ವಕ್ಫ್ ಮಸೂದೆ ಅಂಗೀಕಾರಕ್ಕೆ ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ ತೀವ್ರ ಆಕ್ಷೇಪ
‘ಮಸೂದೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ’

ಲೋಕಸಭೆಯಲ್ಲಿ ವಕ್ಫ್ ಮಸೂದೆ ಅಂಗೀಕಾರಕ್ಕೆ ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಮ್ಮ ಪಕ್ಷವು ಮಸೂದೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲಿದೆ ಅಂತ ತಿಳಿಸಿದ್ದಾರೆ.
ವಕ್ಫ್ ಮಸೂದೆ ಅಂಗೀಕಾರವನ್ನು ವಿರೋಧಿಸಿ ಕಪ್ಪು ಬ್ಯಾಡ್ಜ್ ಧರಿಸಿ ವಿಧಾನಸಭೆಗೆ ಬಂದ ಸಿಎಂ ಸ್ಟಾಲಿನ್, ದೇಶದಲ್ಲಿ ಬಹುಸಂಖ್ಯಾತ ಪಕ್ಷಗಳ ವಿರೋಧದ ಹೊರತಾಗಿಯೂ ಕೆಲವು ಮಿತ್ರಪಕ್ಷಗಳ ಆದೇಶದ ಮೇರೆಗೆ ತಿದ್ದುಪಡಿಯನ್ನು ಅಂಗೀಕರಿಸುವುದು ಸಂವಿಧಾನದ ರಚನೆಯ ಮೇಲಿನ ದಾಳಿಯೆಂದು ಹೇಳಿದ್ದಾರೆ.
ಇದು ಧಾರ್ಮಿಕ ಸಾಮರಸ್ಯವನ್ನು ಕದಡುವ ಕೃತ್ಯ. ಇದನ್ನು ಎತ್ತಿ ತೋರಿಸಲು, ನಾವು ಇಂದಿನ ವಿಧಾನಸಭೆ ಕಲಾಪಗಳಲ್ಲಿ ಕಪ್ಪು ಬ್ಯಾಡ್ಜ್ ಧರಿಸಿ ಭಾಗವಹಿಸುತ್ತಿದ್ದೇವೆ ಎಂದು ಸದನ ಸದಸ್ಯರಿಗೆ ತಿಳಿಸಿದ್ದಾರೆ.
ಈ ವಿವಾದಾತ್ಮಕ ತಿದ್ದುಪಡಿಯ ವಿರುದ್ಧ ಡಿಎಂಕೆ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಗುವುದು. ವಕ್ಫ್ ಮಂಡಳಿಯ ಸ್ವಾಯತ್ತತೆಯನ್ನು ನಾಶಪಡಿಸುವ ಮತ್ತು ಅಲ್ಪಸಂಖ್ಯಾತ ಮುಸ್ಲಿಂ ಜನಸಂಖ್ಯೆಗೆ ಬೆದರಿಕೆ ಹಾಕುವ ಕೇಂದ್ರ ಸರ್ಕಾರದ ಕಾನೂನಿನ ವಿರುದ್ಧ ತಮಿಳುನಾಡು ಹೋರಾಡಲಿದೆ ಎಂದು ಸ್ಟಾಲಿನ್ ಹೇಳಿದಾಗ ಡಿಎಂಕೆ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.