್ರಾಂಚೈಸಿಗಳ ಎಡವಟ್ಟು – 5 ಪ್ಲೇಯರ್ಸ್ ಗೆ ಭರ್ಜರಿ ಡಿಮ್ಯಾಂಡ್
ತವರಿನಲ್ಲೇ ವೈಟ್ ವಾಶ್ ಮುಖಭಂಗ ಅನುಭವಿಸಿದ್ದ ಭಾರತ ತಂಡಕ್ಕೆ ಆಸ್ಟ್ರೇಲಿಯಾ ಸರಣಿ ಮಾಡು ಇಲ್ಲವೇ ಮಡಿ ಪಂದ್ಯ ಇದ್ದಂತೆ. ಬಟ್ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾ ಎರಡೆರಡು ಆಘಾತ ಅನುಭವಿಸಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ ಪರ್ಸನಲ್ ರೀಸನ್ನಿಂದ ಫಸ್ಟ್ ಮ್ಯಾಚ್ಗೆ ಗೈರಾಗಿದ್ದಾರೆ. ಹಾಗೇ ಶುಭ್ಮನ್ ಗಿಲ್ ಇಂಜುರಿಯಿಂದಾಗಿ ಹೊರಬಿದ್ದಿದ್ದಾರೆ. ಕ್ಯಾಪ್ಟನ್ಸಿ ಎಕ್ಸ್ಪೀರಿಯನ್ಸ್ ಇಲ್ಲದ ಜಸ್ಪ್ರೀತ್ ಬುಮ್ರಾಗೆ ನಾಯಕತ್ವ ನಿಡಲಾಗಿದೆ. ಹೀಗೆ ಸಾಲು ಸಾಲು ಪ್ರಾಬ್ಲಮ್ಸ್ ನಡುವೆ ಭಾರತಕ್ಕಿರೋ ಭರವಸೆ ಅಂದ್ರೆ ಅದು ಕಿಂಗ್ ಕೊಹ್ಲಿ. ಹಿಂದಿನ ಜಿದ್ದಾಜಿದ್ದಿ ಹೋರಾಟಗಳಲ್ಲಿ ಭಾರತ ತಂಡದ ಬಲ ಆಗಿರುವ ಕೊಹ್ಲಿ, ಎದುರಾಳಿ ಆಸ್ಟ್ರೇಲಿಯಾದ ಪಾಲಿಗೆ ವಿಲನ್ ಆಗಿದ್ದಾರೆ. ಈ ಸಲವೂ ಅದೇ ಕಂಟಿನ್ಯೂ ಆಗುತ್ತೆ ಅನ್ನೋದು ಕ್ರಿಕೆಟ್ ಎಕ್ಸ್ಪರ್ಟ್ಗಳ ಲೆಕ್ಕಾಚಾರ.
ವಿರಾಟ್ ಕೊಹ್ಲಿಗೆ ಫೇವರೆಟ್ ಸ್ಟೇಡಿಯಂ ಪರ್ತ್!
ಜಗತ್ತಿನಾದ್ಯಂತ ಭಾರತ VS ಆಸ್ಟ್ರೇಲಿಯಾ ಸರಣಿ ಫೀವರ್ ಆವರಿಸಿದೆ. ಪ್ರತಿಷ್ಟಿತ ಸರಣಿಯ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದ್ದು, ಸರಣಿಯಲ್ಲಿ ಶುಭಾರಂಭ ಮಾಡಲು ಎರಡೂ ತಂಡಗಳು ತುದಿಗಾಲಲ್ಲಿ ನಿಂತಿವೆ. ಕಿಂಗ್ ಕೊಹ್ಲಿಯಂತೂ ಕಾಂಗರೂಗಳ ಬೇಟೆಗೆ ಕೆರಳಿ ನಿಂತಿದ್ದಾರೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಫಸ್ಟ್ ಫೈಟ್ ನಡೀತಾ ಇರೋದು ಪರ್ತ್ ಆಪ್ಟಸ್ ಸ್ಟೇಡಿಯಂನಲ್ಲಿ. ಈ ಸ್ಟೇಡಿಯಂ ಕಿಂಗ್ ಕೊಹ್ಲಿಗೆ ವೆರಿ ವೆರಿ ಸ್ಪೆಷಲ್ ಸ್ಟೇಡಿಯಂ. ಅವರದೇ ನೆಲದಲ್ಲಿ ಆಸ್ಟ್ರೇಲಿಯಾ ತಂಡವನ್ನ ಕೊಹ್ಲಿ ತುಂಬಾ ಕಾಡಿದ್ದಾರೆ. ಅಡಿಲೇಡ್, ಸಿಡ್ನಿ, ಮೆಲ್ಬರ್ನ್ ಗಳಲ್ಲಿ ಸೆಂಚುರಿ ಸಿಡಿಸಿ ಘರ್ಜಿಸಿದ್ದಾರೆ. ಬಟ್ ಕಿಂಗ್ ಕೊಹ್ಲಿ ಫೇವರಿಟ್ ಶತಕ ಬಂದಿರೋದು ಪರ್ತ್ನಲ್ಲಿ.. ಈ ಬಗ್ಗೆ ವಿರಾಟ್ ಕೊಹ್ಲಿಯೇ ಈ ಹಿಂದೆ ಹೇಳಿಕೊಂಡಿದ್ರು. ಆಸ್ಟ್ರೇಲಿಯಾದಲ್ಲಿ ನನ್ನ ಉತ್ತಮವಾದ ಇನ್ನಿಂಗ್ಸ್ ಅಂದ್ರೆ ಅದು ಖಂಡಿತವಾಗಿ ಪರ್ತ್ ಟೆಸ್ಟ್ನ ಶತಕ. 2018/19ರ ಸರಣಿಯಲ್ಲಿ ಸಿಡಿಸಿದ ಶತಕ. ನನ್ನ ಪ್ರಕಾರ ಟೆಸ್ಟ್ ಕ್ರಿಕೆಟ್ನಲ್ಲಿ ಆಡಿದ ಕಠಿಣವಾದ ಪಿಚ್ ಅದು. ಆ ಟಫೆಸ್ಟ್ ಪಿಚ್ನಲ್ಲಿ ಶತಕ ಸಿಡಿಸಿದ್ದು ಶ್ರೇಷ್ಠವಾದದ್ದು ಎಂದು ಕೊಹ್ಲಿಯೇ ಹೇಳಿಕೊಂಡಿದ್ದಾರೆ.
ಟೆಸ್ಟ್ ನಲ್ಲಿ ಗ್ರೇಟ್ ಕಮ್ ಬ್ಯಾಕ್ ಮಾಡ್ತಾರಾ ಕಿಂಗ್ ವಿರಾಟ್?
ಹಿಂದೆಲ್ಲಾ ವಿರಾಟ್ ಮೈದಾನಕ್ಕೆ ಇಳಿದ್ರು ಅಂದ್ರೆ ಅಲ್ಲಿ ಯಾವುದೋ ಒಂದು ಹೊಸ ದಾಖಲೆ ಸೃಷ್ಟಿಯಾಗುತ್ತಿತ್ತು. ಆದ್ರೆ ಅದ್ಯಾಕೋ ಏನೂ ಕೊಹ್ಲಿ ಕಳೆದ ಕೆಲ ತಿಂಗಳುಗಳಿಂದ ಫಾರ್ಮ್ ಕಳ್ಕೊಂಡಿದ್ದಾರೆ. ಹಿಂದೆಲ್ಲಾ ಅದ್ಭುತ ಫಾರ್ಮ್ನಲ್ಲಿದ್ದ ಕೊಹ್ಲಿ ಇಂದು ರನ್ಗಳಿಕೆಗೆ ಪರದಾಡ್ತಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಕಳೆದ 60 ಇನ್ನಿಂಗ್ಸ್ಗಳಿಂದ ಕೊಹ್ಲಿ ಸಿಡಿಸಿರೋದು ಕೇವಲ 2 ಸೆಂಚುರಿ, 11 ಹಾಫ್ ಸೆಂಚುರಿ ಅಷ್ಟೇ. ಇನ್ನು ಈ ವರ್ಷವಂತೂ ಆಡಿರೋ 6 ಟೆಸ್ಟ್ಗಳಿಂದ 22.72ರ ಹೀನಾಯ ಸರಾಸರಿಯಲ್ಲಿ ರನ್ಗಳಿಸಿದ್ದಾರೆ. ಕಳಪೆ ಫಾರ್ಮ್ನ ಸುಳಿಗೆ ಸಿಲುಕಿ ಪರದಾಡ್ತಿರೋ ಕೊಹ್ಲಿ, ಇದೀಗ ಫೇವರಿಟ್ ಪರ್ತ್ನಲ್ಲಿ ಪವರ್ ತೋರಿಸ್ತಾರೆ ಅಂತಾ ಎಲ್ರೂ ಕಾಯ್ತಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ ವಿರಾಟ್!
ವಿಶ್ವಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ಬಲಿಷ್ಠ ತಂಡ. ಇಂಥಾ ತಂಡಕ್ಕೆ ವಿರಾಟ್ ಕೊಹ್ಲಿ ಸಾಕಷ್ಟು ಸಲ ನೀರು ಕುಡಿಸಿದ್ದಾರೆ. ಕೊಹ್ಲಿ 2011ರ ಬಳಿಕ ಆಸ್ಟೇಲಿಯಾದಲ್ಲಿ 13 ಟೆಸ್ಟ್ ಪಂದ್ಯಗಳನ್ನಾಡಿದ್ದು, 54.08ರ ಸರಾಸರಿಯಲ್ಲಿ 1,352 ರನ್ ಕಲೆಹಾಕಿದ್ದಾರೆ. ಇದರಲ್ಲಿ 6 ಶತಕ, 4 ಅರ್ಧ ಶತಕಗಳೂ ಒಳಗೊಂಡಿವೆ. 2014-15ರ ಸರಣಿಯ 4 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 86.50ರ ಸರಾಸರಿಯಲ್ಲಿ 4 ಶತಕಗಳನ್ನೊಳಗೊಂಡ 692 ರನ್ ಕಲೆಹಾಕಿದ್ದಾರೆ. ಒಟ್ಟಾರೆ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ನಲ್ಲಿ ಕೊಹ್ಲಿ 25 ಪಂದ್ಯಗಳನ್ನಾಡಿದ್ದು, 47.48ರ ಸರಾಸರಿಯಲ್ಲಿ 2042 ರನ್ ಗಳಿಸಿದ್ದಾರೆ. 8 ಶತಕ, 5 ಅರ್ಧಶತಕಗಳನ್ನು ಬಾರಿಸಿದ್ದಾರೆ. ಹೀಗಾಗಿ ಈ ಸಲವೂ ಅದೇ ಜಾದೂ ರಿಪೀಟ್ ಆಗುತ್ತೆ ಅನ್ನೋ ಲೆಕ್ಕಾಚಾರವೂ ಇದೆ.
ರೋಹಿತ್ ಶರ್ಮಾ ಕ್ಯಾಪ್ಟನ್ ಆದ್ರೂ ಮೆರೆಯುತ್ತಿರೋದು ಕೊಹ್ಲಿ!
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಗಿದ್ರೂ ಆಸ್ಟ್ರೇಲಿಯಾದ ಮಾಧ್ಯಮಗಳಲ್ಲಿ ವಿರಾಟ್ ಕೊಹ್ಲಿ ಗುಣಗಾನ ನಡೆದಿದೆ. ‘ಕಿಂಗ್ ಕೊಹ್ಲಿ ರಿಟರ್ನ್ಸ್’, ‘ಕೊಹ್ಲಿವುಡ್’, ‘ಲೆಜೆಂಡ್’ ಎಂದು ಕೊಹ್ಲಿಯನ್ನು ಬಣ್ಣಿಸಿವೆ. ಇನ್ನು, ಆಸೀಸ್ ತಂಡ ದಆಟಗಾರರಂತೂ ತಿಂಗಳುಗಳ ಹಿಂದೆಯೇ ಕೊಹ್ಲಿ ಬಗ್ಗೆ ಹೇಳಿಕೆ ನೀಡಲು ಶುರು ಮಾಡಿದ್ದಾರೆ. ಮಾಜಿ ಆಟಗಾರರು, ಕ್ರಿಕೆಟ್ ತಜ್ಞರು ಕೂಡಾ ಕೊಹ್ಲಿಯ ಆಟ, ಅವರನ್ನು ಕಟ್ಟಿ ಹಾಕಬೇಕಾದ ರೀತಿ, ಸರಣಿಯಲ್ಲಿ ಅವರ ಪ್ರಭಾವದ ಬಗ್ಗೆ ಮಾತನಾಡುತ್ತಿದ್ದಾರೆ. ಅಲ್ಲಿನ ಕ್ರಿಕೆಟ್ ಅಭಿಮಾನಿಗಳು ಕೂಡಾ ಕೊಹ್ಲಿ ಆಟವನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.
ಕಳೆದ ಬಾರಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ಕೊಹ್ಲಿ ತಂಡದ ನಾಯಕರಾಗಿದ್ದರು. ಈ ಬಾರಿ ಅವರು ನಾಯಕತ್ವದಲ್ಲಿಲ್ಲ. ಆದರೆ ಆಸ್ಟ್ರೇಲಿಯಾದ ಮಾಧ್ಯಮಗಳು, ಕ್ರೀಡಾ ವೆಬ್‌ಸೈಟ್‌ಗಳಲ್ಲಿ ಆಸೀಸ್ ನಾಯಕ ಕಮಿನ್ಸ್ ಜೊತೆ ಕೊಹ್ಲಿಯೇ ಮಿಂಚುತ್ತಿದ್ದಾರೆ. ಖಾಯಂ ನಾಯಕ ರೋಹಿತ್, ಹಂಗಾಮಿ ನಾಯಕರಾಗಿ ಬುಮ್ರಾ ಇದ್ದರೂ ಆಸೀಸ್ ಮಾಧ್ಯಮಗಳು ಕೊಹ್ಲಿಯ ಫೋಟೋಗಳನ್ನೇ ಬಳಸುತ್ತಿವೆ. ಒಟ್ನಲ್ಲಿ ವಿರಾಟ್ ಕೊಹ್ಲಿ ಚಾಂಪಿಯನ್ ಆಟಗಾರ. ಅವರ ದಾಖಲೆಗಳೇ ಇದನ್ನು ಸಾರಿ ಸಾರಿ ಹೇಳ್ತಿವೆ. ಇದೀಗ ಪರ್ತ್ ಟೆಸ್ಟ್ ಆರಂಭಕ್ಕೆ ಜಸ್ಟ್ ಎರಡು ದಿನಗಳು ಉಳಿದಿವೆ. ಮೊದಲ ಪಂದ್ಯಕ್ಕೆ ರೋಹಿತ್ ಆಬ್ಸೆನ್ಸ್ನಲ್ಲಿ ವಿರಾಟ್ ಕೊಹ್ಲಿ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಹೀಗಾಗಿ ಕೊಹ್ಲಿ ತಾವು ಫಾರ್ಮ್ಗೆ ಮರಳೋದ್ರ ಜೊತೆಗೆ ತಂಡದ ಗೆಲುವಿಗೂ ಶ್ರಮಿಸಲೇಬೇಕಿದೆ.