ತಿರುಪತಿಯಲ್ಲಿ ಭಕ್ತ ಸಾಗರ – 30 ಗಂಟೆ ಕಳೆದರೂ ಸಿಗದ ತಿಮ್ಮಪ್ಪನ ದರ್ಶನ!
ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭಕ್ತರ ಪ್ರವಾಹವೇ ಹರಿದುಬರುತ್ತಿದೆ. ಮಕ್ಕಳಿಗೆ ಬೇಸಿಗೆ ರಜೆ ಹಿನ್ನೆಲೆ ಕಳೆದ 2- 3 ದಿನಗಳಿಂದ ದೇಶದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದು, ಭಕ್ತರಿಗೆ ದೇವರ ದರ್ಶನ ಭಾರಿ ತಡವಾಗುತ್ತಿದೆ.
ಇದನ್ನೂ ಓದಿ: ತಿರುಪತಿ ತಿಮ್ಮಪ್ಪನಿಗೆ 4,411 ಕೋಟಿ ರೂಪಾಯಿ ಬಜೆಟ್! – ಆದಾಯ ಮೂಲ ಯಾವುದು ಗೊತ್ತಾ?
ದೇವಾಲಯದಲ್ಲಿ ಭಾರಿ ಜನದಟ್ಟಣೆ ಉಂಟಾಗಿದ್ದು, ಕಳೆದ ಮೂರು ದಿನಗಳಿಂದ ಭಕ್ತರು ದರ್ಶನ ಪಡೆಯಲು 30 ಗಂಟೆಗೂ ಹೆಚ್ಚು ಹೊತ್ತು ಸರತಿ ಸಾಲಿನಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬುಧವಾರ ಒಂದೇ ದಿನ 79,207 ಭಕ್ತಾದಿಗಳು ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಇಂದೇ ದಿನದಲ್ಲಿ ಬರೋಬ್ಬರಿ 3.19 ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಗಿದೆ ಎಂದು ಟಿಟಿಡಿ ಮಾಹಿತಿ ನೀಡಿದೆ.
ದರ್ಶನಕ್ಕಾಗಿ ಇರುವ ಎಲ್ಲ ಸರತಿ ಸಾಲುಗಳು ಭರ್ತಿಯಾಗಿದೆ. ಬೆಟ್ಟದ ಪ್ರವೇಶ ಮಾರ್ಗ ಅಲಿಪಿರಿ ಟೋಲ್‌ಗೇಟ್ ಬಳಿಯೂ ವಾಹನಗಳ ಉದ್ದನೆಯ ಸಾಲಿದೆ. ಭಕ್ತರ ದಟ್ಟಣೆಯ ಹಿನ್ನೆಲೆಯಲ್ಲಿ ಕುಡಿಯುವ ನೀರು, ಹಾಲು, ಅನ್ನಪ್ರಸಾದಕ್ಕೆ ಸೌಲಭ್ಯ ಕಲ್ಪಿಸಲು ಹೆಚ್ಚಿನ ಸಿದ್ಧತೆ ಆಗಿದೆ. ಆದರೆ, ಕೆಲ ಭಕ್ತರು ನಮಗೆ ಅನ್ನ ಪ್ರಸಾದ ವಿಳಂಬವಾಗಿ ದೊರೆಯಿತು, ಇತರೆ ಸೌಲಭ್ಯ ಸಿಗಲಿಲ್ಲ ಎಂದು ದೂರುತ್ತಿದ್ದಾರೆ.